ದಾವಣಗೆರೆ: ಲಾಕ್‌ಡೌನ್‌ನಡುವೆಯೂ ಕೃಷಿ ಸಂಬಂಧಿತ ಚಟುವಟಿಕೆಗೆ ವಿನಾಯತಿ ನೀಡಿರುವುದರಿಂದ ಮೆಕ್ಕೆಜೋಳ ಬೆಳೆಗಾರರ ಸಮಸ್ಯೆ ದೂರವಾಗುತ್ತಿದೆ. ಆದರೆ ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂಬ ಕೂಗು ಕಾರ್ಯಗತವಾಗುವ ಯಾವುದೇ ಲಕ್ಷಣ ಕಂಡು ಬರುತ್ತಿಲ್ಲ.
ಮಾ.17 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೋಬಳಿ ಕೇಂದ್ರದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿತ್ತು. ಆದರೆ ಒಂದು ತಿಂಗಳೇ ಕಳೆದರೂ ಪ್ರಸ್ತಾವನೆ ಕಾರ್ಯಗತವಾಗಿಲ್ಲ.
“ಮೆಕ್ಕೆಜೋಳದ ಕಣಜ’ ಎಂದೇ ಖ್ಯಾತಿಯ ಜಿಲ್ಲೆಯಲ್ಲಿ 2019-20ರ ಮುಂಗಾರು ಹಂಗಾಮಿನಲ್ಲಿ 1,18,652 ಹೆಕ್ಟೇರ್‌ನಲ್ಲಿ 4,542 ಅಂದಾಜು ಇಳುವರಿ(ಕೆಜಿ/ಹೆಕ್ಟೇರ್), ಹಿಂಗಾರು ಹಂಗಾಮಿನಲ್ಲಿ 340 ಹೆಕ್ಟೇರ್‌ನಲ್ಲಿ 3,221 ಅಂದಾಜು ಇಳುವರಿ (ಕೆಜಿ/ಹೆಕ್ಟೇರ್)ಮತ್ತು ಬೇಸಿಗೆ ಹಂಗಾಮಿನಲ್ಲಿ 275 ಹೆಕ್ಟೇರ್‌ನಲ್ಲಿ 3,951 ಅಂದಾಜು ಇಳುವರಿ(ಕೆಜಿ/ಹೆಕ್ಟೇರ್) ಬರಬಹುದು ಎಂದು ಅಂದಾಜಿಸಲಾಗಿದೆ.
ಈಗಾಗಲೇ ಮಾರುಕಟ್ಟೆಗೆ ಮೆಕ್ಕೆಜೋಳವೂ ಬರುತ್ತಿದೆ. ಲಾಕ್‌ಡೌನ್ ಜಾರಿಯಲ್ಲಿದ್ದರ ಜೊತೆಗೆ ಜಿಲ್ಲೆಯಲ್ಲಿ ಕಾಣಿಸಿಕೊಂಡ ಹಕ್ಕಿಜ್ವರದ ಹಿನ್ನೆಲೆಯಲ್ಲಿ ಕೋಳಿಫಾರಂ ಸಹ ಮುಚ್ಚಿವೆ. ಇದು ಮೆಕ್ಕೆಜೋಳದ ಧಾರಣೆ ಪಾತಾಳಕ್ಕೆ ಕುಸಿಯುವಂತೆ ಮಾಡಿತ್ತು. 2 ಸಾವಿರ ರೂ. ಆಸುಪಾಸಿನಲ್ಲಿದ್ದ ಬೆಲೆ ಏಕಾಏಕಿ ಒಂದು ಸಾವಿರಕ್ಕೆ ಇಳಿದು ಮೆಕ್ಕೆಜೋಳ ಬೆಳೆಗಾರರ ಜಂಘಾಬಲವನ್ನೇ ಉಡುಗಿಸಿತ್ತು. ಪ್ರಥಮ ಹಂತದ ಲಾಕ್‌ಡೌನ್ ನಡುವೆಯೂ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾರಂಭಕ್ಕೆ ಷರತ್ತುಬದ್ಧ ಅನುಮತಿ ನೀಡಿದ ನಂತರ ಮೆಕ್ಕೆಜೋಳ ಅವಕವಾಗಲಾರಂಭಿಸಿತು.
ಧಾರಣೆಯಲ್ಲೂ ಸುಧಾರಣೆ ಕಂಡು ಬರುತ್ತಿರುವುದು ಬೆಳೆಗಾರರಲ್ಲಿ ತುಸು ನೆಮ್ಮದಿಗೆ ಕಾರಣವಾಗಿದೆ. ರೈತರ ಅನುಕೂಲಕ್ಕಾಗಿ ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂಬ ಅನ್ನದಾತರ ಒತ್ತಾಯ ಹೆಚ್ಚಾಗಿದೆ. 2013 ರವರೆಗೆ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳವನ್ನು ಖರೀದಿ ಮಾಡಲಾಗುತ್ತಿತ್ತು. ಮೆಕ್ಕೆಜೋಳ ಆಹಾರ ಪದಾರ್ಥ ಅಲ್ಲ. ಹಾಗಾಗಿ ಪಡಿತರ ವ್ಯವಸ್ಥೆಯಡಿ ವಿತರಣೆ ಮಾಡಲು ಬರುವುದಿಲ್ಲ ಎನ್ನುವ ಕಾರಣ ನೀಡಿ 2014 ರಿಂದ ಖರೀದಿ ಕೇಂದ್ರದ ಮೂಲಕ ಖರೀದಿ ನಿಲ್ಲಿಸಲಾಗಿದೆ. ಆದರೆ ಕೇಂದ್ರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡುತ್ತಿದೆ. ರಾಜ್ಯ ಸರ್ಕಾರ ಪ್ರೋತ್ಸಾಹಧನ ನೀಡುತ್ತಿರುವುದು ನಿಜಕ್ಕೂ ಅರ್ಥವಾಗದ ವಿಷಯ.
ಖರೀದಿ ಮಾಡಲಾಗದು ಎನ್ನುವುದಾದರೆ ಬೆಂಬಲ ಬೆಲೆ ಘೋಷಣೆ ಮಾಡುವುದೇಕೆ ಎಂಬುದು ರಾಜ್ಯ ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಪ್ರಶ್ನೆ. ಮೆಕ್ಕೆಜೋಳವನ್ನ ಪಿಡಿಎಫ್‌ನಿಂದ ಹೊರಗಿಸಿದರೆ ಖರೀದಿ ಕೇಂದ್ರ ಪ್ರಾರಂಭಕ್ಕೆ ಮತ್ತೆ ಅವಕಾಶ ದೊರೆಯಬಹುದು ಎನ್ನುತ್ತಾರವರು.
ರೈತರ ಅನುಕೂಲಕ್ಕಾಗಿ ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಆದರೆ ಅದಕ್ಕಿಂತಲೂ ಮುಖ್ಯವಾಗಿ ಆಗಬೇಕಾಗಿರುವುದು ಪಡಿತರ ವ್ಯವಸ್ಥೆಯಡಿ ವಿತರಣೆ ಮಾಡುವಂತಹ ಉತ್ಪನ್ನಗಳನ್ನು ಮಾತ್ರ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬೇಕು ಎಂಬ ಕೇಂದ್ರ ಸರ್ಕಾರದ ತೀರ್ಮಾನದಲ್ಲಿ ಬದಲಾವಣೆ ಆಗಬೇಕು.
ಹುಚ್ಚವ್ವನಹಳ್ಳಿ ಮಂಜುನಾಥ್,
ರಾಜ್ಯ ರೈತ ಸಂಘದ ಅಧ್ಯಕ್ಷ
ರಾ. ರವಿಬಾಬು