Advertisement

ಕೋವಿಡ್ ವಾರಿಯರ್ಸ್‌ ಶ್ರಮ ಅಪಾರ: ಜಿಲ್ಲಾಧಿಕಾರಿ

04:15 PM Jun 04, 2020 | Team Udayavani |

ದಾವಣಗೆರೆ: ಕೋವಿಡ್ ವಾರಿಯರ್ಸ್‌ ನಿರಂತರ, ಕಠಿಣ ಪರಿಶ್ರಮದ ಫಲವಾಗಿ ಕೋವಿಡ್ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ ತಿಳಿಸಿದ್ದಾರೆ.

Advertisement

ಜಿಲ್ಲಾಡಳಿತ, ಜಿಪಂ ಶ್ರೀಹರ ಮ್ಯೂಸಿಕಲ್‌ ವರ್ಲ್ಡ್, ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಬುಧವಾರ ಜಿಲ್ಲಾಡಳಿತದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಧ್ವನಿಸುರುಳಿ ಬಿಡುಗಡೆ ಮತ್ತು ಕೋವಿಡ್ ವಾರಿಯರ್ಸ್‌ಗೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮೂರಕ್ಕೇರಿ ನಂತರ ಸೊನ್ನೆಗಿಳಿದು ಮತ್ತೆ ಎರಡರಿಂದ ಆರಂಭವಾಗಿ ಹೆಚ್ಚಿನ ಪ್ರಕರಣ ಪತ್ತೆಯಾದಾಗ ಜನರು ಬೇರೆ ರೀತಿಯಲ್ಲಿ ಮಾತನಾಡಿಕೊಂಡರು. ನನ್ನನ್ನೂ ಒಳಗೊಂಡಂತೆ ಪೌರ ಕಾರ್ಮಿಕರಿಂದ ಹಿಡಿದು ಎಸ್ಪಿಯವರೆಗೆ ಎಲ್ಲರೂ ಒಂದಾಗಿ ಹಗಲೂ ರಾತ್ರಿ ಕೆಲಸ ಮಾಡಿರುವ ಕಾರಣದಿಂದ ಕೋವಿಡ್ ಈಗ ನಿಯಂತ್ರಣದಲ್ಲಿರುವುದಕ್ಕೆ ಎಲ್ಲಾ ಕೋವಿಡ್ ವಾರಿಯರ್ಸ್‌ ಕಾರಣ ಎಂದರು.

ಕೆಲವರು ಕಂಟೈನ್‌ಮೆಂಟ್‌ ವಲಯದ ಒಳಗೆ ಹೋಗಲು ಹೆದರುತ್ತಿದ್ದರು. ಗಂಭೀರ ಪರಿಸ್ಥಿತಿ ಇದ್ದರೂ ಎ್ಲರೂ ಹಗಲು -ರಾತ್ರಿ ಅಂಜದೆ, ಅಳುಕದೆ ಕೆಲಸ ಮಾಡುತ್ತಿದ್ದೇವೆ. ಕೋವಿಡ್ ವಿರುದ್ಧದ ಇನ್ನೂ ಯುದ್ಧ ಬಹಳ ಇದೆ. ಈಗಿನದು ಮುಂಬರುವ ಯುದ್ಧಕ್ಕೆ ಸಿದ್ಧತೆ ಕೆಲಸ. ಐನೂರಲ್ಲ, ಸಾವಿರ ಕೊರೊನಾ ಕೇಸ್‌ ಬಂದರೂ ನಿಭಾಯಿಸಲು ನಮ್ಮವರು ಸಮರ್ಥರಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ, ಇಡೀ ಭೂಮಂಡಲ ವ್ಯಾಪಿಸಿರುವ ಕೋವಿಡ್ ಗೆ  ಔಷಧಿ ಇಲ್ಲವೇ ಲಸಿಕೆ ಕಂಡು ಹಿಡಿಯುವವರೆಗೂ ಸಮಸ್ಯೆ ಬಗೆಹರಿಯುವುದಿಲ್ಲ. ನಿಯಂತ್ರಣದಲ್ಲಿದೆ ಎಂದು ಮೈ ಮರೆಯುವಂತಿಲ್ಲ. ನಮ್ಮ ಮೇಲೆ ಸರ್ಕಾರ ವಿಶ್ವಾಸ ಹೊಂದಿದೆ ಹಾಗೂ ಜವಾಬ್ದಾರಿ ನೀಡಿದೆ. ಇನ್ನೂ ಹೆಚ್ಚಿನ ಹುಮ್ಮಸ್ಸಿನಿಂದ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಮಾತನಾಡಿ, ಸರ್ಕಾರಿ ನೌಕರು ಹಗಲಿರುಳೂ ಕೆಲಸ ಮಾಡಿದ ಕಾರಣದಿಂದಾಗಿ ಕೋವಿಡ್ ಈಗ ನಿಯಂತ್ರಣಕ್ಕೆ ಬಂದಿದೆ. ಲಾಕ್‌ಡೌನ್‌ ಹೇರಿಕೆಯ ನಂತರ ಅಧಿಕಾರಿಗಳು ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಸೇವೆ, ಕಾಯಕ ಹಾಗೂ ಸಹಕಾರದಲ್ಲಿ ಸರ್ಕಾರಿ ನೌಕರರು ಇತರರಿಗಿಂತ ಒಂದು ಹೆಜ್ಜೆ ಮುಂದಿದ್ದೇವೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಪೂಜಾರ್‌ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ಡಾ| ಮಮತಾ ಹೊಸಗೌಡರ್‌, ವಿಶ್ವನಾಥ ಮುದಜ್ಜಿ, ಡಿಡಿಪಿಐ ಪರಮೇಶ್ವರಪ್ಪ, ಮೋಹನ್‌ ಕುಮಾರ್‌, ಶಿವಣ್ಣ, ಕಲ್ಲೇಶಪ್ಪ, ಮಾರುತಿ ಇತರರು ಇದ್ದರು. ರೇವತಿ ಪ್ರಾರ್ಥಿಸಿದರು. ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ. ಪಾಲಾಕ್ಷ ಸ್ವಾಗತಿಸಿದರು. ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ| ಉಮೇಶ್‌ ರಚಿಸಿರುವ ಕೊರೊನಾ ಇದು ಸರೀನಾ… ಹಾಡಿನ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next