Advertisement

ಅಂಗನವಾಡಿ ದಾಖಲೆಗಳಿಗೆ ಸ್ನೇಹ ಆ್ಯಪ್‌

11:23 AM Dec 14, 2019 | Naveen |

ದಾವಣಗೆರೆ: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಮತ್ತು ಗರ್ಭಿಣಿಯರ ನಿಖರವಾದ ದಾಖಲಾತಿ ಮಾಹಿತಿಗಾಗಿ ಸ್ನೇಹ ಆ್ಯಪ್‌ ಪರಿಚಯಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್‌. ವಿಜಯ್‌ಕುಮಾರ್‌ ತಿಳಿಸಿದ್ದಾರೆ.

Advertisement

ಶುಕ್ರವಾರ ತಾಲೂಕು ಆಡಳಿತ, ತಾಲೂಕು ಪಂಚಾಯತ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಸಂಯುಕ್ತಾಶ್ರಯದಲ್ಲಿ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾತೃವಂದನಾ ಸಪ್ತಾಹ ಹಾಗೂ ಪೋಷಣ್‌ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸ್ನೇಹ ಆ್ಯಪ್‌ ಬಳಕೆ ಮಾಡಲಾಗುವುದು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಹಾಜರಾತಿಯಿಲ್ಲದ ಮಕ್ಕಳು, ಗರ್ಭಿಣಿಯರ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಬಳಸಿಕೊಳ್ಳಲಾಗುತ್ತಿದೆ. ಅಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ಸ್ನೇಹ ಆ್ಯಪ್‌… ಅಭಿವೃದ್ಧಿ ಪಡಿಸಿದೆ. ಆ್ಯಪ್‌ನಿಂದ ಆಹಾರ ಪದಾರ್ಥಗಳ ದುರುಪಯೋಗ ತಡೆಗಟ್ಟಲಿಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಪ್ರತಿದಿನ ಕೇಂದ್ರದಲ್ಲಿ ಹಾಜರಿದ್ದ ಮಕ್ಕಳು, ಗರ್ಭಿಣಿಯರ ಫೋಟೋ ಅಪ್‌ಲೋಡ್‌ ಮಾಡಬೇಕಾಗುತ್ತದೆ. ಹಾಗಾಗಿ ಆಹಾರ ಪದಾರ್ಥಗಳು ದುರುಪಯೋಗವಾಗುವುದಿಲ್ಲ ಎಂದು ತಿಳಿಸಿದರು. ಗರ್ಭಿಣಿಯರ ರಕ್ತದಲ್ಲಿನ ಹಿಮೋಗ್ಲೋಬಿನ್‌ ಪ್ರಮಾಣ ಶೇ. 11.5 ಇರಬೇಕು. ಕೆಲ ಗರ್ಭಿಣಿಯರಲ್ಲಿ ಶೇ. 6 ರಿಂದ 8 ಪ್ರಮಾಣದಲ್ಲಿ ಹಿಮೋಗ್ಲೋಬಿನ್‌ ಅಂಶ ಕಂಡುಬರುವುದರಿಂದ ಹುಟ್ಟುವ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬರುತ್ತಿದೆ. ಗರ್ಭಿಣಿಯರು ಸರಿಯಾದ ಸಮಯಕ್ಕೆ ಆರೋಗ್ಯ
ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಮಾತೃವಂದನಾ ಮತ್ತು ಮಾತೃಪೂರ್ಣ ಯೋಜನೆ ಸಹಕಾರಿಯಾಗಿದೆ. ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎರಡು ಯೋಜನೆಗಳಿಂದ 11 ಸಾವಿರ ರೂಪಾಯಿ ಸಹಾಯಧನ ಗರ್ಭಿಣಿಯರು ಪಡೆಯಬಹುದಾಗಿದೆ ಎಂದು ತಿಳಿಸಿದರು.

ತಾಯಂದಿರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ. ತಾಯಂದಿರಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿರುವುದರಿಂದ ಜನಿಸುವ ಮಕ್ಕಳ ತೂಕದಲ್ಲಿಯೂ ವ್ಯತ್ಯಾಸ ಉಂಟಾಗುತ್ತಿದೆ. ಆರೋಗ್ಯವಂತ ಮಗುವಿನ ತೂಕವು 2.5 ಕೆ.ಜಿ ಇರಬೇಕು. ಆದರೆ ಅಪೌಷ್ಟಿಕತೆ ಹೆಚ್ಚಾಗುತ್ತಿರುವುದರಿಂದ ಮಗುವಿನ ತೂಕ 1.5 ಕೆ.ಜಿ ಗಿಂತಲೂ ಕಡಿಮೆ ಇರುತ್ತದೆ ಎಂದು ತಿಳಿಸಿದರು.

Advertisement

ತಿಂಗಳ ಮೊದಲನೇ ಮತ್ತು ಮೂರನೇ ಶುಕ್ರವಾರಗಳಲ್ಲಿ ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಗರ್ಭಿಣಿಯರಿಗೆ ಅಂಗನವಾಡಿಗಳಲ್ಲಿ ಉಚಿತ ತಪಾಸಣೆಯನ್ನು ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.

ತಾಲೂಕು ಪಂಚಾಯತ್‌ ಕಾರ್ಯನಿರ್ವಹಕಾಧಿಕಾರಿ ಬಿ.ಎಂ.ದಾರುಕೇಶ್‌ ಮಾತನಾಡಿ, ಪ್ರತಿ ಮಗುವಿನ ಶಿಕ್ಷಣ ತಾಯಿ ಗರ್ಭದಿಂದಲೇ ಆರಂಭಗೊಳ್ಳುತ್ತದೆ. ಗರ್ಭಾವಸ್ಥೆಯಲ್ಲಿರುವಾಗಲೇ ಮಗು ಉತ್ತಮವಾದ ಆಲೋಚನೆಗಳು ಮತ್ತು ಸಂಸ್ಕಾರವನ್ನು ಅನುಸರಿಸುವುದರಿಂದ ತಾಯಿ ಉತ್ತಮ ಪರಿಸರದಲ್ಲಿರಬೇಕು. ಗರ್ಭಿಣಿಯರು ಉತ್ತಮ ಆಲೋಚನೆಗಳನ್ನು ರೂಢಿಸಿಕೊಳ್ಳಬೇಕು.
ರಾಮಾಯಣ, ಮಹಾಭಾರತ ಓದಿ ತಿಳಿದುಕೊಳ್ಳಬೇಕು. ಸಾಧ್ಯವಾದಷ್ಟು ಮೊಬೈಲ್‌ ಬಳಕೆ ಕಡಿಮೆ ಮಾಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ್‌ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಮಾತನಾಡಿ, ಸೀಮಂತ ಎನ್ನುವುದು ಪ್ರತಿ ಮಹಿಳೆಗೂ ಸಂತೋಷದ ಕ್ಷಣ. ಸರ್ಕಾರದ ವತಿಯಿಂದ ಸೀಮಂತ ಕಾರ್ಯ ಮಾಡುತ್ತಿರುವುದು ಸಂತಸದ ಸಂಗತಿ. ಗ್ರಾಮೀಣ ಭಾಗವೂ ಸೇರಿದಂತೆ ಸಮಾಜದ ಪ್ರತಿ ವರ್ಗದವರಿಗೂ ಈ ಯೋಜನೆ ತಲುಪಬೇಕು ಎಂದು ಆಗ್ರಹಿಸಿದರು.

ತಾಲೂಕು ಪಂಚಾಯತ್‌ ಉಪಾಧ್ಯಕ್ಷ ಎ.ಬಿ. ಹನುಮಂತಪ್ಪ, ಸಾಮಾಜಿಕ ನ್ಯಾಯ ಸ್ಥಾಯ ಸಮಿತಿ ಅಧ್ಯಕ್ಷ ಜಿ.ಎನ್‌. ನಾಗರಾಜ್‌, ಸದಸ್ಯ ಉಮೇಶ್‌ ನಾಯ್ಕ ಇತರರು ಇದ್ದರು. ಧರಣಿಕುಮಾರ್‌ ಸ್ವಾಗತಿಸಿರು. ಮೈತ್ರಾದೇವಿ ನಿರೂಪಿಸಿದರು. ಏಳುಕೋಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next