Advertisement

ಹೊಸ ಸರ್ಕಾರದ ಮೇಲೆ ಬೆಟ್ಟದಷ್ಟು ನಿರೀಕ್ಷೆ

06:33 PM Jul 29, 2021 | Team Udayavani |

ದಾವಣಗೆರೆ: ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡಿದ್ದು, ನೂತನ ಸರ್ಕಾರದಿಂದ ಸರ್ಕಾರಿ ವೈದ್ಯಕೀಯ, ಕೃಷಿ, ಸಹಕಾರಿ ಕಾಲೇಜು, ಮೆಕ್ಕೆಜೋಳ ಸಂಸ್ಕರಣಾ ಘಟಕ, ವಿಮಾನ ನಿಲ್ದಾಣ, ಜವಳಿ ಪಾರ್ಕ್‌, ಏತ ನೀರಾವರಿ ಯೋಜನೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ನೆರವೇರಲಿವೆಯೇ ಎಂಬ ಬಹು ನಿರೀಕ್ಷೆ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿದೆ. “ಮೆಡಿಕಲ್‌ ಹಬ್‌ ‘ಖ್ಯಾತಿಯ ದಾವಣಗೆರೆಯಲ್ಲಿ ಈಗಾಗಲೇ ಎರಡು ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಿವೆ.

Advertisement

ದಾವಣಗೆರೆ ಮಾತ್ರವಲ್ಲ, ಚಿತ್ರದುರ್ಗ, ಹಾವೇರಿ, ವಿಜಯನಗರ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ರೆಫರೆಲ್‌ ಆಸ್ಪತ್ರೆಯಾಗಿರುವ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಪ್ರತಿ ನಿತ್ಯ ಹೊರ ರೋಗಿಗಳಾಗಿ 2-3 ಸಾವಿರ ಜನ ಆಗಮಿಸುತ್ತಾರೆ. ನೂರಾರು ಜನ ಒಳರೋಗಿಗಳಾಗಿ ದಾಖಲಾಗುತ್ತಾರೆ. ಹಾಗಾಗಿ ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕು ಎಂಬ ದಶಕಗಳ ಬೇಡಿಕೆಗೆ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಸ್ಪಂದಿಸಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಒಪ್ಪಿಗೆ ಸೂಚಿಸಿದೆ.

ಆದರೆ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಆಗುವುದರಿಂದ ಸಾರ್ವಜನಿಕರಿಗೆ ಅಷ್ಟಾಗಿ ಅನುಕೂಲ ಆಗುವುದಿಲ್ಲ. ಸರ್ಕಾರವೇ ಕಾಲೇಜು ಪ್ರಾರಂಭಿಸಬೇಕು. ಜಿಲ್ಲಾ ಚಿಗಟೇರಿ ಆಸ್ಪತ್ರೆ 1030 ಹಾಸಿಗೆ ಸಾಮರ್ಥ್ಯ ಹೊಂದಿದೆ. ವೈದ್ಯಕೀಯ ಕಾಲೇಜಿಗೆ ಅಗತ್ಯವಾಗಿರುವ 25 ಎಕರೆಗೂ ಹೆಚ್ಚು ಜಾಗ ಇದೆ. 30 ವರ್ಷಕ್ಕಿಂತಲೂ ಹಿಂದಿನಿಂದ ಆಸ್ಪತ್ರೆ ನಡೆಯುತ್ತಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರವೇ ವೈದ್ಯಕೀಯ ಕಾಲೇಜು ಆರಂಭಿಸಬೇಕು. ಸರ್ಕಾರಕ್ಕೆ 30-35 ಕೋಟಿ ರೂ. ಹೊರೆ ಆಗಲಾರದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ನೂತನ ಸರ್ಕಾರ ಜನರ ಬೇಡಿಕೆಗೆ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಜವಳಿ ಮಿಲ್‌ಗ‌ಳಿಂದಾಗಿಯೇ “ಮ್ಯಾಂಚೆಸ್ಟರ್‌ ಸಿಟಿ’ ಎಂಬ ಖ್ಯಾತಿಗೆ ಪಾತ್ರವಾಗಿದ್ದ ದಾವಣಗೆರೆಯಲ್ಲಿ ಯಥೇತ್ಛವಾಗಿ ಹತ್ತಿ ಬೆಳೆಯಲಾಗುತ್ತಿತ್ತು. ಮಿಲ್‌ ಮುಚ್ಚಿದ ನಂತರ ಹತ್ತಿ ಜಾಗದಲ್ಲಿ ಮೆಕ್ಕೆಜೋಳ ಪ್ರಮುಖ ಬೆಳೆಯಾಗಿದೆ. ದಾಖಲೆ ಪ್ರಮಾಣದಲ್ಲಿ ಬೆಳೆಯುತ್ತಿರುವ ಕಾರಣಕ್ಕೆ “ಮೆಕ್ಕೆಜೋಳದ ಕಣಜ’ ಎಂಬ ಅನ್ವರ್ಥಕ ನಾಮಕ್ಕೂ ಪಾತ್ರವಾಗಿದೆ. ಮೆಕ್ಕೆಜೋಳ ಬೆಳೆಗಾರರ ಅನುಕೂಲಕ್ಕಾಗಿ ಸಂಸ್ಕರಣ ಘಟಕ ಪ್ರಾರಂಭಿಸಬೇಕು ಎಂಬುದು ರೈತಾಪಿ ವರ್ಗ, ಸಾರ್ವಜನಿಕರ ಒತ್ತಾಯಕ್ಕೆ ದಶಕಗಳ ಇತಿಹಾಸವೇ ಇದೆ. ಆದರೆ ಈವರೆಗೆ ಬೇಡಿಕೆ ಈಡೇರಿಲ್ಲ. ನೂತನ ಸರ್ಕಾರ ಮೆಕ್ಕೆಜೋಳ ಸಂಸ್ಕರಣಾ ಘಟಕ ಪ್ರಾರಂಭಿಸಿದಲ್ಲಿ ರೈತರಿಗೆ ಮಾತ್ರವಲ್ಲ ಸಾರ್ವಜನಿಕರಿಗೂ ಉದ್ಯೋಗವಕಾಶದ ವಾತಾವರಣ ನಿರ್ಮಾಣವಾಗಲಿದೆ. ಸರ್ಕಾರ ಸಂಸ್ಕರಣಾ ಘಟಕದ ಪ್ರಾರಂಭಕ್ಕೆ ಮುಂದಾಗಲಿದೆಯೇ ಎಂಬ ಕುತೂಹಲದ ಪ್ರಶ್ನೆ ಎಲ್ಲರಲ್ಲಿದೆ.

“ಮ್ಯಾಂಚೆಸ್ಟರ್‌ ಸಿಟಿ’ ಖ್ಯಾತಿಯನ್ನು ಮರಳಿ ತರುವ ನಿಟ್ಟಿನಲ್ಲಿ ದಾವಣಗೆರೆಯಲ್ಲಿ ಜವಳಿ ಪಾರ್ಕ್‌ ಪ್ರಾರಂಭಿಸಲಾಗಿದೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಯಶ ಕಾಣುತ್ತಿಲ್ಲ. ನೂತನ ಸರ್ಕಾರ ಜವಳಿ ಪಾರ್ಕ್‌ಗೆ ಉತ್ತೇಜನ ನೀಡಿದಲ್ಲಿ ದಾವಣಗೆರೆಯಲ್ಲಿ ಉದ್ಯೋಗವಕಾಶದ ವಾತಾವರಣ ಇಲ್ಲ ಎಂಬ ಕೊರಗು ದೂರವಾಗಬಹುದು. ಸಾವಿರಾರು ದುಡಿಯುವ ಕೈಗಳಿಗೆ ಕೆಲಸ ದೊರೆಯುವಂತಾಗಲಿದೆ. “ಅರೆ ಮಲೆನಾಡು’ ಖ್ಯಾತಿಯ ದಾವಣಗೆರೆ ಜಿಲ್ಲೆಯಲ್ಲಿ ದಾವಣಗೆರೆ ತಾಲೂಕಿನ ಅರ್ಧ ಭಾಗ, ಜಗಳೂರು, ಚನ್ನಗಿರಿಯ ಕೆಲ ಭಾಗ ಮಳೆಯಾಶ್ರಿತ ಪ್ರದೇಶಗಳಾಗಿವೆ. ಮಳೆಯ ಜೂಜಾಟದ ಫಲವಾಗಿ ಪ್ರತಿ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬೆಳೆಯಲಿಕ್ಕಾಗದ ವಾತಾವರಣ ಇದೆ. ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ರೂಪಿಸಿರುವ 22 ಕೆರೆಗಳ ಏತ ನೀರಾವರಿ, ಸಾಸ್ವೇಹಳ್ಳಿ, ದೀಟೂರು ಏತ ನೀರಾವರಿ ಯೋಜನೆಗಳು ಪ್ರಾರಂಭವಾಗಿವೆ. ಸರ್ಕಾರ ಏತ ನೀರಾವರಿ ಯೋಜನೆಗಳ ಮೂಲ ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಕಾರ್ಯೋನ್ಮುಖವಾದಲ್ಲಿ ನೀರಿನ ಸಮಸ್ಯೆ ನೀಗುವ ಜೊತೆಗೆ ಕೆರೆಯಲ್ಲಿ ನೀರು ಸಂಗ್ರಹವಾಗುವುದರಿಂದ ಅಂತರ್ಜಲ ಮಟ್ಟ ಹೆಚ್ಚಲಿರುವುದು ಸಹಜವಾಗಿಯೇ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ.

Advertisement

ದಾವಣಗೆರೆ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ತನ್ನದೇ ಆದ ಇತಿಹಾಸ ಹೊಂದಿದ್ದು ಸಹಕಾರ ಕಾಲೇಜು ಆರಂಭಿಸಬೇಕು ಎಂಬ ಒತ್ತಾಯ ಇದೆ. ಅಂತೆಯೇ ಚನ್ನಗಿರಿ ತಾಲೂಕಿನ ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ಕಾಲೇಜು ಪ್ರಾರಂಭದ ಆಗ್ರಹವೂ ಇದೆ. ನೂತನ ಸರ್ಕಾರ ಹಲವಾರು ದಶಕಗಳ ಬೇಡಿಕೆಗೆ ಸ್ಪಂದಿಸಬೇಕಾಗಿದೆ. ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಪ್ರಾರಂಭಿಸುತ್ತಿದ್ದು, ದಾವಣಗೆರೆಯಲ್ಲೂ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂಬ ಒತ್ತಾಯ ಇದೆ. ವಿಮಾನ ನಿಲ್ದಾಣಕ್ಕಾಗಿಯೇ ಜಾಗ ಗುರುತಿಸಲಾಗಿದ್ದು, ಹಲವಾರು ಕಾರಣಗಳಿಂದ ನನೆಗುದಿಗೆ ಬಿದ್ದಿದೆ.

ಈಚೆಗೆ ದಾವಣಗೆರೆ ಸಮೀಪದ ಕುರ್ಕಿ, ಮಲ್ಲಶೆಟ್ಟಿಹಳ್ಳಿ ಇತರೆಡೆ ವಿಮಾನ ನಿಲ್ದಾಣಕ್ಕಾಗಿ ಹೊಸದಾಗಿ ಜಾಗ ಗುರುತಿಸಿದ್ದರೂ ಮತ್ತೆ ವಿಮಾನ ನಿಲ್ದಾಣ ಕಾರ್ಯಕ್ಕೆ ವಿಘ್ನ ಎದುರಾಗಿದೆ. ಉಡಾನ್‌ ಯೋಜನೆಯಡಿ ವಿಮಾನ ನಿಲ್ದಾಣ ಕಾರ್ಯಕ್ಕೆ ನೂತನ ಸರ್ಕಾರ ಮುಂದಡಿ ಇಡಬೇಕಾಗಿದೆ. ದಾವಣಗೆರೆ-ಚಿತ್ರದುರ್ಗ-ಬೆಂಗಳೂರು ನೇರ ರೈಲ್ವೆ ಮಾರ್ಗ, ದಾವಣಗೆರೆ-ಚಿತ್ರದುರ್ಗ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ, ಹರಿಹರ ತಾಲೂಕಿನ ಭೈರನಪಾದ, ಭದ್ರಾ ಮೇಲ್ದಂಡೆ ಯೋಜನೆಗೆ ಚುರುಕು, ಹೊನ್ನಾಳಿ ತಾಲೂಕಿನ ಅರಕೆರೆ ಏತ ನೀರಾವರಿ ಯೋಜನೆ, ಜಗಳೂರು ತಾಲೂಕಿನ ಸಂತೇಮುದ್ದಾಪುರ ಬಹು ಗ್ರಾಮ ಕುಡಿಯುವ ನೀರು ಯೋಜನೆ, ಪ್ರವಾಸೋದ್ಯಮಕ್ಕೆ ಒತ್ತು ಸೇರಿದಂತೆ ಹಲವಾರು ನಿರೀಕ್ಷೆಗಳು ಜನರಲ್ಲಿ ಇವೆ.

ನೂತನ ಸರ್ಕಾರ ಇವನ್ನೆಲ್ಲ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕೆಲವಾರು ಸವಾಲುಗಳು ಸಹ ಇವೆ. ರಾಜಕೀಯ, ಆಡಳಿತ ಅನುಭವ ಹೊಂದಿರುವ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಜಿಲ್ಲೆಯ ಜನರ ನಿರೀಕ್ಷೆಗೆ ಯಾವ ರೀತಿ ಸ್ಪಂದಿಸಲಿದೆ ಎಂಬ ಕಾತುರ ಸಾರ್ವಜನಿಕ ವಲಯದಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next