ದಾವಣಗೆರೆ: ಗುತ್ತಿಗೆದಾರರಿಂದ ಲಂಚ ಸ್ವೀಕರಿಸುತ್ತಿದ್ದ ಹರಿಹರ ನಗರಸಭೆಯ 5ನೇ ವಾರ್ಡ್ ಸದಸ್ಯೆ, ಪತಿ, ಪುತ್ರ ಮತ್ತು ಇಂಜಿನಿಯರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ನಗರಸಭೆಯ ಐದನೇ ವಾರ್ಡ್ ಸದಸ್ಯೆ ನಾಗರತ್ನ, ಅವರ ಪತಿ ಮಂಜುನಾಥ, ಪುತ್ರ ಡಾ. ರೇವಂತ, ಇಂಜಿನಿಯರ್ ಹಮೀದ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದವರು.
ಹರಿಹರ ನಗರಸಭೆ ವ್ಯಾಪ್ತಿಯ ಐದನೇ ವಾರ್ಡ್ ನಲ್ಲಿ ಗುತ್ತಿಗೆದಾರ ಮಜೀದ್ ಎಂಬುವರ ಮಾಡಿದ್ದ ಕಾಮಗಾರಿಗಳ ಬಿಲ್ ನೀಡಲು ಸದಸ್ಯೆ ನಾಗರತ್ನ ಶೇ. 10 ಕಮಿಷನ್ ಗೆ ಬೇಡಿಕೆಯಿಟ್ಟಿದ್ದರು. ಅದಕ್ಕೆ ಅವರ ಪತಿ, ಪುತ್ರ ಮತ್ತು ನಗರಸಭೆ ಇಂಜಿನಿಯರ್ ಒತ್ತಡ ಹಾಕಿದ್ದರು.
ಈ ಬಗ್ಗೆ ಮಜೀದ್ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಶುಕ್ರವಾರ ಬೆಳಗ್ಗೆ ಸದಸ್ಯೆ ಗುತ್ತಿಗೆದಾರ ಮಜೀದ್ ಅವರಿಂದ 20 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ನಾಗರತ್ನ ಅವರ ಪತಿ ದಾವಣಗೆರೆಯಲ್ಲಿ ಬ್ಯಾಂಕ್ ಉದ್ಯೋಗಿ. ಪುತ್ರ ವೈದ್ಯರಾಗಿದ್ದಾರೆ. ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದವರು ಬಂಧನಕ್ಕೆ ಒಳಗಾಗಿರುವುದು ವಿಶೇಷ.
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.