Advertisement

Davangere: ತನ್ನ ಮನೆಯಲ್ಲೇ ಕಳ್ಳತನ ಮಾಡಿ, ಕಥೆ ಸೃಷ್ಟಿಸಿ ದೂರು ನೀಡಿದ್ದ ಯುವತಿ ಬಂಧನ

08:34 PM Oct 08, 2024 | Team Udayavani |

ದಾವಣಗೆರೆ: ತನ್ನ ಮನೆಯಲ್ಲೇ ಕಳ್ಳತನ ಮಾಡಿ ಯಾರೋ ಅಪರಿಚಿತರು ಪ್ರಜ್ಞೆ ತಪ್ಪಿಸಿ ನಗದು, ಚಿನ್ನಾಭರಣ ಕದ್ದೊಯ್ದಿದ್ದಾರೆ ಎಂದು ಕಳ್ಳತನದ ಕಥೆ ಸೃಷ್ಟಿಸಿ ದೂರು ನೀಡಿದ್ದ ಯುವತಿ ಹಾಗೂ ಕಳ್ಳತನಕ್ಕೆ ಸಹಕರಿಸಿದ್ದವನನ್ನು ಬಂಧಿಸಿರುವ ಚನ್ನಗಿರಿ ಪೊಲೀಸರು 1.27 ಲಕ್ಷ ನಗದು, 10.77 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

Advertisement

ಕಳ್ಳತನದ ಕಥೆ ಸೃಷ್ಟಿಸಿದ್ದ ಚನ್ನಗಿರಿ ತಾಲೂಕಿನ ಅಗರಬನ್ನಿಹಟ್ಟಿ ಗ್ರಾಮದ ತಸ್ಮೀಯಖಾನಂ(26), ಹಾಗೂ ಅವರ ಕುಟುಂಬದ ನಿಕಟವರ್ತಿ ಬೆಂಗಳೂರಿನ ರಾಜಾಜಿನಗರ ನಿವಾಸಿ ಮುಜೀಬುಲ್ಲಾ ಶೇಖ್ ಅಲಿಯಾಸ್ ಜಾಕೀರ್(42) ಬಂಧಿತರು.

ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಗರಬನ್ನಿಹಟ್ಟಿ ಗ್ರಾಮದ ಅಮಾನುಲ್ಲಾ ಎಂಬವರ ಮಗಳು ತಸ್ಮೀಯ ಖಾನಂ ಸೆ.30 ರಂದು ತಾನು ಮನೆಯಲ್ಲಿ ಒಬ್ಬಳೇ ಇದ್ದ ಸಮಯದಲ್ಲಿ ಯಾರೋ ಒಬ್ಬ ವ್ಯಕ್ತಿ ಮನೆಯೊಳಗೆ ಬಂದು ಮುಖಕ್ಕೆ ಬಾಯಿಂದ ಊದಿ, ನಂತರ ನೀರಿನಂತ ದ್ರವ ಚಿಮುಕಿಸಿದ್ದರಿಂದ ಪ್ರಜ್ಞೆ ತಪ್ಪಿದಂತಾಗಿದ್ದು, ಕುಟುಂಬದವರು ಬಂದು ಎಬ್ಬಿಸಿದ ನಂತರ ನೋಡಿದಾಗ ಮನೆಯ ಬೀರುವಿನ ಬೀಗ ಮುರಿದು 17 ತೊಲ ಬಂಗಾರದ ಒಡವೆ ಮತ್ತು 1.20 ಲಕ್ಷ ಕಳವು ಮಾಡಿಕೊಂಡು ಹೋಗಿರುವುದಾಗಿ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಕಳ್ಳತನ ನಡೆದ ದಿನವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಆರೋಪಿಗಳ ಪತ್ತೆಗೆ ಸೂಕ್ತ ನಿರ್ದೇಶನ ನೀಡಿದ್ದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ. ಸಂತೋಷ್ ಮತ್ತು ಜಿ. ಮಂಜುನಾಥ್, ಚನ್ನಗಿರಿ ಪೊಲೀಸ್ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗಿಸ್ ಮಾರ್ಗದರ್ಶನ, ನಿರೀಕ್ಷಕ ಬಾಲಚಂದ್ರ ನಾಯ್ಕ ನೇತೃತ್ವದಲ್ಲಿನ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ, ತನಿಖೆ ನಡೆಸಿದಾಗ ಕಳ್ಳತನದ ದೂರು ನೀಡಿದ್ದಂತ ಸ್ವತಃ ತಸ್ಮೀಯ ಖಾನಂ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತು.

Advertisement

ಹೆಚ್ಚಿನ ವಿಚಾರಣೆ ನಡೆಸಿದಾಗ ಮುಜೀಬುಲ್ಲಾ ಶೇಖ್ ಅಲಿಯಾಸ್ ಜಾಕೀರ್ ಜೊತೆ ಸೇರಿಕೊಂಡು ಕಳ್ಳತನ ಮಾಡಿದ್ದು, ಯಾರಿಗೂ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಸುಳ್ಳು ಕತೆ ಸೃಷ್ಟಿಸಿರುವುದು ವಿಚಾರಣೆ ವೇಳೆ ತಿಳಿಸಿದ್ದಾರೆ.

ಮುಜೀಬುಲ್ಲಾ ಮನೆಯಲ್ಲಿಟ್ಟಿದ್ದ  9.5 ಲಕ್ಷ ಬೆಲೆ ಬಾಳುವ 155 ಗ್ರಾಂ ತೂಕದ ಬಂಗಾರದ ಆಭರಣ, 1.27 ನಗದು ವಶಪಡಿಸಿಕೊಳ್ಳಲಾಗಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆ ನಡೆದ 5 ದಿನಗಳಲ್ಲಿ ಆರೋಪಿತರನ್ನು ಬಂಧಿಸಿ ಕಳವಾಗಿದ್ದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ತಂಡಕ್ಕೆ ಬಹುಮಾನ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next