Advertisement

ಎಕ್ಸಾಂ ನಿರೀಕ್ಷೆಯಲ್ಲೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು! 

05:56 PM May 07, 2020 | Naveen |

ದಾವಣಗೆರೆ: ಪ್ರತಿ ದಿನ ಕ್ಲಾಸ್‌, ಆಮೇಲೆ ಸ್ಪೆಷಲ್‌ ಕ್ಲಾಸ್‌, ಮನೆಗೆ ಬಂದ ಮೇಲೆ ಓದೋದು, ಬೆಳಗ್ಗೆ ಟ್ಯೂಷನ್‌..

Advertisement

ಹಿಂಗೆ ಎಲ್ಲಾ ರೀತಿ ಪ್ರಿಪೇರ್‌ ಆಗಿದ್ವಿ. ಎಕ್ಸಾಂ ಆಗಿದ್ರೆನೇ ಚೆನ್ನಾಗಿತ್ತು. ಆದರೆ, ಕೋವಿಡ್ ಭಯದ ಕಾರಣಕ್ಕೆ ಎಕ್ಸಾಂ ಪೋಸ್ಟ್‌ಫೋನ್‌ ಆಗಿದೆ. ಜೂನ್‌ಗೆ ನಡೆಯುತ್ತಂತೆ.. ಅಲ್ಲಿಯ ತನಕ ಕಾಯಲೇಬೇಕು… ಇದು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ನಿರೀಕ್ಷೆಯಲ್ಲೇ ಇರುವ ದಾವಣಗೆರೆಯ ಎಸ್‌.ಜೆ.ಎಂ. ಪಬ್ಲಿಕ್‌ ಶಾಲೆಯ ಎಸ್‌.ಎಂ. ಪ್ರೀತಿ ಮಾತುಗಳು. ಪ್ರೀತಿ ಮಾತ್ರವಲ್ಲ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧವಾಗಿರುವ ಅನೇಕ ವಿದ್ಯಾರ್ಥಿಗಳ ಚಿಂತೆಯೂ ಆಗಿದೆ.

ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಘಟ್ಟ ಎಂದೇ ಪರಿಗಣಿಸಲ್ಪಡುವ ಎಸ್ಸೆಸ್ಸೆಲ್ಸಿ ಎಂದರೆ ವಿದ್ಯಾರ್ಥಿಗಳು ಮಾತ್ರವಲ್ಲ ಪೋಷಕರಲ್ಲೂ ಒಂದು ರೀತಿಯ ಧಾವಂತ. ಎಸ್ಸೆಸ್ಸೆಲ್ಸಿ ಅಂದಾಕ್ಷಣ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿರುತ್ತದೆ. ಮಕ್ಕಳ ಓದು, ಕ್ಲಾಸ್‌, ಟ್ಯೂಷನ್‌… ಎಂದು ತಲೆಕೆಡಿಸಿಕೊಂಡಿರುತ್ತಾರೆ. ಆದರೆ, ಮಹಾಮಾರಿ ಕೊರೊನಾ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ ಕಾರಣಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಲ್ಪಡುತ್ತಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅವ್ಯಕ್ತ ಭಯಕ್ಕೆ ಕಾರಣವಾಗುತ್ತದೆ. ಪರೀಕ್ಷೆ ನಡೆಯುವುದು ಯಾವಾಗ ಎಂದು ಕಾಯುವಂತಾಗಿದೆ.

ನಿಗದಿತ ವೇಳಾಪಟ್ಟಿ ಪ್ರಕಾರ ಮಾ.27 ರಿಂದ ಏ.9ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಬೇಕಿತ್ತು. ದಾವಣಗೆರೆ ಜಿಲ್ಲೆಯಲ್ಲಿ 69 ಪರೀಕ್ಷಾ ಕೇಂದ್ರದಲ್ಲಿ ಒಟ್ಟಾರೆ 21,647 ವಿದ್ಯಾರ್ಥಿಗಳು ಪರೀಕ್ಷೆಗೆ ಸಜ್ಜಾಗಿದ್ದರು. ವಿದ್ಯಾರ್ಥಿಗಳಂತೆ ಶಿಕ್ಷಣ ಇಲಾಖೆ ಸಹ ಅಗತ್ಯ ಸಿದ್ಧತೆ ಮಾಡಿಕೊಂಡಿತ್ತು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲ್ಪಡುತ್ತಿದೆ. ಜೂನ್‌ ಎರಡನೇ ಇಲ್ಲವೇ ಮೂರನೇ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸರ್ಕಾರ ಆದೇಶಿಸಿದೆ. ಕೊರೊನಾ ಮಹಾಮಾರಿ ಅದಕ್ಕೆ ಅವಕಾಶ ಮಾಡಿಕೊಡಲಿದೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರುವುದು ಸುಳ್ಳಲ್ಲ.

ಜೂನ್‌ ವೇಳೆಗೆ ಕೋವಿಡ್ ನಿಯಂತ್ರಣಕ್ಕೆ ಬರಲಿದೆಯೇ ಎಂದು ನಿಖರವಾಗಿ ಹೇಳುವ ಸ್ಥಿತಿಯಂತೂ ಸದ್ಯಕ್ಕಿಲ್ಲ. ಸರ್ಕಾರ ಹೇಳಿರುವಂತೆಯೇ ಎಸ್ಸೆಸ್ಸೆಲ್ಸಿ ಪರೀಕ್ಷೆಯ ವೇಳೆಗೆ ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲ ಸಂಪೂರ್ಣವಾಗಿ ನಿರ್ಮೂಲನೆ ಆಗಲಿ ಎಂಬುದು ಎಲ್ಲರ ಅಪೇಕ್ಷೆ. ಆದರೆ, ಅಪೇಕ್ಷೆ ಈಡೇರುವುದೇ ಎಂಬುದು ಅಕ್ಷರಶಃ ಯಕ್ಷಪ್ರಶ್ನೆ. ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಈಗ ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಊಹೆಗೂ ನಿಲುಕದಂತೆ ವ್ಯಾಪಕವಾಗಿ ಹರಡುತ್ತಿದೆ. ಒಂದು ವಾರದ ಹಿಂದೆಯಷ್ಟೇ ಹಸಿರು ವಲಯದಲ್ಲಿದ್ದ ದಾವಣಗೆರೆ ನಗರದಲ್ಲಿ ವಾರದ ಅಂತರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 32ಕ್ಕೇರಿದೆ.

Advertisement

ಇಬ್ಬರು ಬಲಿಯಾಗಿದ್ದಾರೆ. ಇಬ್ಬರು ಗುಣಮುಖರಾಗಿದ್ದಾರೆ. 28 ಪ್ರಕರಣ ಸಕ್ರಿಯವಾಗಿವೆ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಹೇಳುವಂತೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು ಎಂಬ ಅಂದಾಜಿದೆ. ಅದರಂತೆ ಕೋವಿಡ್ ಗೆ ತುತ್ತಾದ ಎಲ್ಲರೂ ಗುಣಮುಖರಾಗಿ, 14 ದಿನಗಳ ಕ್ವಾರಂಟೈನ್‌ ಅವಧಿಯೂ ಮುಗಿದು, ಮತ್ತೆ ಹೊಸ ಪ್ರಕರಣ ಕಾಣಿಸದಂತದಾಗ ಮಾತ್ರ ಪರೀಕ್ಷೆಗಳಿಗೆ ಮುಕ್ತ ವಾತಾವರಣ ನಿರ್ಮಾಣ ಆಗಬಹುದು ಎಂಬ ಅಂದಾಜಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯದೇ ಇರುವುದು ವಿದ್ಯಾರ್ಥಿಗಳ ಮುಂದಿನ ಓದಿನ ಮೇಲೂ ಪರಿಣಾಮ ಬೀರಲಿದೆ. ಎಲ್ಲವೂ ವಿಳಂಬವಾಗಲಿದೆ
ಎಂಬ ಚಿಂತೆಯೂ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಕಾಡುತ್ತಿದೆ. ಒಟ್ಟಾರೆಯಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಕಾಯುವಂತಾಗಿದೆ.

ಪುನಶ್ಚೇತನ..
ಕೋವಿಡ್ ವೈರಸ್‌, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ವಿಳಂಬವಾಗುತ್ತಿವೆ. ಶಿಕ್ಷಣ ಇಲಾಖೆ ಯಿಂದ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಫೋನ್‌-ಇನ್‌ ಮೂಲಕ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ವಿಷಯವಾರು ಚರ್ಚೆ ನಡೆಸಿ, ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಪರೀಕ್ಷಾ ಸಮಯದ ಮುನ್ನ ಪುನಶ್ಚೇತನ ತರಗತಿ ನಡೆಸಲಾಗುವುದು.
ಸಿ.ಆರ್‌. ಪರಮೇಶ್ವರಪ್ಪ,
ಡಿಡಿಪಿಐ.

ದಾವಣಗೆರೆ: ಕೋವಿಡ್‌-19 ಹಿನ್ನೆಲೆಯಲ್ಲಿ ಕೆಲವು ಎಸ್ಸೆಸ್ಸೆಲ್ಸಿ ಸೆಂಟರ್‌ ರದ್ದುಪಡಿಸಬೇಕು ಎಂದು ಜಿಲ್ಲಾ ಶಾಶ್ವತ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಸಂಘ ಒತ್ತಾಯಿಸಿದೆ. ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾರ್ಚ್‌, ಏಪ್ರಿಲ್‌ನಲ್ಲಿ ನಡೆಯಬೇಕಿತ್ತು.
ಕೋವಿಡ್  ನಿಂದ ಆಗುತ್ತಿರುವ ತೊಂದರೆಗಳ ಹಿನ್ನೆಲೆಯಲ್ಲಿ ಜೂನ್‌ನಲ್ಲಿ ಪರೀಕ್ಷೆಯನ್ನು ನಡೆಸುತ್ತಿರುವುದು ಸರ್ಕಾರದ ಮುಂಜಾಗ್ರತಾ ಕ್ರಮ ಸ್ವಾಗತಾರ್ಹ. ಜೂನ್‌ನಲ್ಲಿ ನಡೆಸಲಾಗುತ್ತಿರುವ ಪರೀಕ್ಷೆಗೆ ಅನೇಕ ಸಮಸ್ಯೆಎದುರಾಗುವ ಸಾಧ್ಯತೆ ಇದೆ.
ತ್ಯಾವಣಿಗಿ ವೀರಭದ್ರಸ್ವಾಮಿ,
ಮಂಡಳಿ ಅಧ್ಯಕ್ಷರು.

ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next