ತಾಲೂಕು ಕೇಂದ್ರವೇನೋ ಆಗಿದೆ. ತಾಲೂಕು ಕೇಂದ್ರ ರಚನೆಯಾಗಿ ಎರಡು ವರ್ಷಗಳು ಕಳೆಯುತ್ತಾ ಬಂದರೂ ಅಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ ಎನ್ನುವ ಕೂಗು ಆ ಭಾಗದ ಜನರಲ್ಲಿದೆ.
Advertisement
ಅತಿ ದೊಡ್ಡ ಹೋಬಳಿ ಕೇಂದ್ರ ನ್ಯಾಮತಿ ಬ್ರಿಟಿಷರ ಆಳ್ವಿಕೆಯ 1870ರ ಕಾಲಾವಧಿಯಲ್ಲೇ ತಾಲೂಕು ಕೇಂದ್ರವಲ್ಲದೆ, ಪುರಸಭೆಯೂ ಆಗಿತ್ತು. ಈಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ತಾಲೂಕು ಆಡಳಿತ ಕಚೇರಿಯಾಗಿತ್ತು. ಕೆಲವಾರು ಆಡಳಿತಾತ್ಮಕ, ತಾಂತ್ರಿಕ ಕಾರಣದಿಂದ ನ್ಯಾಮತಿ ತಾಲೂಕು ಕೇಂದ್ರವನ್ನು ಹೊನ್ನಾಳಿಗೆ ಸ್ಥಳಾಂತರಿಸಲಾಯಿತು.
Related Articles
Advertisement
ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕರಾದ ಡಾ|ಡಿ.ಬಿ.ಗಂಗಪ್ಪ, ಡಿ.ಜಿ.ಶಾಂತನಗೌಡ ಸೇರಿದಂತೆ ಇತರ ಮುಖಂಡರು ತಾಲೂಕು ರಚನೆಗೆ ಶ್ರಮಿಸಿದ್ದಾರೆ. 2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ತಮ್ಮ ಬಜೆಟ್‌ನಲ್ಲಿ ಹೊಸ ತಾಲೂಕುಗಳ ರಚನೆಯಲ್ಲಿ ನ್ಯಾಮತಿ ಸಹ ಘೋಷಿಸಿದ್ದರು. ನ್ಯಾಮತಿ ತಾಲೂಕು ಕೇಂದ್ರವಾಗಿ ಘೋಷಿಸಲ್ಪಟ್ಟಿದ್ದರೂ ಅದು ಕಾರ್ಯರೂಪಕ್ಕೆ ಕಾಲ ಕೂಡಿ ಬರಲೇ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಂಡಿಸಿದ ಬಜೆಟ್‌ನಲ್ಲಿ ನ್ಯಾಮತಿ ಸೇರಿದಂತೆ ಹಲವು ತಾಲೂಕುಗಳ ರಚನೆ ಘೋಷಿಸಿದ್ದರು. 2018 ಜ. 17ರಂದು ಸರ್ಕಾರದ ಆದೇಶದನ್ವಯ ತಹಶೀಲ್ದಾರ್, ಗ್ರೇಡ್-1 ತಹಶೀಲ್ದಾರ್, ಶಿರಸ್ತೇದಾರ್, ಪ್ರಥಮ, ದ್ವಿತೀಯ ದರ್ಜೆ ಸಹಾಯಕರು ಒಳಗೊಂಡಂತೆ ಒಟ್ಟಾರೆ 18 ಸಿಬ್ಬಂದಿ ನೇಮಕ ಪ್ರಕ್ರಿಯೆಗೆ ಚಾಲನೆ ದೊರೆಯಿತು. ನ್ಯಾಮತಿಯ ಹೃದಯ ಭಾಗದಲ್ಲಿದ್ದ ನಾಡಕಚೇರಿಯೇ ಈಗ ತಾಲೂಕು ಕಚೇರಿ ಆಗಿದೆ. ಉಪ ತಹಶೀಲ್ದಾರ್ ಈಗ ತಾತ್ಕಾಲಿಕ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊನ್ನಾಳಿ ಕ್ಷೇತ್ರ ಶಿಕ್ಷಣಾಧಿಕಾರಿ ತಾತ್ಕಾಲಿಕ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನುಳಿದ ಕೆಲಸ ಕಾರ್ಯಗಳು ಸದ್ಯಕ್ಕೆ ಹೊನ್ನಾಳಿಯಿಂದಲೇ ನಡೆಯುತ್ತಿವೆ. ಹೊಸ ಕಚೇರಿಗಳಿಗೆ ಜಾಗ ಹುಡುಕಾಟ ನಡೆದಿದೆ. ಎರಡು ತಿಂಗಳ ಹಿಂದೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನ್ಯಾಮತಿ ತಾಲೂಕಿಗೆ ವರ್ಗಾವಣೆಗೊಂಡಿದ್ದು, ಅವರಿಗೆ ಕಚೇರಿ ಇಲ್ಲದೆ ಗ್ರಾಮ ಪಂಚಾಯಿತಿಯ ಒಂದು ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಹಶೀಲ್ದಾರ್, ತಾಪಂ ಇಓ ಹಾಗೂ ಬೆಸ್ಕಾಂ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಹೊರತು ಪಡಿಸಿದರೆ ಇತರೆ ಯಾವುದೇ ಇಲಾಖೆಯ ಅಧಿಕಾರಿ ತಾಲೂಕು ಕೇಂದ್ರದಲ್ಲಿಲ್ಲ. ಎಲ್ಲಾ ಇಲಾಖೆಯ ಕೆಲಸ ಕಾರ್ಯಗಳಿಗೆ ಜನರು ಈಗಲೂ ಹೊನ್ನಾಳಿಗೇ ಹೋಗಬೇಕಿದೆ. ಮೂಲಗಳ ಪ್ರಕಾರ ನೂತನ ತಾಲೂಕಿಗೆ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಬಿಡುಗಡೆಯಾಗಿಲ್ಲ. ಕಂದಾಯ ಇಲಾಖೆ ಹಳೇ ದಾಖಲಾತಿಗಳು ಇನ್ನೂ ವರ್ಗಾವಣೆಯಾಗಬೇಕಿದೆ ಎಂಬುದಾಗಿ ತಹಶೀಲ್ದಾರ್ ಹೇಳುತ್ತಾರೆ.