Advertisement

ದಾವಣಗೆರೆಯೊಂದಿಗೆ ಹಿರಣ್ಣಯ್ಯರದ್ದು ಅವಿನಾಭಾವ ಸಂಬಂಧ

03:10 PM May 03, 2019 | Naveen |

ದಾವಣಗೆರೆ: ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದ ನಟರತ್ನ ಮಾಸ್ಟರ್‌ ಹಿರಣ್ಣಯ್ಯ ವೃತ್ತಿ ರಂಗಭೂಮಿಯ ತವರೂರು ದಾವಣಗೆರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.

Advertisement

ದಾವಣಗೆರೆ ಎಂದರೆ ವೃತ್ತಿ ರಂಗಭೂಮಿ ಕಂಪನಿಗಳ ಅಚ್ಚುಮೆಚ್ಚಿನ ಸ್ಥಳ. ಒಂದು ದಿನಕ್ಕೆ ನಾಲ್ಕು ಕಡೆ ನಾಟಕ ಪ್ರದರ್ಶನ ನಡೆಯುವ ಕಾಲವೂ ಇತ್ತು. ಹಳೆ ಬಸ್‌ ನಿಲ್ದಾಣದ ಎದುರಿನ ನಾಟಕ ಕಂಪನಿಯಲ್ಲಿ ಮಾಸ್ಟರ್‌ ಹಿರಣ್ಣಯ್ಯ ನಾಟಕದಲ್ಲಿ ಅಭಿನಯಿಸಿದ್ದನ್ನು ಈಗಲೂ ಹಿರಿಯರು ಸ್ಮರಿಸುತ್ತಾರೆ.

ಮಾಸ್ಟರ್‌ ಹಿರಣ್ಣಯ್ಯ ದಾವಣಗೆರೆ ಬಂದಾಗ ಉಳಿದುಕೊಳ್ಳುತ್ತಿದ್ದುದು ಬಳ್ಳಾರಿ ಸಿದ್ದಮ್ಮ ಪಾರ್ಕ್‌ ಸಮೀಪ ಇರುವ ಪದ್ದಮ್ಮ ಎಂಬುವರ ಮನೆಯಲ್ಲಿ. ಈಗಲೂ ಪದ್ದಮ್ಮ ಇದ್ದಾರೆ. ಅವರು ಮಾಸ್ಟರ್‌ ಹಿರಣ್ಣಯ್ಯ ಮದುವೆಯಾಗಲು ಸಾಕಷ್ಟು ಪ್ರಮುಖ ಪಾತ್ರ ವಹಿಸಿದ್ದರು.

ದಾವಣಗೆರೆಯ ಹ್ಯೂಮರ್‌ ಕ್ಲಬ್‌ನಲ್ಲಿ ಆಯೋಜಿಸಿದ್ದ 3-4 ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅವರು ನಾಟಕ ಪ್ರದರ್ಶನ ನೀಡಿದ್ದರು. ಶಿವಯೋಗಿ ಮಂದಿರದಲ್ಲಿ ಮಾಸ್ಟರ್‌ ಹಿರಣ್ಣಯ್ಯ ಅವರ ನಾಟಕ ಪ್ರದರ್ಶನ ಏರ್ಪಾಟಾಗಿತ್ತು. ಭಾರೀ ಮಳೆಯ ಕಾರಣ ಆ ದಿನದ ಪ್ರದರ್ಶನ ರದ್ದಾದರೂ ಮರು ದಿನ ಮಾಸ್ಟರ್‌ ಹಿರಣ್ಣಯ್ಯ ನಾಟಕ ಪ್ರದರ್ಶನ ನೀಡಿದ್ದರು.

ದಾವಣಗೆರೆ ಹಿರಿಯ ಪತ್ರಕರ್ತರಾಗಿದ್ದ ದಿ| ಆರ್‌.ಜಿ. ಗೌರಿಶಂಕರ್‌ ಅವರೊಂದಿಗೆ ಮಾಸ್ಟರ್‌ ಹಿರಣ್ಣಯ್ಯ ಬಹಳ ಆತ್ಮೀಯತೆ ಹೊಂದಿದ್ದರು. ಆಗ ಪತ್ರ ವ್ಯವಹಾರವೇ ಮುಖ್ಯವಾಗಿತ್ತು. ಆರ್‌.ಜಿ. ಗೌರಿಶಂಕರ್‌ ಇನ್‌ಲ್ಯಾಂಡ್‌ ಲೆಟರ್‌ನಲ್ಲಿ ಮಾಸ್ಟರ್‌ ಹಿರಣ್ಣಯ್ಯ ಅವರಿಗೆ ಪತ್ರ ಬರೆಯುವಾಗ ಫ್ರಾಂ ಅಡ್ರೆಸ್‌ನಲ್ಲಿ ಗೌರಿ… ದಾವಣಗೆರೆ ಎಂದು ಬರೆಯುತ್ತಿದ್ದರು. ಅದು ಮಾಸ್ಟರ್‌ ಹಿರಣ್ಣಯ್ಯ ಪತ್ನಿ ಕೈಗೆ ಸಿಕ್ಕು, ಅವರು ಮಾಸ್ಟರ್‌ ಹಿರಣ್ಣಯ್ಯ ಅವರ ಮೇಲೆ ಕೋಪಗೊಂಡಿದ್ದರು. ಒಮ್ಮೆ ಮಾಸ್ಟರ್‌ ಹಿರಣ್ಣಯ್ಯ ಅವರು ತಮ್ಮ ಪತ್ನಿಯೊಂದಿಗೆ ದಾವಣಗೆರೆ ಬಂದ ಸಂದರ್ಭದಲ್ಲಿ ಆರ್‌.ಜಿ. ಗೌರಿಶಂಕರ್‌ ಅವರನ್ನ ತೋರಿಸಿ, ಇವರೇ ನೋಡು ಗೌರಿ… ನನಗೆ ಪತ್ರ ಬರೆಯುತ್ತಿದ್ದವರು ಎಂದು ಹೇಳಿದ್ದನ್ನು ಗೌರಿಶಂಕರ್‌ ಆಗಾಗ ಸ್ಮರಿಸುತ್ತಿದ್ದರು.

Advertisement

ಮಾಸ್ಟರ್‌ ಹಿರಣ್ಣಯ್ಯ ಅವರ ನಾಟಕ ಗಮನಿಸಿದರೆ ಒಬ್ಬರೇ ಪ್ರದರ್ಶನ ನೀಡುವುದು ಸಾಮಾನ್ಯ. ಆ ಬಗ್ಗೆ ಸಾಕಷ್ಟು ಆಕ್ಷೇಪಣೆಗಳು ಇದ್ದವು. ದಾವಣಗೆರೆಯ ಬಾಪೂಜಿ ಸಭಾಂಗಣದಲ್ಲಿ ಒಮ್ಮೆ ಮಾಸ್ಟರ್‌ ಹಿರಣ್ಣಯ್ಯ ನಾಟಕ ಪ್ರದರ್ಶನಕ್ಕೆ ಆಗಮಿಸಿದ್ದರು. ಹಿರಿಯ ಛಾಯಾಗ್ರಾಹಕರಾದ ಎಚ್.ಬಿ. ಮಂಜುನಾಥ್‌, ಮಾಸ್ಟರ್‌ ಹಿರಣ್ಣಯ್ಯ ಅವರು ಪ್ರದರ್ಶಿಸುವ ನಾಟಕ ಪ್ರಕಾರ ಭಾರತೀಯ ಸಂಸ್ಕೃತ ನಾಟಕದ ವೀಚಿ ಪ್ರಕಾರದ್ದು. ಒಬ್ಬನೇ ವ್ಯಕ್ತಿ ಆಕಾಶಿಕ ಭಾಷಿಕಗಳ ಮೂಲಕ ಚಮತ್ಕಾರಿಕ ಉಕ್ತಿ ಮತ್ತು ಪ್ರತ್ಯುಕ್ತಿಗಳಿಂದ ಜನರನ್ನ ಆಕರ್ಷಣೆ ಮಾಡುವಂತದ್ದು ಹೇಳಿದ್ದರು.

ಗ್ರೀನ್‌ ರೂಂನಲ್ಲಿ ಮೇಕಪ್‌ ಮಾಡಿಕೊಳ್ಳುತ್ತಿದ್ದಂತ ಮಾಸ್ಟರ್‌ ಹಿರಣ್ಣಯ್ಯ ಈ ಮಾತುಗಳನ್ನ ಕೇಳಿಸಿಕೊಂಡ ತಕ್ಷಣಕ್ಕೆ ಅರ್ಧ ಮೇಕಪ್‌ನಲ್ಲೇ ವೇದಿಕೆಗೆ ಬಂದು, ನಾನು ಧನ್ಯನಾದೆ ಎಂದು ಕೈ ಮುಗಿದಿದ್ದರು. ಎಚ್.ಬಿ. ಮಂಜುನಾಥ್‌ರವರ ವಿವರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಎಚ್.ಬಿ. ಮಂಜುನಾಥ್‌ ಬರೆದುಕೊಟ್ಟಿರುವ ವ್ಯಂಗ್ಯಚಿತ್ರ ಇಂದಿಗೂ ಮಾಸ್ಟರ್‌ ಹಿರಣ್ಣಯ್ಯ ಅವರ ಮನೆಯಲ್ಲಿ ಇರುವುದು ಅವರಿಬ್ಬರ ನಡುವಿನ ಆತ್ಮೀಯತೆಯ ದ್ಯೋತಕ.

Advertisement

Udayavani is now on Telegram. Click here to join our channel and stay updated with the latest news.

Next