Advertisement
ಮಾ.22 ರ ಭಾನುವಾರ ಜನರಿಂದ ಜನರಿಗೋಸ್ಕರ ಜನರೇ ಹೇರುಕೊಳ್ಳುವ ಸ್ಪಯಂ ಜನತಾ ಕರ್ಫ್ಯೂ ಸಂದರ್ಭದಲ್ಲಿ ವ್ಯಕ್ತವಾದ ಸ್ಪಂದನೆಯಂತೆ ಪ್ರಥಮ ಭಾನುವಾರದ ಲಾಕ್‌ಡೌನ್‌ಗೆ ದಾವಣಗೆರೆ ಜನರಿಂದ ಉತ್ತಮ ಸ್ಪಂದನೆ ದೊರೆಯಿತು. ಸಾರ್ವಜನಿಕರು, ವ್ಯಾಪಾರಿಗಳು, ಹೋಟೆಲ್ ಮಾಲಿಕರು, ಆಟೋರಿಕ್ಷಾ, ಖಾಸಗಿ ನಗರ ಸಾರಿಗೆ ಬಸ್ ಮಾಲಿಕರು, ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಅಂಗಡಿ, ಹೋಟೆಲ್, ಆಟೋರಿಕ್ಷಾ, ಬಸ್ ಸಂಚಾರ ನಿಲ್ಲಿಸುವ ಮೂಲಕ ಸರ್ಕಾರದ ಪ್ರಯತ್ನಕ್ಕೆ ಸಹಕಾರ ನೀಡಿದರು. ಹಲವಾರು ದಿನಗಳಿಂದಲೂ ಜನರು ಭಾನುವಾರದ ಲಾಕ್‌ಡೌನ್ ಬಗ್ಗೆಯೇ ಚರ್ಚೆ ನಡೆಸುತ್ತಿದ್ದರು. ಸರ್ಕಾರ ಲಾಕ್‌ಡೌನ್ ಮಾಡುತ್ತಿರುವುದು ಸೂಕ್ತ ಎಂಬ ಸಾರ್ವತ್ರಿಕ ಅಭಿಪ್ರಾಯದಂತೆ ಎಲ್ಲಾ ಕಡೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು.
Related Articles
Advertisement
ಲಾಕ್‌ಡೌನ್ ಉಲ್ಲಂಘಿಸಿ, ಮಾಸ್ಕ್ ಇಲ್ಲದೆ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದರು. ಕೆಲವರಿಗೆ ಬುದ್ಧಿ ಹೇಳಿ ವಾಪಸ್ ಕಳಿಸಿದರು. ಮಾಸ್ಕ್ ಧರಿಸುವಂತೆ ಸೂಚಿಸಿದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸದಾ ಜನರಿಂದ ತುಂಬಿ ತುಳುಕಿರುತ್ತಿದ್ದ ಅಶೋಕ ರಸ್ತೆ, ಹಳೆ ಪಿಬಿ ರಸ್ತೆ, ಮಹಾನಗರ ಪಾಲಿಕೆ ರಸ್ತೆ, ಹದಡಿ ರಸ್ತೆ, ಜಿಲ್ಲಾ ಆಸ್ಪತ್ರೆ, ವಿದ್ಯಾನಗರ ಮುಖ್ಯ ರಸ್ತೆ, ಶಾಮನೂರು ರಸ್ತೆ, ಕೆ.ಆರ್. ರಸ್ತೆ, ಮಂಡಿಪೇಟೆ, ಬಂಬೂಬಜಾರ್, ಹೊಂಡದ ವೃತ್ತ, ಕೊಂಡಜ್ಜಿ ರಸ್ತೆ… ಹೀಗೆ ಹಲವಾರು ರಸ್ತೆ, ಪ್ರಮುಖ ವೃತ್ತದಲ್ಲಿ ಅಕ್ಷರಶಃ ನಿಶ್ಯಬ್ದ. ಜನರೇ ಇಲ್ಲವೇ… ಎನ್ನುವಂತಹ ವಾತಾವರಣ ಇತ್ತು.
ಕೆಎಸ್ಸಾರ್ಟಿಸಿ ಘಟಕ ಎಲ್ಲಾ ಬಸ್ ಸಂಚಾರ ನಿಲ್ಲಿಸಿದ್ದರ ಪರಿಣಾಮ ಸಾರಿಗೆ ಬಸ್ ನಿಲ್ದಾಣದಲ್ಲಿ ಸಿಬ್ಬಂದಿ, ಅಧಿಕಾರಿಗಳು ಹೊರತುಪಡಿಸಿ ಬೇರೆ ಯಾರೂ ಕಾಣಸಿಗಲಿಲ್ಲ. ದಾವಣಗೆರೆಗೆ ಇತರೆ ಕಡೆಯಿಂದ ಬಂದು, ಹೋಗುವ ಬಸ್ ಬರಲಿಲ್ಲ. ದಾವಣಗೆರೆ ಘಟಕದಿಂದ ಯಾವುದೇ ಬಸ್ ಹೊರ ಬರಲಿಲ್ಲ. ನಗರ ಸಾರಿಗೆ ಸಹ ನಿಲ್ಲಿಸಲಾಗಿತ್ತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯಿಂದಲೇ ಸಾರಿಗೆ ಬಸ್‌ಗಳ ಸಂಚಾರ ನಿಲ್ಲಿಸಲಾಗಿತ್ತು. ದಾವಣಗೆರೆ- ಹರಿಹರ ಡಿಪೋಗಳ 360 ಬಸ್‌ಗಳಲ್ಲಿ 180 ಬಸ್‌ಗಳು ಮಾತ್ರ ಸಂಚರಿಸುತ್ತಿದ್ದು, ಆ ಎಲ್ಲಾ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಲಾಕ್‌ಡೌನ್, ಕೊರೊನಾ ಹಾವಳಿಯಿಂದ ಜಿಲ್ಲೆಯಲ್ಲಿ ಶೇ.40 ರಷ್ಟು ಬಸ್ ಮಾತ್ರ ಸಂಚರಿಸುತ್ತಿವೆ.
ಮಾ. 22 ರಿಂದ ಖಾಸಗಿ ಬಸ್ ಸಂಚಾರ ಜಿಲ್ಲೆಯಲ್ಲಿ ಇಲ್ಲವೇ ಇಲ್ಲದಂತಾಗಿದೆ. ಭಾನುವಾರ ಸಂತೆ ರದ್ದುಗೊಳಿಸಿದ್ದರ ಪರಿಣಾಮ ಸಂತೆಗೆ ಎಂದಿನಂತೆ ಬರುವ ವ್ಯಾಪಾರಸ್ಥರು ತೊಂದರೆ ಅನುಭವಿಸುವಂತಾಯಿತು. ಸಂಜೆ ಆಗುತ್ತಿದ್ದಂತೆ ಜನರ ಸಂಚಾರ ತೀರಾ ವಿರಳವಾಗಿತ್ತು. ಒಟ್ಟಾರೆ ಪ್ರಥಮ ಭಾನುವಾರದ ಲಾಕ್‌ಡೌನ್‌ಗೆ ದಾವಣಗೆರೆಯಲ್ಲಿ ನಿರೀಕ್ಷೆಗೂ ಮೀರಿದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.