Advertisement

ಮಕ್ಕಳಿಗೆ ಪಿಸಿವಿ ಲಸಿಕೆ ವಿತರಣೆ ಶೀಘ್ರ

12:20 PM Aug 27, 2021 | Team Udayavani |

ದಾವಣಗೆರೆ:ಮಕ್ಕಳಲ್ಲಿ ಕಂಡುಬರುವ ನ್ಯುಮೋನಿಯಾ, ನ್ಯುಮೋಕಾಕಲ್‌ ಹಾಗೂ ಇತರೆ ರೋಗಗಳಿಂದ ರಕ್ಷಣೆ ನೀಡುವಂತಹ ಪಿಸಿವಿ (ನ್ಯುಮೊಕಾಕಲ್‌ ಕಾಂಜುಗೇಟ್‌ ವ್ಯಾಕ್ಸಿನ್‌) ನೂತನ ಲಸಿಕೆಯನ್ನು ಉಚಿತವಾಗಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಕುವಂತಹ ಕಾರ್ಯಕ್ರಮ ಮೊದಲ ವಾರದಲ್ಲಿಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

Advertisement

ನೂತನ ಲಸಿಕೆ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪ್ರಾರಂಭಿಸುವುದರ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಮಕ್ಕಳಲ್ಲಿ ಕಂಡುಬರುವ ನ್ಯುಮೋನಿಯಾ ರೋಗವನ್ನು ತಡೆಗಟ್ಟುವ ಸಲುವಾಗಿ ಹಾಗೂ ಮಕ್ಕಳ ಮರಣ ಪ್ರಮಾಣ ಕಡಿಮೆಗೊಳಿಸುವ ನಿಟ್ಟಿನಲ್ಲಿ, ಸರ್ಕಾರ ಪಿಸಿವಿ (ನ್ಯುಮೊಕಾಕಲ್‌ ಕಾಂಜುಗೇಟ್‌ ವ್ಯಾಕ್ಸಿನ್‌) ನೂತನ ಲಸಿಕೆಯನ್ನು ಮೂರು ಡೋಸ್‌ನಲ್ಲಿ ನೀಡುವ ಕಾರ್ಯಕ್ರಮ ಪ್ರಾರಂಭಿಸುವಂತೆ ಸೂಚನೆ ನೀಡಲಾಗಿದೆ. ಈಗಾಗಲೆ ಈ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದ್ದು, ಪ್ರತಿ ಡೋಸ್‌ಗೆ ಸುಮಾರು2ರಿಂದ 4 ಸಾವಿರ ರೂ. ಗಳನ್ನು ನೀಡಿ ಪಾಲಕರು ತಮ್ಮ ಮಕ್ಕಳಿಗೆ ಹಾಕಿಸುತ್ತಿದ್ದಾರೆ.

ಇದೀಗ ಸರ್ಕಾರಈಪಿಸಿವಿ ಲಸಿಕೆಯನ್ನು ಉಚಿತವಾಗಿ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಗಳಡಿ ನೀಡಲು ತೀರ್ಮಾನಿಸಿ ಲಸಿಕೆಯನ್ನು ಜಿಲ್ಲೆಗೆ ಪೂರೈಕೆ ಮಾಡಿದೆ ಎಂದರು. ನ್ಯುಮೊಕಾಕಲ್‌ ನ್ಯುಮೋನಿಯಾ ಒಂದು ಶ್ವಾಸಕೋಶದ ಸೋಂಕಾಗಿದ್ದು, ಇದು ತೀವ್ರ ಸ್ವರೂಪ ಪಡೆದಲ್ಲಿ ಮರಣವೂ ಸಂಭವಿಸಬಹುದು. ಪಿಸಿವಿ ಲಸಿಕೆ ಡೋಸ್‌ ಅನ್ನು6ವಾರ, 14 ವಾರದ ಮಗುವಿಗೆ ನೀಡಲಾಗುತ್ತದೆ. 9 ತಿಂಗಳ ಮಗುವಿಗೆ ಬೂಸ್ಟರ್‌ ಡೋಸ್‌ ನೀಡಲಾಗುತ್ತದೆ, ಹೀಗೆ ಪ್ರತಿ ಮಗುವಿಗೆ ಒಟ್ಟು 3 ಡೋಸ್‌ ಪಿಸಿವಿ ಲಸಿಕೆ ನೀಡಲಾಗುತ್ತದೆ.

ನೂತನ ಲಸಿಕಾ ಕಾರ್ಯಕ್ರಮವನ್ನು ಸೆಪ್ಟಂಬರ್‌ ಮೊದಲ ವಾರದಲ್ಲಿಪ್ರಾರಂಭಿಸಲಾಗುತ್ತಿದ್ದು, ಇದಕ್ಕೆ ಬೇಕಿರುವ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಪ್ರತಿಯೊಂದು ಗ್ರಾಮಗಳಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವ್ಯಾಪಕ ಪ್ರಚಾರ ಆಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಬಳ್ಳಾರಿ ವಿಭಾಗದ ಸರ್ವೇಲೆನ್ಸ್‌ ಮೆಡಿಕಲ್‌ ಆಫೀಸರ್‌ ಡಾ| ಶ್ರೀಧರ್‌ ಪಿಸಿವಿ ಲಸಿಕೆ ಕುರಿತು ಮಾಹಿತಿ ನೀಡಿ, ಪಿಸಿವಿ ಲಸಿಕೆ ಈಗಾಗಲೇ ಜಗತ್ತಿನ 146 ದೇಶಗಳಲ್ಲಿ 2000ನೇ ವರ್ಷದಿಂದಲೇ ಬಳಕೆಯಾಗುತ್ತಿದೆ.

ಭಾರತದಲ್ಲಿ 2017 ರಿಂದ ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಬಿಹಾರ ರಾಜ್ಯಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಕರ್ನಾಟಕ¨ಲ್ಲಿ ‌ ಈ ವರ್ಷದಿಂದ ಪ್ರಾರಂಭಿಸಲಾಗುತ್ತಿದೆ ಎಂದರು. ಅಪರ ಜಿಲ್ಲಾಧಿಕಾರಿ ಪೂಜಾರ್‌ ವೀರಮಲ್ಲಪ್ಪ ಮಾತನಾಡಿ, ಪಿಸಿವಿ ನೂತನ ಲಸಿಕೆ ಕುರಿತಂತೆ ಎಲ್ಲ ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳಲ್ಲಿ ಬರುವ ತಾಯಂದಿರಿಗೆ ಮಾಹಿತಿ ನೀಡಬೇಕು.

Advertisement

ಆಶಾ ಕಾರ್ಯಕರ್ತೆಯರು ಕೂಡ ತಾಯಂದಿರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಮೀನಾಕ್ಷಿ ಮಾತನಾಡಿ, ಪಿಸಿವಿ ನೂತನ ಲಸಿಕಾ ಕಾರ್ಯಕ್ರಮವನ್ನು ಎಲ್ಲೆಡೆ ಕೈಗೊಳ್ಳಲು ಅಗತ್ಯ ಮಾಡಿಕೊಳ್ಳಲಾಗುತ್ತಿದೆ.  ಲಸಿಕೆ ನೀಡಿಕೆಗೆ ಕ್ರಮ ವಹಿಸಲಾಗುವುದು ಎಂದರು

. ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಆನಂದ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್‌, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ| ಶಶಿಧರ, ಡಾ| ರೇಣುಕಾರಾಧ್ಯ, ತಾಲೂಕಾ ಆರೋಗ್ಯಾಧಿಕಾರಿ ಡಾ| ಎಲ್‌.ಡಿ. ವೆಂಕಟೇಶ್‌ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next