ದಾವಣಗೆರೆ: ರೈಲ್ವೆ ನೇಮಕಾತಿಯಲ್ಲಿ ಸ್ಥಳೀಯ ಕನ್ನಡಗರಿಗೆ ಮೀಸಲಾತಿ ಸೌಲಭ್ಯಕ್ಕೆ ಒತ್ತಾಯಿಸಿ ಶುಕ್ರವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ(ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ನೇತೃತ್ವದಲ್ಲಿ ರೈಲ್ವೆ ನೇಮಕಾತಿ ಹೋರಾಟ ಸಮಿತಿ, ನವ ನಿರ್ಮಾಣ ಸಮಿತಿ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರೈಲ್ವೆ ಇಲಾಖೆಯಲ್ಲಿನ ಡಿ ದರ್ಜೆಯ ವಾಟರ್‌ಮ್ಯಾನ್, ಟ್ರಾಫಿಕ್‌ಮ್ಯಾನ್, ಟ್ವಿಟ್ಟರ್, ಜಾಯಿಂಟ್ ಮ್ಯಾನ್, ಧ್ವಜ ಬೀಸುವಿಕೆ, ಕ್ಲಾಪ್‌ಮ್ಯಾನ್ ಇತರೆ ಹುದ್ದೆಗಳಿಗೆ ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳಬೇಕು. ಆದರೆ, ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಈ ವ್ಯವಸ್ಥೆ ರದ್ದುಪಡಿಸಿ, ಹುಬ್ಬಳ್ಳಿಯ ರೈಲ್ವೆ ನೇಮಕಾತಿ ಕೋಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯಿಂದ ಈಚೆಗೆ ನಡೆದ 2,200 ಹುದ್ದೆಗಳ ನೇಮಕಾತಿಯಲ್ಲಿ 22 ಕನ್ನಡಿಗರು ಮಾತ್ರ ನೇಮಕವಾಗಿದ್ದಾರೆ. ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯಿಂದ ಯಾವುದೇ ರಾಜ್ಯದವರೇ ಆಗಿರಲಿ, ಕರ್ನಾಟದಕಲ್ಲಿ ಪರೀಕ್ಷೆ ಬರೆಯವ ಅವಕಾಶ ಇರುವುದರಿಂದ ಬೇರೆ ರಾಜ್ಯದವರು ಆಯ್ಕೆಯಾಗಲು ಸಾಧ್ಯವಾಗುತ್ತಿದೆ. ಪರೀಕ್ಷೆಯ ಬಗ್ಗೆಯೇ ಅನುಮಾನ ಇದೆ. ಒಕ್ಕೂಟದ ವ್ಯವಸ್ಥೆಗೆ ವಿರುದ್ಧವಾಗಿರುವ ಪದ್ಧತಿ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮಾದರಿಯಲ್ಲಿ ಸ್ಥಳೀಯ ಕನ್ನಡಿಗರಿಗೆ ಶೇ.80 ರಷ್ಟು ಉದ್ಯೋಗ ಮೀಸಲಾತಿ ನೀಡುವ ಮೂಲಕ ಸ್ಥಳೀಯರಿಗೆ ಅನುಕೂಲ ಮಾಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಗುಮ್ಮನೂರು ಬಸವರಾಜ್, ಕಾಡಜ್ಜಿ ಪ್ರಕಾಶ್, ಕೋಲ್ಕುಂಟೆ ಬಸಣ್ಣ, ಕುಕ್ಕುವಾಡ ಪರಮೇಶ್, ಆಲೂರು ಪರಶುರಾಮ್, ಹುಚ್ಚವ್ವನಹಳ್ಳಿ ಪ್ರಕಾಶ್, ಕೆ.ಎನ್. ವೆಂಕಟೇಶ್, ರಂಗನಾಥ್, ಸಂತೋಷ್ ರಾವ್ ಇತರರು ಇದ್ದರು.