ದಾವಣಗೆರೆ: ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮದಲ್ಲಿ ಫಸಲಿಗೆ ಬಂದಿದ್ದಂತಹ ನೂರಾರು ಎಕರೆ ಪ್ರದೇಶದಲ್ಲಿನ ಭತ್ತ ಭಾರೀ ಮಳೆ, ಗಾಳಿಗೆ ಸಂಪೂರ್ಣವಾಗಿ ನೆಲಕಚ್ಚಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಮಳೆ ಮತ್ತು ಗಾಳಿಯ ಪರಿಣಾಮ ಕಟಾವು ಹಂತದಲ್ಲಿನ ಭತ್ತ ಹಾಳಾಗಿದೆ. ಗ್ರಾಮೀಣ ಭಾಷೆಯಲ್ಲಿ ಹೇಳುವಂತೆ, ಭತ್ತ ಚಾಪೆ ಸುತ್ತಿದ್ದಂತಾಗಿದೆ. ಹಾಗಾಗಿ ಬೆಳೆಗಾರರ ಕೈಗೆ ದೊರೆಯುವ ಮುನ್ನವೇ ನೀರು ಪಾಲಾಗಿದೆ.
ಬರದ ನಡುವೆಯೂ ಕೊಳವೆಬಾವಿಯ ಮೂಲಕ ಭತ್ತ ಬೆಳೆದಿದ್ದ ರೈತರಿಗೆ ಮಳೆಯಾಗಿದ್ದು ಒಂದು ಕಡೆ ಸಂತಸ ತಂದರೆ, ಮತ್ತೊಂದೆಡೆ ಬೆಳೆದ ಭತ್ತ ನೀರು ಪಾಲಾಗಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.
ಸಾಲ ಮಾಡಿ ಒಂದು ಎಕರೆಯಲ್ಲಿ ನಾಟಿ ಮಾಡಿದ್ದಂತಹ ಭತ್ತ ಮಳೆಗೆ ಎಲ್ಲ ಹಾಳಾಗಿ ಹೋಗಿದೆ. ಏನಿಲ್ಲವೆಂದರೂ ಐವತ್ತು ಸಾವಿರ ಲಾಭ ಆಗುತ್ತಿತ್ತು. ಅಷ್ಟೊಂದು ಚೆನ್ನಾಗಿ ಭತ್ತ ಬಂದಿತ್ತು. ಆದರೆ, ಈಗ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನುವಂತಾಗಿದೆ. ಮಳೆಯಿಲ್ಲದೇ ಬರ ಆವರಿಸಿದ್ದರೂ ಬೋರ್ ವೆಲ್ ಮೂಲಕ ನೀರು ಹರಿಸಿ ಭತ್ತ ನಾಟಿ ಮಾಡಿದ್ದೆ ಹಗಲು ರಾತ್ರಿ ನೀರು ಕಟ್ಟಲಾಗಿತ್ತು. ಈಗ ಎಲ್ಲವೂ ನೀರಿನಲ್ಲಿ ಹೋಮ ಮಾಡ ದಂತೆ ಆಗಿದೆ ಎಂದು ಅನೇಕರು ಅಳಲು ತೋಡಿಕೊಂಡಿದ್ದಾರೆ.
ಅಧಿಕಾರಿಗಳು ಭೇಟಿನೀಡಿ ಸರ್ವೇ ಮಾಡಿ ನಷ್ಟ ಭರಿಸಿಕೊಡಬೇಕು ಎಂದು ಅಳಲು ದೊಡ್ಡಬಾತಿ ಗ್ರಾಮದ ಹಲವಾರು ರೈತರು ಒತ್ತಾಯಿಸಿದ್ದಾರೆ.