Advertisement

ಜಿಪಂ ಸಭೆಯಲ್ಲಿ ಅಶಿಸ್ತು ಪ್ರದರ್ಶನ!

03:04 PM Feb 27, 2021 | Team Udayavani |

ದಾವಣಗೆರೆ: ಜಿಲ್ಲಾ ಪಂಚಾಯಿತಿ ಸದಸ್ಯರ ಪ್ರಸ್ತುತ ಆಡಳಿತಾವಧಿ ಮುಗಿಯುತ್ತಿರುವ ಈ ಸಂದರ್ಭದಲ್ಲಿಯೂ ಶಿಸ್ತಿನ ಬಗ್ಗೆ ಉಲ್ಲೇಖೀಸುತ್ತಲೇ ಅಶಿಸ್ತು ಪ್ರದರ್ಶಿಸಿದ ಘಟನೆಗೆ ಶುಕ್ರವಾರ ನಡೆದ ಜಿಪಂ ಸಾಮಾನ್ಯ ಸಭೆ ಸಾಕ್ಷಿಯಾಯಿತು.

Advertisement

ಜಿಪಂ ಚುನಾವಣೆ ಅಧಿಸೂಚನೆ ಸದ್ಯದಲ್ಲಿಯೇ ಹೊರಬೀಳುವ ಸಾಧ್ಯತೆ ಇರುವುದರಿಂದ ಇದು ನಮ್ಮ ಆಡಳಿತಾವಧಿಯ ಕೊನೆಯ ಸಭೆಯಾಗಿದೆ. ಈ ಸಭೆಯಲ್ಲಾದರೂ ಶಿಸ್ತಿನಿಂದ ನಡೆದುಕೊಳ್ಳೋಣ ಎಂದು ಹೇಳುವ ಮೂಲಕ ಸದಸ್ಯರು ಸಭೆ ಆರಂಭಿಸಿದರು. ಆದರೆ, ಸಭೆ ಮುಂದುವರಿಯುತ್ತಿದ್ದಂತೆ ಕೆಲ ಸದಸ್ಯರು ಶಿಸ್ತು ಮರೆತು ಬಿಟ್ಟರು. ಜಿಪಂ ಅಧಿಕಾರ ವ್ಯಾಪ್ತಿ ಮೀರಿದ ಹಾಗೂ ಈ ಹಿಂದೆ ಸಾಕಷ್ಟು ಬಾರಿ ಚರ್ಚೆಯಾದ ಹಾಗೂ ಸರ್ಕಾರ ಮಟ್ಟದ ವಿಚಾರಗಳನ್ನು ತಾಸುಗಟ್ಟಲೆ ಚರ್ಚೆ ಮಾಡಿದರು. ಜತೆಗೆ ರಾಜಕೀಯವಾಗಿ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡು ತಮ್ಮ ಕೊನೆಯ ಸಭೆಯಲ್ಲಿಯೂ ಅಶಿಸ್ತು ಪ್ರದರ್ಶಿಸಿದರು.

ಸಭೆ ಆರಂಭದಲ್ಲಿ ಸದಸ್ಯ ಕೆ.ಎಚ್‌.ಬಸವಂತಪ್ಪ, ಕಳೆದ ಸಭೆಯಲ್ಲಿ ಕೇಳಿದ ಗ್ರಾಮಗಳಲ್ಲಿ ಸ್ವತ್ಛತೆ ವಿಚಾರ ಪ್ರಸ್ತಾಪಿಸಿದಾಗ ಇನ್ನೋರ್ವ ಸದಸ್ಯ ಎನ್‌.ಜಿ. ನಟರಾಜ್‌, ಸದಸ್ಯರು ಏಕಾಏಕಿ ತಮ್ಮ ವಿಚಾರ  ಮಂಡಿಸುವುದಕ್ಕಿಂತ ಅಧ್ಯಕ್ಷರ ಸೂಚನೆ ಮೇರೆಗೆ ಇಲಾಖಾವಾರು ಚರ್ಚೆ ಮಾಡೋಣ ಎಂದರು.

ಈ ನಡುವೆಯೇ ಗ್ರಾಪಂಗಳಲ್ಲಿ ಅನುದಾನ ದುರ್ಬಳಕೆ ಬಗ್ಗೆ ಆಗುತ್ತಿರುವ ಬಗ್ಗೆ ಗಂಭೀರ ಚರ್ಚೆ ಮಾಡಿದ  ಸದಸ್ಯರು, ಕೊನೆಗೆ ಇಲಾಖಾವಾರು ಚರ್ಚೆಗೆ ಅಣಿಯಾದರು.

ಸರ್ಕಾರ ಮಟ್ಟದ ವಿಚಾರ: ಕೃಷಿ ಇಲಾಖೆ ಕುರಿತ ಚರ್ಚೆ ವೇಳೆ ಈ ಹಿಂದಿನ ಹಲವು ಸಭೆಯಲ್ಲಿ ಪ್ರಸ್ತಾಪಿತ ಬೆಂಬಲಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸುವ ವಿಚಾರವನ್ನು ಸದಸ್ಯ ಡಿ.ಜಿ. ವಿಶ್ವನಾಥ್‌ ಪ್ರಸ್ತಾಪಿಸಿ, ಸರ್ಕಾರ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸದೆ ಇರುವುದರಿಂದ ರೈತರಿಗೆ ಭಾರಿ ತೊಂದರೆಯಾಗಿದೆ ಎಂದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಮಹೇಶ್‌, ರೈತರಿಗೆ ತೊಂದರೆಯಾಗಬಾರದೆಂದೇ ನಮ್ಮ ಸರ್ಕಾರ ಎಪಿಎಂಪಿ ಕಾಯ್ದೆ, ಕೃಷಿ ಕಾಯ್ದೆ ಜಾರಿಗೆ ತರುತ್ತಿದೆ ಎಂದರು. ಈ ಹೇಳಿಕೆಯಿಂದ ಆಕ್ರೋಶಗೊಂಡ ಹದಡಿ ನಿಂಗಪ್ಪ, ಓಬಳಪ್ಪ ಹಾಗೂ ಕೆ.ಎಸ್‌. ಬಸವಂತಪ್ಪ, ಕಾಯ್ದೆ ಬಗ್ಗೆ ಇಲ್ಲಿ ಚರ್ಚೆ ಬೇಡ. ಇದನ್ನು ನಮ್ಮ ಪಕ್ಷದವರು ಹೊರಗೆ ಹೋರಾಟ ಮಾಡುತ್ತಿದ್ದಾರೆ. ನೀವು ಬೆಂಬಲ ಬೆಲೆ ನಿಗದಿ  ಮಾಡಿದ ಮೇಲೆ ಖರೀದಿ ಏಕೆ ಮಾಡುತ್ತಿಲ್ಲ. ನೀವು ಒಬ್ಬ ರೈತನ ಮಗನಾಗಿ ರೈತರಿಗೆ ನ್ಯಾಯ ಒದಗಿಸುವ ಬಗ್ಗೆ ಮಾತನಾಡಬಾರದೇ ಎಂದೆಲ್ಲ ಪ್ರತಿ ವಾಗ್ಧಾಳಿ ನಡೆಸಿದರು. ಇದರಿಂದ ಇಡೀ ಚರ್ಚೆ ರಾಜಕೀಯ ತಿರುವು ಪಡೆದುಕೊಂಡು ಕೆಲಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಯಿತು.

ಅಧಿಕಾರ ಮಿತಿಯಲ್ಲಿರಲಿ ಚರ್ಚೆ: ಸದಸ್ಯರ ಈ ಚರ್ಚೆಯಿಂದ ಅಸಮಾಧಾನಗೊಂಡ ಸದಸ್ಯೆ ಶೈಲಜಾ ಬಸವರಾಜ್‌, ನಮ್ಮ ಆಡಳಿತಾವಧಿಯ ಕೊನೆಯ ಸಭೆ ಇದಾಗಿದ್ದು, ಈ ಸಭೆಯಲ್ಲಾದರೂ ಜಿಲ್ಲಾ  ಪಂಚಾಯಿತಿ ಅಧಿಕಾರ ವ್ಯಾಪ್ತಿಗೆ ಬರುವ ವಿಚಾರಗಳನ್ನು ಚರ್ಚೆ ಮಾಡಿ. ಸರ್ಕಾರ ಮಟ್ಟದ ವಿಚಾರಗಳನ್ನು ಜಿಪಂ ಅಧ್ಯಕ್ಷೆ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಂದೆ ಚರ್ಚೆ ಮಾಡಿದರೆ ಪ್ರಯೋಜನವಾಗದು. ಸುಮ್ಮನೇ ಸಮಯ ವ್ಯರ್ಥವಾಗುತ್ತದೆ ಎನ್ನುವ ಮೂಲಕ ಮೆಕ್ಕೆಜೋಳದ ಚರ್ಚೆಗೆ ತೆರೆಎಳೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next