Advertisement

ಚನ್ನಮ್ಮ ಹೆಸರು ಉಳಿಯುವಂತೆ ಮಾಡಿ

12:35 PM Oct 24, 2019 | Naveen |

ದಾವಣಗೆರೆ: ವೀರ ರಾಣಿ ಕಿತ್ತೂರು ಚನ್ನಮ್ಮನ ಹೆಸರಿನಲ್ಲಿ ಅನಾಥಾಶ್ರಮ ನಿರ್ಮಾಣ ಒಳಗೊಂಡಂತೆ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಚನ್ನಮ್ಮನ ಹೆಸರು ಸದಾ ಉಳಿಯುವಂತೆ ಮಾಡಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಹಗರಿಬೊಮ್ಮನಹಳ್ಳಿ ಶಾಖಾ ಮಠದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ ಆಶಿಸಿದ್ದಾರೆ.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಸಂಯುಕ್ತಾಶ್ರಯದಲ್ಲಿ ಬುಧವಾರ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕಿತ್ತೂರು ರಾಣಿ ಚನ್ನಮ್ಮ ತನ್ನ ರಾಜ್ಯದ ಉಳಿವಿಗಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಪ್ರಪ್ರಥಮ ವೀರ ಮಹಿಳೆ. ಸೂರ್ಯ ಮುಳುಗದ ನಾಡಿನವರು ಎಂದೇ ಕರೆಯಲ್ಪಡುತ್ತಿದ್ದ ಬ್ರಿಟಿಷರನ್ನ ಸದೆ ಬಡಿಯುವ ಮೂಲಕ ಇಡೀ ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡಿದ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಎಂದು ಸ್ಮರಿಸಿದರು. ಕಿತ್ತೂರು ರಾಣಿ ಚನ್ನಮ್ಮ ದೇಶ ಸೇವೆಗಾಗಿ ತನ್ನ ಪ್ರಾಣಾರ್ಪಣೆ ಮಾಡಿದ ಕಾರಣಕ್ಕೆ ಈಗಲೂ ಸ್ಮರಿಸುತ್ತೇವೆ. ತ್ಯಾಗ ಮಾಡಿದಂತಹವರು ಪೂಜಿಸಲ್ಪಡುತ್ತಾರೆ ಎಂಬುದಕ್ಕೆ ಕಿತ್ತೂರು ರಾಣಿ ಚನ್ನಮ್ಮ ಸಾಕ್ಷಿ ಎಂದು ತಿಳಿಸಿದರು.

ತಮಗಾಗಿ ಅಲ್ಲದೆ ಬೇರೆಯವರ ಜೀವನಕ್ಕಾಗಿ ತ್ಯಾಗ ಮಾಡಿದಂತಹವರ ಹೆಸರು ಯಾವುದೇ ಕಾರಣಕ್ಕೂ ಅಳಿಯಬಾರದು. ಸದಾ ಉಳಿಯುವಂತಾಗಬೇಕು. ಆ ಕಾರಣಕ್ಕಾಗಿಯೇ ಹರಿಹರದ ಪೀಠದಲ್ಲಿ ಪ್ರತಿ ನಿತ್ಯ ನಡೆಯುವ ದಾಸೋಹ ಜಾಗಕ್ಕೆ ಕಿತ್ತೂರು ರಾಣಿ ಚನ್ನಮ್ಮ ದಾಸೋಹ ಭವನ ಎಂದು ನಾಮಕರಣ ಮಾಡಬೇಕು ಎಂದು ಸಮಾಜದ ಮುಖಂಡರಿಗೆ ತಿಳಿಸಿದರು.

ಜೀವನದಲ್ಲಿ ಪರೋಪಕಾರ ಮಾಡಬೇಕು. ಕಿತ್ತೂರು ರಾಣಿ ಚನ್ನಮ್ಮ ಸಹ ತಮ್ಮ ಜೀವನವನ್ನು ಪರೋಪಕಾರಕ್ಕಾಗಿ ಮೀಸಲಿಟ್ಟವರು. ಧೈರ್ಯವೇ ಜೀವನದ ಸಾಧನ ಎಂದು ಪರಾಕ್ರಮ ತೋರಿದಂತಹ ಅಂತಹ ಮಹಾನ್‌ ಮಾತೆಯ ಹೆಸರನ್ನು ಒಬ್ಬ ಹೆಣ್ಣು ಮಗುವಿಗಾದರೂ ಇಡಬೇಕು. ಆ ಮೂಲಕ ಆ ತಾಯಿಯ ಹೆಸರು ಸದಾ ಉಳಿಯುವಂತಹ ಕಾರ್ಯಕ್ಕೆ ಮುಂದಾಗಬೇಕು ಎಂದು ಆಶಿಸಿದರು.

Advertisement

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷ ಬಿ.ಸಿ. ಉಮಾಪತಿ ಮಾತನಾಡಿ, ಅ.23 ಕಿತ್ತೂರು ರಾಣಿ ಚನ್ನಮ್ಮನವರ ಜಯಂತಿ ಅಲ್ಲ. 1824ರ ಅ.23 ರಂದು ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಥ್ಯಾಕರೆ ಮತ್ತವರ ಸೈನಿಕರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮನ ಸೈನ್ಯ ವಿಜಯ ಸಾಧಿಸಿದ ದಿನ. ಆದರೂ, ಸರ್ಕಾರ ಎಲ್ಲಾ ಜಯಂತಿ ಮಾಡುವಂತೆ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಎಂದೇ ಆಚರಿಸುತ್ತಿದೆ. ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಬದಲಾಗಿ ವಿಜಯೋತ್ಸವ ಆಚರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

1994ರಲ್ಲಿ ವೀರಶೈವ ಪಂಚಮಸಾಲಿ ಸಂಘ ಅಸ್ತಿತ್ವಕ್ಕೆ ಬಂದ ನಂತರ ಪ್ರತಿ ವರ್ಷ ಅ.23 ರಂದು ಎಲ್ಲಾ ಕಡೆ ಕಿತ್ತೂರು ರಾಣಿ ಚನ್ನಮ್ಮನವರ ವಿಜಯೋತ್ಸವ ಆಚರಿಸಲಾಗುತ್ತಿದೆ. ಸಂಘ ಪ್ರಾರಂಭವಾಗಿ 25 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಬೆಳ್ಳಿ ಬೆಡಗು… ಎಂಬ ಕಾರ್ಯಕ್ರಮವನ್ನ ಎಲ್ಲಾ ಜಿಲ್ಲಾ, ತಾಲೂಕುಗಳಲ್ಲಿ ಆಚರಿಸಲಾಗುತ್ತಿದೆ. ಹರಿಹರ ಪೀಠದಲ್ಲಿ ದೊಡ್ಡ ಕಾರ್ಯಕ್ರಮ ಆಚರಿಸಲಾಗುವುದು ಎಂದು ತಿಳಿಸಿದರು.

ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ ಸಂಘದ ಮನವಿಗೆ ಸ್ಪಂದಿಸಿ ಅ.23 ರಿಂದ 25ರ ವರೆಗೆ ಕಿತ್ತೂರಿನಲ್ಲಿ ಉತ್ಸವ ಪ್ರಾರಂಭಿಸಿದರು. ರಜಾರಹಿತವಾಗಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ ಮಾಡಲಾಗುತ್ತಿದೆ. ಮುಂದಿನ ವರ್ಷ ಜಿಲ್ಲಾಡಳಿತ ಇನ್ನೂ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸುವಂತಾಗಬೇಕು. ವೀರಶೈವ ಪಂಚಮಸಾಲಿ ಸಮಾಜ ಬೆನ್ನಲುಬಾಗಿ ನಿಲ್ಲಲಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಬಿ. ಆನಂದ್‌ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಶೀನಾಥ್‌, ಯುವ ಘಟಕದ ಅಧ್ಯಕ್ಷ ಮಂಜುನಾಥ್‌ ಪುರವಂತರ್‌, ಮಹಿಳಾ ಘಟಕದ ನೀಲಗುಂದ ಜಯಮ್ಮ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ. ಪಾಲಾಕ್ಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಲಕ್ಷ್ಮಿದೇವಿ ಇತರರು ಇದ್ದರು.

ಶೃತಿ ಮತ್ತು ಪ್ರಕಾಶ್‌ ನಾಡಗೀತೆ ಹಾಡಿದರು. ಓಂಕಾರಮ್ಮ ನಿರೂಪಿಸಿದರು. ವೇದಿಕೆ ಕಾರ್ಯಕ್ರಮದ ಮುನ್ನ ಅರುಣಾ ಚಿತ್ರಮಂದಿರದಿಂದ ವಿವಿಧ ಭಾಗದಲ್ಲಿ ಬೈಕ್‌ ರ್ಯಾಲಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next