Advertisement

ಭಾರೀ ಗಾಳಿ-ಮಳೆಗೆ ದೇವನಗರಿ ಜನ ತತ್ತರ

05:36 PM Apr 20, 2022 | Team Udayavani |

ದಾವಣಗೆರೆ: ನಗರದಲ್ಲಿ ಸೋಮವಾರ ರಾತ್ರಿ ಮಳೆ, ಗಾಳಿಯಿಂದ ಜನರು ತೀವ್ರ ತೊಂದರೆ ಅನುಭವಿಸಿದರು. ಎಸ್‌ಪಿಎಸ್‌ ನಗರದಲ್ಲಿ ಉಪ್ಪಾಲ ನಾಗರಾಜ್‌ ಎಂಬುವರ ಮನೆ ಬಿದ್ದಿದೆ. ಭಾರೀ ಮಳೆ ಮತ್ತು ಗಾಳಿಗೆ ಮನೆಯ ಮೇಲ್ಛಾವಣಿ ಕುಸಿದಿದ್ದು ಕುಟುಂಬ ಸದಸ್ಯರು ಬಯಲಲ್ಲೇ ಇಡೀ ರಾತ್ರಿ ಕಳೆಯಬೇಕಾಯಿತು.

Advertisement

ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎಂಸಿಸಿ ಬಿ ಬ್ಲಾಕ್‌ನ ತೊಗಟವೀರ ಕಲ್ಯಾಣ ಮಂಟಪ ರಸ್ತೆಯಲ್ಲಿ ಭಾರೀ ಗಾತ್ರದ ಮರ ಉರುಳಿ ಬಿದ್ದ ಪರಿಣಾಮ ಕಾರ ಜಖಂಗೊಂಡಿದೆ. ಇತರೆ ವಾಹನಗಳಿಗೂ ಹಾನಿಯಾಗಿದೆ. ಹಗೇದಿಬ್ಬ ವೃತ್ತದಲ್ಲಿ ಮರ ಬಿದ್ದ ಪರಿಣಾಮ ಮೂರು ಬೈಕ್‌ಗಳು ಜಖಂಗೊಂಡಿವೆ. ಮಹಾನಗರ ಪಾಲಿಕೆ ಮುಂಭಾಗ ಇರುವ ರೈಲ್ವೆ ಕೆಳ ಸೇತುವೆಯಲ್ಲಿ ಮಳೆ ನೀರು ನಿಂತ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಇತ್ತೀಚಿಗೆ 70 ಲಕ್ಷ ರೂಪಾಯಿ ವ್ಯಯಿಸಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಲಾಗಿದೆಯಾದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಮೇಯರ್‌ ಜಯಮ್ಮ ಗೋಪಿ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಿಯೂ ಮಳೆ ನೀರು ನಿಲ್ಲದಂತೆ ಕ್ರಮ ತೆಗೆದುಕೊಳ್ಳಬೇಕು. ರಾಜಕಾಲುವೆಯಲ್ಲಿನ ಹೂಳು ತೆಗೆಸಿ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕು ಎಂದು ಆಯುಕ್ತ ವಿಶ್ವನಾಥ್‌ ಪಿ. ಮುದಜ್ಜಿ ಅವರಿಗೆ ತಿಳಿಸಿದರು. ಭಾನುವಾರ ಮತ್ತು ಸೋಮವಾರ ರಾತ್ರಿ ದಿಢೀರ್‌ ಸುರಿದ ಮಳೆಯಿಂದ ತಂಪಿನ ವಾತಾವರಣ ನಿರ್ಮಾಣವಾದರೂ ಮಳೆ ಸಮಸ್ಯೆ ಉಂಟು ಮಾಡಿದೆ.

ಮಳೆಯಿಂದ 17.85 ಲಕ್ಷ ರೂ. ನಷ್ಟ
ದಾವಣಗೆರೆ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 10 ಮಿಮೀ ಮಳೆ ದಾಖಲಾಗಿದ್ದು, ಅಂದಾಜು 17.85 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ. ಚನ್ನಗಿರಿ
ತಾಲೂಕಿನಲ್ಲಿ 9 ಮಿಮೀ, ದಾವಣಗೆರೆ ತಾಲೂಕಿನಲ್ಲಿ 4, ಹರಿಹರ ತಾಲೂಕಿನಲ್ಲಿ 4, ಹೊನ್ನಾಳಿ ತಾಲೂಕಿನಲ್ಲಿ 12, ಜಗಳೂರು ತಾಲೂಕಿನಲ್ಲಿ 5.04 ಹಾಗೂ ನ್ಯಾಮತಿ ತಾಲೂಕಿನಲ್ಲಿ 9 ಮಿಮೀ ಮಳೆಯಾಗಿದೆ. ದಾವಣಗೆರೆ ತಾಲೂಕು ವ್ಯಾಪ್ತಿಯಲ್ಲಿ ಮೂರು ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ.

Advertisement

5 ಎಕರೆ ಬಾಳೆ ಬೆಳೆ ಮತ್ತು 1 ಎಕರೆ ಮೆಕ್ಕೆಜೋಳ ಬೆಳೆ ಹಾನಿಯಾಗಿದ್ದು ಒಟ್ಟು 5.75 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ. ಹರಿಹರ ತಾಲೂಕಿನಲ್ಲಿ ಎರಡು ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 60ಸಾವಿರ ರೂ.ಗಳಷ್ಟು ನಷ್ಟ ಸಂಭವಿಸಿದೆ. ನ್ಯಾಮತಿ ತಾಲೂಕಿನಲ್ಲಿ ಎರಡು ಎಕರೆ ಬಾಳೆ ಮತ್ತು 3.20 ಎಕರೆ ಮೆಕ್ಕೆಜೋಳ ಬೆಳೆಗೆ ಹಾನಿಯಾಗಿ ಒಟ್ಟು 1.30 ಲಕ್ಷ ರೂ. ನಷ್ಟ ಸಂಭವಿಸಿದೆ. ಚನ್ನಗಿರಿ ತಾಲೂಕಿನಲ್ಲಿ ಒಂದು ಕಚ್ಚಾ ಮನೆಗೆ ಹಾನಿಯಾಗಿದ್ದು 70 ಸಾವಿರ ರೂ. ನಷ್ಟ ಸಂಭವಿಸಿದೆ.

ಜಗಳೂರು ತಾಲೂಕಿನಲ್ಲಿ 15 ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಎರಡು ಎಕರೆ ಈರುಳ್ಳಿ ಬೆಳೆ ಮತ್ತು 7 ಎಕರೆ ಬಾಳೆ ಬೆಳೆ ಹಾನಿಯಾಗಿದ್ದು ಒಟ್ಟು 9.50 ಲಕ್ಷ ರೂ. ನಷ್ಟ ಸಂಭವಿಸಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next