Advertisement

ಸಂಭಾವ್ಯ ಅಲೆ ತಡೆಗೆ ಪರಿಣಾಮಕಾರಿ ಕ್ರಮ ಅಗತ್ಯ

09:47 PM Jun 23, 2021 | Team Udayavani |

ದಾವಣಗೆರೆ : ಕೊರೊನಾದ ಮೂರನೇ ಅಲೆ ಮಕ್ಕಳ ಮೇಲೆ ತೀವ್ರ ಪರಿಣಾಮ ಉಂಟು ಮಾಡಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಮೂರನೇ ಅಲೆ ಬರುವುದೇ ಬೇಡ ಎಂದು ಪ್ರಾರ್ಥಿಸೋಣ. ಆದರೂ ಸಂಭಾವ್ಯ ಮೂರನೇ ಅಲೆಯನ್ನು ಅತ್ಯಂತ ಸಮರ್ಥ ಮತ್ತು ಪರಿಣಾಮಕಾರಿಯಾಗಿ ಎದುರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ,ಅಧಿಕಾರಿಗಳಿಗೆ ಸೂಚಿಸಿದರು.

Advertisement

ಮಂಗಳವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ನಡೆದ ಕೊರೊನಾ ಸಂಭಾವ್ಯ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜನಪ್ರತಿನಿಧಿ ಗಳು ಹಾಗೂ ಅ ಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಾವಣಗೆರೆ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಕೊರೊನಾದ ಮೂರನೇ ಅಲೆ ಬರಲು ಬಹಳ ದಿನ ಇಲ್ಲ. ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಸರ್ಕಾರ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲೂ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಂಪೂರ್ಣ ತಯಾರಿ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಮಾತನಾಡಿ, 16 ವರ್ಷದ ಒಳಗಿನ ಮಕ್ಕಳನ್ನೇ ಮಾತ್ರವೇ ಪರಿಗಣಿಸಲಾಗಿದೆ. 17 ಮತ್ತು 18 ವರ್ಷದವರು ಎಲ್ಲಿಗೆ ಹೋಗಬೇಕು. ಅವರನ್ನೂ ಪರಿಗಣಿಸಬೇಕು ಎಂದು ಒತ್ತಾಯಿಸಿದರು. 18 ವರ್ಷದೊಳಗಿನ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಕೊರೊನಾದ ಮೂರನೇ ಅಲೆ ತಡೆಯುವ, ಚಿಕಿತ್ಸೆ ಮತ್ತಿತರ ವಿಷಯಕ್ಕೆ ಪರಿಗಣಿಸುವಂತೆ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚಿಸಿದರು.

70 ಸಾವಿರ ಜನರಿಗೆ ಸೋಂಕು: ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್‌ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ 18 ಲಕ್ಷಷ್ಟು ಜನಸಂಖ್ಯೆಯಲ್ಲಿ 0-19 ವರ್ಷದೊಳಗೆ 7 ಲಕ್ಷ ಮಂದಿ ಇದ್ದಾರೆ. ಅವರಲ್ಲಿ ಶೇ. 10 ರಷ್ಟು ಎಂದರೆ 70 ಸಾವಿರ ಜನರಿಗೆ ಸೋಂಕು ಬರಬಹುದು. 70ಸಾವಿರ ಸೋಂಕಿತರಲ್ಲಿ ಶೇ. 1ರಷ್ಟು ಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. 57 ಮಕ್ಕಳ ತಜ್ಞರನ್ನು ಗುರುತಿಸಿ ಸಭೆ ನಡೆಸಲಾಗಿದೆ. ನಸ್‌ ìಗಳಿಗೆ ಅಗತ್ಯ ತರಬೇತಿ ಪ್ರಾರಂಭಿಸಲಾಗುವುದು.

Advertisement

ಆಕ್ಸಿಜನ್‌ ಬೆಡ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಗತ್ಯ ಔಷಧಿ ದಾಸ್ತಾನು ಮಾಡಿಕೊಳ್ಳ ಲಾಗುತ್ತಿದೆ. ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ 60 ವೆಂಟಿಲೇಟರ್‌ಗೆ ಪ್ರಸ್ತಾವನೆ ಸಿದ್ದ#ಪಡಿಸಲಾಗಿದೆ. ಆದಷ್ಟು ಬೇಗ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್‌. ವಿಜಯ್‌ಕುಮಾರ್‌ ಮಾತನಾಡಿ, ಜಿಲ್ಲೆಯಲ್ಲಿ ತೀವ್ರತರ ಅಪೌಷ್ಟಿಕತೆ ಹೊಂದಿರುವ 180, ಸಾಧಾರಣ ಅಪೌಷ್ಟಿಕತೆ ಹೊಂದಿರುವ 8168 ಮಕ್ಕಳನ್ನು ಗುರುತಿಸಲಾಗಿದೆ. ಅಂತಹ ಮಕ್ಕಳ ತಾಯಂದರಿಗೆ ಆದ್ಯತೆಯಲ್ಲಿ ಕೊರೊನಾ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಶಿಕ್ಷಣ ಇಲಾಖೆ ತೀವ್ರತರ ಆರೋಗ್ಯ ಸಮಸ್ಯೆ ಹೊಂದಿರುವ 272 ಮಕ್ಕಳನ್ನು ಗುರುತಿಸಿದೆ. ಆರೋಗ್ಯ ತಪಾಸಣೆ ಮತ್ತು ಅಗತ್ಯ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗುವುದು. ಮಕ್ಕಳಿಗಾಗಿಯೇ 10 ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ 2,350 ಬೆಡ್‌ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತ್ಯೇಕ ವ್ಯವಸ್ಥೆಗೆ ಸೂಚನೆ: ಒಂದೊಮ್ಮೆ ಮಕ್ಕಳಿಗೆ ಸೋಂಕು ಬಂದಲ್ಲಿ ತಾಯಿಯೊಂದಿಗೆ ಕೇರ್‌ ಸೆಂಟರ್‌ ನಲ್ಲಿ ಐಸೋಲೇಷನ್‌ ಮಾಡಬೇಕು. 10 ವರ್ಷದ ಮೇಲ್ಪಟ್ಟ ಬಾಲಕ, ಬಾಲಕಿಯರು ಮತ್ತು ವಿಕಲ ಚೇತನರಿಗಾಗಿಯೇ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಸೂಚಿಸಿದರು. ಕೊರೊನಾದ ಮೂರನೇ ಅಲೆಯ ಹಿನ್ನೆಲೆಯಲ್ಲಿ ಅಗತ್ಯ ಮಾಹಿತಿ ಇತರೆ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು 1098 ನಂಬರ್‌ ಅನ್ನೇ ನೀಡಲಾಗಿದೆ. ಮಕ್ಕಳ ರಕ್ಷಣಾ ಘಟಕದವರು ಕೋವಿಡ್‌ ಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಪಡೆದುಕೊಂಡು ಯಾರೇ 1098ಕ್ಕೆ ಕರೆ ಮಾಡಿದರೂ ಅಗತ್ಯ ಮಾಹಿತಿ ನೀಡಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ಯೋಜನೆ, ಕಾರ್ಯಕ್ರಮ ಚಿಕ್ಕ ಮಕ್ಕಳಿಂದ ಹಿಡಿದು ಸಾಯುವತನಕವೂ ಇವೆ. ಇಲಾಖೆ ಅಧಿಕಾರಿಗಳು ಯೋಜನೆ, ಕಾರ್ಯಕ್ರಮಗಳ ಬಗ್ಗೆ ಜನಪ್ರತಿನಿಧಿಗಳಿಗೆ ಮಾಹಿತಿ ನೀಡುವಂತಾಗಬೇಕು. ಆಗ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಆಗುತ್ತವೆ. ಈವರೆಗೆ ಏನೋ ನಡೆದಿರಬಹುದು. ಆದರೆ ಇನ್ನು ಮುಂದೆ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸೋಂಬೇರಿತನವೇ ಕಂಡು ಬರುತ್ತಿತ್ತು. ಕೊರೊನಾದ ಮೂರನೇ ಅಲೆ ತಡೆಯಲು, ಪರಿಣಾಮಕಾರಿಯಾಗಿ ಎದುರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ನೀಡುವ ಪೌಷ್ಠಿಕ ಆಹಾರ ಒದಗಿಸಬೇಕು. ನಾನು ಒಳಗೊಂಡಂತೆ ಯಾರೇ ಆಗಲಿ ತಪಾಸಣೆ ಕೈಗೊಂಡಾಗ ತಪ್ಪು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಪ್ರೊ| ಎನ್‌. ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್‌, ಜಿಪಂ ಸಿಇಒ ಡಾ| ವಿಜಯಮಹಾಂತೇಶ್‌ ದಾನಮ್ಮನವರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next