ದಾವಣಗೆರೆ : ಕೊರೊನಾ ಕಾಲದಲ್ಲಿ ಸ್ವತಃ ಮನೆ ಮನೆಗೆ ಹೋಗಿ ವಿದ್ಯಾರ್ಥಿಗಳನ್ನು ನಿರಂತರ ಕಲಿಕೆಯಲ್ಲಿ ತೊಡಗಿಸಿದ, ಯೂಟ್ಯೂಬ್ ವಿಡಿಯೋ ಪಾಠದ ಮೂಲಕ ಮಕ್ಕಳಿಗೆ ಬೋಧನೆ ಮಾಡಿದ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಶಾಲಾಭಿವೃದ್ಧಿಗೆ ವಿಶೇಷ ಆಸಕ್ತಿ ತೋರಿದ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಗಳ ಎಚ್. ಎಂ. ಅವರು ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಿಕ್ಷಕಿ ಮಂಗಳ ಅವರು 19 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಕಳೆದೆರೆಡು ವರ್ಷ ಕಬ್ಬಳ ಹಿ.ಪ್ರಾ ಶಾಲೆಯ ಪ್ರಭಾರಿ ಮುಖ್ಯಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ವೇಳೆ ಅವರು ಶಾಲಾ ದತ್ತು ಸಮಿತಿ ರಚಿಸಿ ಶಾಲೆಯ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದಾರೆ.
ಇವರ ಪ್ರಯತ್ನದ ಫಲವಾಗಿ ಅಂದಾಜು ಐದು ಲಕ್ಷ ರೂ.ಗಳಲ್ಲಿ ಶಾಲೆಯಲ್ಲಿ ಎರಡು ಸ್ಮಾರ್ಟ್ ಕ್ಲಾಸ್ ತರಗತಿಗಳನ್ನು ಮಾಡಲಾಗುತ್ತಿದೆ. ಶಾಲಾ ಆವರಣದ ಮುಕ್ಕಾಲು ಎಕರೆ ಜಾಗೆಯಲ್ಲಿ ಅಡಕೆ ಸಸಿ ನೆಟ್ಟು ಬೆಳೆಸುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ವತಿಯಿಂದ ಶಾಲೆಗೆ ಕೊಠಡಿ, ಶೌಚಾಲಯ, ಗ್ರಾಮಸ್ಥರಿಂದ ಶಾಲೆಗೆ ಉತ್ತಮ ಗೇಟ್ ಮಾಡಿಸುವ ವ್ಯವಸ್ಥೆ ಮಾಡಿಸಿದ್ದಾರೆ.
ಇನ್ನು ಮಂಗಳ ಅವರು ಮಕ್ಕಳಿಗಾಗಿ ಸ್ವತಃ ಕಲಿಕೋಪಕರಣ ತಯಾರಿಸಿ ವಿವಿಧ ಚಟುವಟಿಕೆ ಮಾಡಿದ್ದಾರೆ. ಕೊರೊನಾ ಕಾಲದಲ್ಲಿ ಮನೆ ಮನೆಗೆ ಹೋಗಿ ಮಕ್ಕಳಿಗೆ ಅಭ್ಯಾಸ ಹಾಳೆ ಕೊಟ್ಟು ಅವರಿಂದ ತಾವೇ ಸ್ವತಃ ಹೋಗಿ ಮರಳಿ ಪಡೆದಿದ್ದೇ ಅಲ್ಲದೆ “ವಿದ್ಯಾಗಮ’ ಕಾರ್ಯವನ್ನು ಉತ್ತಮವಾಗಿ ನಡೆಸಿದ ಬಗ್ಗೆ ಇಲಾಖೆಯಿಂದ ಪ್ರಶಂಸೆಗೂ ಪಾತ್ರರಾಗಿದ್ದಾರೆ. ಶಾಲೆಯಲ್ಲಿನ ಸೌಲಭ್ಯಗಳ ಹೆಚ್ಚಳದಿಂದಾಗಿ ಮಕ್ಕಳ ಸಂಖ್ಯೆಯೂ ಅಧಿಕವಾಗಿದ್ದು ಈಗ ಶಾಲೆಯಲ್ಲಿ 106 ಮಕ್ಕಳು ಓದುತ್ತಿದ್ದಾರೆ. ಕಳೆದ ವರ್ಷವಷ್ಟೇ ಇವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯೂ ಲಭಿಸಿರುವುದು ಇಲ್ಲಿ ಉಲ್ಲೇಖನೀಯ.