Advertisement

ಲಾಕ್‌ಡೌನ್‌ ಸಡಿಲಗೊಳಿಸಿದ್ದರಿಂದ ಕೊಂಚ ರಿಲ್ಯಾಕ್ಸ್

11:11 AM Apr 24, 2020 | Naveen |

ದಾವಣಗೆರೆ: ಲಾಕ್‌ಡೌನ್‌ ಜಾರಿಯ ನಡುವೆಯೇ ರಾಜ್ಯ ಸರ್ಕಾರ ಕೆಲ ವಲಯಗಳಿಗೆ ನೀಡಿರುವ ವಿನಾಯತಿಯ ಪರಿಣಾಮ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಗುರುವಾರ 30 ದಿನಗಳ ನಂತರ ಒಂದಿಷ್ಟು ಜನರು, ವಾಹನಗಳ ಸಂಚಾರ ಕಂಡು ಬಂದಿತು.

Advertisement

ವಿನಾಯತಿ ಇದೆ ಎಂದು ತಿಳಿದಂತಹ ಕೆಲವರು ಕೆಲ ಭಾಗದಲ್ಲಿ ಹಾರ್ಡ್‌ವೇರ್‌, ಸಿಮೆಂಟ್‌, ಪೇಂಟ್‌, ಎಲೆಕ್ಟ್ರಿಕಲ್‌ ಅಂಗಡಿ, ಗ್ಯಾರೇಜ್‌, ವರ್ಕ್‌ ಶಾಪ್‌, ದ್ವಿಚಕ್ರ ವಾಹನಗಳ ಹಾಗೂ ಮೋಟಾರ್‌ ಗಳ ದುರಸ್ತಿ ಶಾಪ್‌ ತೆರೆದಿದ್ದರು. ರೈಲ್ವೆ ಹಳಿ ಆಚೆ ಭಾಗದಲ್ಲಿ ಹಾರ್ಡ್ವೇರ್‌, ಸಿಮೆಂಟ್‌, ಪೇಂಟ್‌, ಎಲೆಕ್ಟ್ರಿಕಲ್‌ ಅಂಗಡಿ, ಗ್ಯಾರೇಜ್‌ ತೆರೆಯಲು ಅವಕಾಶವನ್ನೇ ನೀಡಲಿಲ್ಲ. ಕೆ.ಆರ್‌. ರಸ್ತೆ, ದೊಗ್ಗಳ್ಳಿ ಕಾಂಪೌಂಡ್‌ ಇತರೆ ಭಾಗದಲ್ಲಿ ಅಂಗಡಿ ತೆಗೆಯಲು ಬಂದವರಿಗೆ ಪೊಲೀಸರು ತಿಳಿ ಹೇಳಿದರು. ಕೆಲ ಅಂಗಡಿಯವರನ್ನ ಠಾಣೆಗೆ ಕರೆದೊಯ್ದು ನಂತರ ಬಿಟ್ಟು ಕಳಿಸಲಾಯಿತು.

ಗ್ರಾಮೀಣ ಭಾಗದಲ್ಲಿ ನಿರ್ಮಾಣ ಕಾರ್ಯಕ್ಕೆ ವಿನಾಯತಿ ಇದೆ. ಆದರೆ ನಗರ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾರ್ಯಕ್ಕೆ ವಿನಾಯತಿ ಇಲ್ಲ. ನಿರ್ಮಾಣ ಕಾರ್ಯಕ್ಕೆ ಪೂರಕವಾಗಿರುವ ಹಾರ್ಡ್‌ವೇರ್‌, ಸಿಮೆಂಟ್‌, ಪೇಂಟ್‌, ಎಲೆಕ್ಟ್ರಿಕಲ್‌ ಅಂಗಡಿಗಳಿಗೆ ಅನುಮತಿ ನೀಡದೇ ಇರುವುದು ಸಾಕಷ್ಟು ಗೊಂದಲ-ಗೋಜಲಿಗೆ ಕಾರಣವಾಯಿತು. ಸರ್ಕಾರ ವಿನಾಯತಿ ನೀಡಿದೆ. ಹಾಗಾಗಿ ಅಂಗಡಿಯನ್ನು ಓಪನ್‌ ಮಾಡಿದ್ದೇವೆ. ಆದರೆ ಜನರಿಗೆ ಓಡಾಡಲಿಕ್ಕೆ, ಮನೆ ಕಟ್ಟಲು ಬೇಕಾದ ಸಾಮಾನು ತೆಗೆದುಕೊಂಡು ಹೋಗಲಿಕ್ಕೆ ವಾಹನಗಳಿಗೆ ಅನುಮತಿ ಇಲ್ಲ. ಇದಕ್ಕೆ ಏನೋ ಹೇಳಬೇಕೋ ಗೊತ್ತಾಗುತ್ತಿಲ್ಲ.

ಒಂದು ವಲಯಕ್ಕೆ ವಿನಾಯತಿ ನೀಡಿದರೆ ಅದಕ್ಕೆ ಪೂರಕವಾಗಿ ಇತರೆ ಕ್ಷೇತ್ರಕ್ಕೂ ವಿನಾಯತಿಯನ್ನೂ ನೀಡಬೇಕಾಗುತ್ತದೆ. ಅದು ಆಗುತ್ತಿಲ್ಲ. ಹಾಗಾಗಿ ಅಂಗಡಿ ಓಪನ್‌ ಮಾಡಿದ್ದರೂ ಜನರು ಇಲ್ಲ. ಈಗಾಗಲೇ ಒಂದು ತಿಂಗಳಲ್ಲಿ 10 ಲಕ್ಷಕ್ಕೂ ಹೆಚ್ಚು ವಹಿವಾಟು ಕಳೆದುಕೊಂಡಿದ್ದೇವೆ. ದಾವಣಗೆರೆಯಲ್ಲಿ ಏನಿಲ್ಲವೆಂದರೂ
200ಕ್ಕೂ ಹೆಚ್ಚು ಹಾರ್ಡ್‌ವೇರ್‌ ಶಾಪ್‌ಗ್ಳಿವೆ. ಎಷ್ಟು ವ್ಯಾಪಾರ ನಷ್ಟ ಆಗಿರಬಹುದು ಎಂದು ಲೆಕ್ಕ ಹಾಕಬಹುದು ಎನ್ನುವ ಹಾರ್ಡ್ ವೇರ್‌ ಮಾಲೀಕರು ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಸರಿ ಎಂಬುದನ್ನೂ ಸಮರ್ಥಿಸಿದರು.

“ವ್ಯಾಪಾರಿ ಸ್ಥಳ’ ಎಂದೇ ಕರೆಯಲ್ಪಡುವ ಚೌಕಿಪೇಟೆಯಲ್ಲಿ ಲಾರಿಗಳ ಸಾಲೇ ಕಂಡು ಬಂದಿತು. ಬೇರೆ ಬೇರೆ ಕಡೆಯಿಂದ ಅಗತ್ಯ ಸಾಮಾನು ಹೊತ್ತು ತಂದಂತಹ ಲಾರಿಗಳ ಅನ್‌ಲೋಡಿಂಗ್‌ ಒಂದು ಕಡೆ ಇದ್ದರೆ ಇನ್ನೊಂದು ಕಡೆ ಲೋಡಿಂಗ್‌ ನಡೆಯುತ್ತಿತ್ತು. ಹೊರ ಭಾಗದಿಂದ ಬಂದಂತಹವರ ಆರೋಗ್ಯ ತಪಾಸಣೆಯ ಯಾವುದೇ ಸುಳಿವೂ ಸಹ ಕಂಡು ಬರಲಿಲ್ಲ. ಕೆಲವಾರು ಕ್ಷೇತ್ರಕ್ಕೆ ವಿನಾಯತಿ ನೀಡಿರುವುದು ಲಾಕ್‌ಡೌನ್‌ ಸಡಿಲಿಕೆಗೂ ಕಾರಣವಾಗಿತ್ತು. ಅನೇಕ ಭಾಗದಲ್ಲಿ ಸಾಮಾನ್ಯ ದಿನಗಳಂತೆ ಜನರು ಓಡಾಡಿದರು. ಬ್ಯಾಂಕ್‌ಗಳ ಮುಂದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ನೂರಾರು ಜನರು ಸರತಿ ಸಾಲಲ್ಲಿ ನಿಂತಿದ್ದು ಸಾಮಾನ್ಯವಾಗಿತ್ತು. ಲಾಕ್‌ಡೌನ್‌ ಇದ್ದರೂ ಕೆಲ ಭಾಗದಲ್ಲಿ ಟ್ರಾಫಿಕ್‌ ಜಾಮ್‌ನಿಂದ ಎಲ್ಲರೂ ಸಮಸ್ಯೆ ಅನುಭವಿಸುವಂತಾಗಿದ್ದು ಮತ್ತೊಂದು ವಿಶೇಷ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮನೆಯ ಬಾಗಿಲಿಗೆ ತರಕಾರಿ, ಹಣ್ಣು ವಿತರಿಸುವ ವ್ಯವಸ್ಥೆ ಮಾಡಿದ್ದರ ನಡುವೆಯೂ ಜನರು ಮುಗಿ ಬಿದ್ದು ತರಕಾರಿ, ಸೊಪ್ಪು, ಹಣ್ಣು ಖರೀದಿ ಮಾಡುತ್ತಿದ್ದರು. ಸಾಮಾಜಿಕ ಅಂತರ ಎಂಬುದು ಅಕ್ಷರಶಃ ಕಾಣೆಯಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next