ದಾವಣಗೆರೆ: ಹಿಂದೂಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿಯನ್ನು ಶನಿವಾರ (ಸೆ.21) ತಡರಾತ್ರಿ ಸಾಗರದಲ್ಲಿ ವಶಕ್ಕೆ ಪಡೆಯಲಾಗಿದೆ.
ದಾವಣಗೆರೆಯಲ್ಲಿ ಗುರುವಾರ ಬೇತೂರು ರಸ್ತೆಯ ವೆಂಕಾಭೋವಿ ಕಾಲೋನಿಯ ಗಣೇಶನ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟಕ್ಕೆ ಪ್ರಚೋದನಾತ್ಮಕ ಹೇಳಿಕೆ ಕಾರಣ ಎಂಬುದಾಗಿ ಕೇಳಿ ಬಂದಿತ್ತು.
ನಾಗಮಂಗಲದ ಗಣೇಶನ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಾಟೆ ವಿರೋಧಿಸಿ ಬುಧವಾರ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು.
ಗುರುವಾರ ವೆಂಕಾಭೋವಿ ಕಾಲೋನಿಯ ಗಣೇಶ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಕಲ್ಲುತೂರಾಟ ನಡೆದು ಇಬ್ಬರು ಪೊಲೀಸರು ಸೇರಿದಂತೆ ಅನೇಕರಿಗೆ ಗಾಯಗಳಾಗಿದ್ದವು. ಮನೆಗಳ ಮೇಲೂ ಕಲ್ಲು ತೂರಲಾಗಿತ್ತು. ಮನೆಗಳ ಮುಂದೆ ಕಾರು, ಬೈಕ್ ಜಖಂ ಗೊಳಿಸಲಾಗಿತ್ತು. ಗುರುವಾರ ದಾವಣಗೆರೆಯಲ್ಲಿ ನಡೆದ ಗಲಾಟೆಗೆ ಪ್ರಚೋದನಾತ್ಮಕ ಹೇಳಿಕೆಯೇ ಪ್ರಮುಖ ಕಾರಣ ಎಂಬುದು ಕೇಳಿ ಬಂದಿತ್ತು.
ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆರ್. ಹಿತೇಂದ್ರ, ಪೂರ್ವ ವಲಯ ಉಪ ಪೊಲೀಸ್ ಮಹಾ ನಿರೀಕ್ಷಕ ಆರ್. ರಮೇಶ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಎಲ್ಲರೂ ಇದೇ ಅಂಶ ತಿಳಿಸಿದ್ದರು.
ದಾವಣಗೆರೆಯಲ್ಲಿ ಗಲಾಟೆ ನಡೆದ ನಂತರ ನಾಪತ್ತೆಯಾಗಿದ್ದ ಸತೀಶ್ ಪೂಜಾರಿ ವಶ ಪಡೆಯಲು ಪೊಲೀಸರು ಸಾಕಷ್ಟು ಕಾರ್ಯಾಚರಣೆ ನಡೆಸಿದ್ದರು. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸಾಗರದಲ್ಲಿದ್ದ ಸತೀಶ್ ಪೂಜಾರಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ದಾವಣಗೆರೆಗೆ ಕರೆ ತಂದಿದ್ದಾರೆ.