ದಾವಣಗೆರೆ: ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ಜಾತ್ರೆಯಲ್ಲೀಗ ಭರ್ಜರಿ ವ್ಯಾಪಾರ- ವಹಿವಾಟಿನ ಭರಾಟೆ!.
ಭಾನುವಾರದಿಂದ ಪ್ರಾರಂಭವಾಗಿರುವ ದುಗ್ಗಮ್ಮನ ಜಾತ್ರೆಯ ಗುರುವಾರ ಜನರು ತಮಗಿಷ್ಟದ ಸಾಮಾನು, ಸರಂಜಾಮು ಕೊಳ್ಳುವಲ್ಲಿ ಫುಲ್ ಬ್ಯುಸಿಯಾಗಿದ್ದರು. ಹಾಗಾಗಿ ದೇವಸ್ಥಾನದ ಸುತ್ತಮುತ್ತ ಜನ ಜಂಗುಳಿ ಸಾಮಾನ್ಯವಾಗಿತ್ತು. ಮಧ್ಯಾಹ್ನದವರೆಗೆ ಎಂದಿನಂತೆ ಸಾವಿರಾರು ಜನರು ದೇವಿಯ ದರ್ಶನ ಪಡೆದರು.
ಸಂಜೆ ವೇಳೆಗೆ ಭಕ್ತಾದಿಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದ್ದು ಕಂಡು ಬಂದಿತು. ಆರಾಮವಾಗಿ ದೇವಿಯ ದರ್ಶನ ಪಡೆಯುತ್ತಿದ್ದರು. ಸಂಜೆ ಮತ್ತು ರಾತ್ರಿ ಮತ್ತೆ ಜನರು ಬರುವುದು ಹೆಚ್ಚಾಗಲಿದೆ ಎಂದು ಕೆಲವರು ಹೇಳಿದರು.
ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ದುಗ್ಗಮ್ಮನ ಜಾತ್ರೆ ಶಿರಸಿ ಮತ್ತು ಸಾಗರದ ಮಾರಿಕಾಂಬ ಜಾತ್ರೆಯಂತೇ ಫೇಮಸ್. ರಾಜ್ಯದ ಮೂಲೆ ಮೂಲೆಗಳಿಂದ ಜನರು ಜಾತ್ರೆಗೆ ಬರುವ ಕಾರಣಕ್ಕೆ ವ್ಯಾಪಾರ- ವಹಿವಾಟು ಹೆಚ್ಚಾಗಿಯೇ ಇರುತ್ತದೆ. ಹಾಗಾಗಿಯೇ ದುಗ್ಗಮ್ಮನ ದೇವಸ್ಥಾನದ ಮುಂದೆ, ರಸ್ತೆಯಲ್ಲಿ ವಿವಿಧ ಸ್ಟೇಷನರಿ ಅಂಗಡಿಗಳ ಸಾಲು ವಾರದ ಮುನ್ನವೇ ಇರುತ್ತದೆ. ಮಾ.19 ರ ನಂತರವೂ ಅಂಗಡಿಗಳು ಇರುತ್ತವೆ.
ದುಗ್ಗಮ್ಮನ ಜಾತ್ರೆಯ ಊಟ ಸವಿದ ನಂತರ ಬಹಳಷ್ಟು ಜನರು ಖರೀದಿಗೆ ಬಂದಿದ್ದರು. ಕಾರ ಮಂಡಕ್ಕಿ, ಬೆಂಡು ಬತ್ತಾಸು, ಜಿಲೇಬಿ. ಮೈಸೂರು ಪಾಕು, ಪಾತ್ರೆ ಪಡಗ, ಲತ್ತುಡಿ, ಮಣೆ, ಬಳೆ, ಟೇಪು, ಸರ…ಒಳಗೊಂಡಂತೆ ಅನೇಕ ಸ್ಟೇಷನರಿ ಅಂಗಡಿಗಳ ಮುಂದೆಜನಜಾತ್ರೆ ಸಾಮಾನ್ಯವಾಗಿತ್ತು. ನಮ್ಮ ಊರಿನಲ್ಲೂ ಎಲ್ಲಾ ಸಾಮಾನು ಸಿಗುತ್ತವೆ. ಆದರೂ, ದುಗ್ಗಮ್ಮನ ಜಾತ್ರೆಯಲ್ಲಿ ಏನಾದರೂ ವ್ಯಾಪಾರ ಮಾಡಬೇಕು. ಬಳೆ, ಟೇಪು, ಸರ, ಮನೆ ಸಾಮಾನು… ಹಿಂಗೆ ಏನಾದರೂ ತೆಗೆದುಕೊಂಡು ಹೋಗುತ್ತೇವೆ. ಜಾತ್ರೆ ನೆನಪಿಗೆ ಇರುತ್ತದೆ. ಮನೆಗೂ ಉಪಯೋಗ ಆಗುತ್ತದೆ. ಇನ್ನ ಜಾತ್ರೆಗೆ ಬಂದೀವಿ ಅಂದ ಮೇಲೆ ಮಕ್ಕಳು ಕೇಳಬೇಕಲ್ಲ. ಅವರಿಗೂ ಏನಾದ್ರೂ ಕೊಡಿಸಲೇಬೇಕು. ಜಾತ್ರೆ ಮಾಡೋದೇ ಒಂದು ಖುಷಿ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ತಪ್ಪಿಸದೇ ಬರ್ತೀವಿ. ಜಾತ್ರೆ ವರ್ಷದಿಂದ ವರ್ಷಕ್ಕೆ ಚೆನ್ನಾಗಿ ಆಗುತ್ತಿದೆ. ದುಗ್ಗಮ್ಮನ ಆಶೀರ್ವಾದ ಎಲ್ಲರ ಮೇಲಿದೆ. ಮುಂದಿನ ಜಾತ್ರೆಗೂ ಬರುತ್ತೇವೆ… ಎಂದು ಚಿಕ್ಕಮಗಳೂರಿನಿಂದ ಬಂದಿದ್ದ ಜ್ಯೋತಿ ಎಂಬುವರ ಮಾತುಗಳು ಜಾತ್ರೆಯ ವಿಶೇಷತೆಗೆ ಸಾಕ್ಷಿಯಾಗಿದ್ದವು.
ದುಗ್ಗಮ್ಮನ ಜಾತ್ರೆ ಎಂದು ಕೇಳಬೇಕೆ. ನಾವು ಸಣ್ಣವರು ಇದ್ದಾಗನಿಂದಲೂ ಜಾತ್ರೆಗೆ ಬರ್ತಾನೆ ಇದೀವಿ. ಈಗ ಮದುವೆಯಾಗಿ ಬಾಣಾವರದಲ್ಲಿ ಇದ್ದೇವೆ. ಆದರೂ ಪ್ರತಿ ಜಾತ್ರೆಗೆ ಬರುತ್ತೇವೆ. ಬಹಳ ಚೆನ್ನಾಗಿ ಆಗುತ್ತದೆ. ಸಾಗರ ಮತ್ತೆ ಶಿರಸಿಯಲ್ಲೂ ಜಾತ್ರೆ ನಡೆಯುತ್ತಾ ಇದೆ. ಆ ಕಡೆ ಭಾಗದವರು ಆ ಜಾತ್ರೆಗೆ ಹೋಗಿರಬಹುದಾದ ಕಾರಣಕ್ಕೆ ನನಗೆ ಕಂಡಂತೆ ಈ ವರ್ಷ ಸ್ವಲ್ಪ ಜನ ಕಡಿಮೆ ಆಗಿದ್ದಾರೆ ಅನಿಸುತ್ತೆ ಎಂದು ಜಾತ್ರೆಯ ಬಗ್ಗೆ ಷರಾ ನೀಡಿದರು.
ಜಾತ್ರೆಯಲ್ಲಿ ವ್ಯಾಪಾರ ಚೆನ್ನಾಗಿದೆ. ಕೆಲವರು ರಷ್.. ಎಂದು ಶನಿವಾರ, ಭಾನುವಾರವೂ ಬರುತ್ತಾರೆ. ಮಕ್ಕಳಿಗೆ ರಜೆ ಬೇರೆ ಇರುತ್ತದೆ. ಹಾಗಾಗಿ ಬಹಳ ಜನ ಆಗಲೂ ಬರೋದು ಇದೆ. ಮಾ. 19ರ ವರೆಗೆ ಪ್ರತಿ ದಿನ ಸಾಯಂಕಾಲ ಆರ್ಕೆಸ್ಟ್ರಾ, ನಾಟಕ… ಅವು ಇವು ಕಾರ್ಯಕ್ರಮ ಇದ್ದಾಗಲೂ ಜನರು ಬರುತ್ತಾರೆ. ಆಗಾನೂ ಸ್ವಲ್ಪ ವ್ಯಾಪಾರ ಜಾಸ್ತಿ ಆಗುತ್ತದೆ. ಜಾತ್ರೆ ಮುಗಿದ ಮೇಲೆಯೇ ಲಾಭಾನಾ, ಲುಕ್ಸಾನಾ… ಎಂಬ ಪಕ್ಕಾ ಲೆಕ್ಕಾಚಾರ ಗೊತ್ತಾಗುತ್ತದೆ ಎಂದು ವ್ಯಾಪಾರಿಯೊಬ್ಬರು ಹೇಳಿದರು.
ನಿನ್ನೆ(ಬುಧವಾರ) ಮತ್ತು ಇವತ್ತು ಸ್ಪೆಷಲ್ ಊಟ ಇರುತ್ತೆ. ಹಂಗಾಗಿ ಕಾರ-ಮಂಡಕ್ಕಿ ವ್ಯಾಪಾರ ಅಷ್ಟಾಗಿ ಇಲ್ಲ. ಇನ್ನು ನಾಳೆ,
ನಾಡಿದ್ದು ಚೆನ್ನಾಗಿ ಆಗಬಹುದು ಎಂದು ಕಾರ-ಮಂಡಕ್ಕಿ ಅಂಗಡಿಯ ಕೆಲಸಗಾರರೊಬ್ಬರು ತಿಳಿಸಿದರು .
ರಾ. ರವಿಬಾಬು