ದಾವಣಗೆರೆ: ಎಪಿಎಂಸಿ, ಭೂ ಸೂಧಾರಣೆ, ವಿದ್ಯುತ್ ಮತ್ತು ಬೀಜ ಕಾಯ್ದೆ ತಿದ್ದುಪಡಿ ವಿರೋಧಿಸಿ ಜೂ. 29 ಮತ್ತು 30 ರಂದು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ 10:30ಕ್ಕೆ ಹೊನ್ನೂರು ಗ್ರಾಮ ಪಂಚಾಯತ್, 30 ರಂದು ಅಣಜಿ, ಹೆಬ್ಟಾಳು, ಆವರಗೊಳ್ಳ, ಅಣಬೇರು, ಮಾಯಕೊಂಡ, ಆನಗೋಡು ಇತರೆ ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬಿಜೆಪಿ ನೇತೃತ್ವದ ಕೇಂದ್ರ, ರಾಜ್ಯ ಸರ್ಕಾರಗಳು ಕೋವಿಡ್ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಲಾಕ್‌ಡೌನ್ ಪರಿಸ್ಥಿತಿಯಲ್ಲೇ ರೈತರು, ಜನಸಾಮಾನ್ಯರು, ಕಾರ್ಮಿಕರಿಗೆ ಮರ್ಮಾಘಾತ ನೀಡುವ ಎಪಿಎಂಸಿ, ಭೂ ಸೂಧಾರಣೆ, ವಿದ್ಯುತ್ ಮತ್ತು ಬೀಜ ಕಾಯ್ದೆ ತಿದ್ದುಪಡಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿವೆ. ಕೂಡಲೇ ಎಲ್ಲಾ ತಿದ್ದುಪಡಿ ಹಿಂದಕ್ಕೆ ಪಡೆಯಬೇಕು ಮತ್ತು ಜನರಿಗೆ ಸರ್ಕಾರದ ನೀತಿಗಳು, ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್‌ಗಳ ಎದುರು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಊಳುವವನೆ ಒಡೆಯ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ವಿದೇಶಿ ಕಂಪನಿಗಳು, ಬಂಡವಾಳಶಾಹಿಗಳು ರೈತರ ಜಮೀನು ಖರೀದಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಬಿಜೆಪಿ ಸರ್ಕಾರ ಬಂದಾಗಲೇ ಉದ್ಯೋಗ ಮಿತ್ರ ಎಂದು ಹುಟ್ಟು ಹಾಕಲಾಗುತ್ತದೆ. ನೀರಾವರಿ ಪ್ರದೇಶ ಹೊರತುಪಡಿಸಿ ಎಂದು ಸರ್ಕಾರ ಹೇಳಿದೆ. ಯಾವ ನೀರಾವರಿ ಪ್ರದೇಶ ಎಂದು ಸರ್ಕಾರಕ್ಕೇ ಕಾಯ್ದೆ ತಿದ್ದುಪಡಿಯಲ್ಲಿ ಗೊಂದಲ ಇದೆ. 13 ಲಕ್ಷ ಬೀಳು ಜಮೀನಿದೆ ಎಂದು ಸರ್ಕಾರ ಹೇಳಿದೆ. ಕೆಲವು ಕಡೆ ದನ ಮೇಯಿಸಲಿಕ್ಕೂ ಜಾಗ ಇಲ್ಲದಂತೆ ಉಳುಮೆ ಮಾಡಲಾಗುತ್ತದೆ. ಯಾವ ಆಧಾರದಲ್ಲಿ 13 ಲಕ್ಷ ಬೀಳು ಜಾಗ ಇದೆ ಎಂದು ಪ್ರಶ್ನಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಆವರಗೆರೆ ಎಚ್.ಜಿ. ಉಮೇಶ್, ಚಿಕ್ಕನಹಳ್ಳಿ ರೇವಣಸಿದ್ದಪ್ಪ, ಪಾಲವನಹಳ್ಳಿ ಪ್ರಸನ್ನಕುಮಾರ್, ಇ. ಶ್ರೀನಿವಾಸ್, ಅಣಬೂರು ತಿಪ್ಪೇಸ್ವಾಮಿ, ಐರಣಿ ಚಂದ್ರು, ಮಂಜುನಾಥ್ ಕೈದಾಳೆ, ಸತೀಶ್ ಅರವಿಂದ್, ಆದಿಲ್ ಖಾನ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ವಿದ್ಯುತ್ ಕಾಯ್ದೆ ತಿದ್ದುಪಡಿ ರೈತರಿಗೆ ಮಾರಕವಾಗಲಿದೆ. ಫ್ರಾಂಚೈಸಿ ಮೂಲಕ ವಿದ್ಯುತ್ ಸರಬರಾಜು ಮಾಡಿ, ಖಾಸಗೀಕರಣ ಮಾಡುವ ಹುನ್ನಾರ ಇದೆ. ಎಪಿಎಂಸಿ, ಬೀಜ ಕಾಯ್ದೆ ರೈತರಿಗೆ ಮುಂದೆ ಭಾರೀ ದುಷ್ಪರಿಣಾಮ ಬೀರಲಿವೆ. ಹಾಗಾಗಿ ಎಲ್ಲಾ ಕಾಯ್ದೆಗಳ ತಿದ್ದುಪಡಿ ಕೈ ಬಿಟ್ಟು,ಕೆಲ ಲೋಪದೋಷ ಸರಿಪಡಿಸಿ ಹಿಂದಿನ ಕಾಯ್ದೆ ಗಳನ್ನೇ ಮುಂದುವರಿಸಬೇಕು.
ಹುಚ್ಚವ್ವನಹಳ್ಳಿ ಮಂಜುನಾಥ್,
ರೈತ ಸಂಘ- ಹಸಿರು ಸೇನೆ ರಾಜ್ಯಾಧ್ಯಕ್ಷ