ದಾವಣಗೆರೆ: ಸಮ ಮತ್ತು ಸುಸ್ಥಿರ ಸಮಾಜ ನಿರ್ಮಾಣಕ್ಕೆ ಶರಣ ಸಾಹಿತ್ಯ ಒಳಗೊಂಡಂತೆ ಇತರೆ ಸಾಹಿತ್ಯಿಕ ಸಂಘಟನೆಗಳು ಕಾರಣವಾಗಬೇಕು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಡಾ| ಎಂ.ಜಿ. ಈಶ್ವರಪ್ಪ ಹೇಳಿದರು. ಭಾನುವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆದ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮ ಸಮಾಜದ ನಿರ್ಮಾಣ 12ನೇ ಶತಮಾನದ ಬಸವಾದಿ ಶರಣರ ಮೂಲ ಆಶಯವಾಗಿತ್ತು. ಆ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ತು ಹಾಗೂ ಇತರೆ ಸಂಘಟನೆಗಳು ಕೆಲಸ ಮಾಡಬೇಕು ಎಂದರು. 12ನೇ ಶತಮಾನದಲ್ಲಿ ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿನ ಅನುಭವ ಮಂಟಪದಲ್ಲಿ ಬಸವಣ್ಣ, ಅಕ್ಕಮಹಾದೇವಿ ಒಳಗೊಂಡಂತೆ ಶರಣ ಸಂಕುಲವೇ ಇತ್ತು. ಅಲ್ಲಿ ಸಮ ಸಮಾಜ ನಿರ್ಮಾಣ ಒಳಗೊಂಡಂತೆ ಅನೇಕ ವಿಷಯಗಳ ಚರ್ಚೆ ನಡೆಯುತ್ತಿತ್ತು. ಎಲ್ಲ ಜಾತಿಯವರು ಒಟ್ಟಿಗೆ ಊಟ ಮಾಡುವುದು ನಿಜಕ್ಕೂ ಬಹು ದೊಡ್ಡ ಕ್ರಾಂತಿ. ಶರಣರ ವಚನಗಳ ಅಭ್ಯಾಸ, ಚರ್ಚೆಯ ಮೂಲಕ ಹೊಸ ಸಮಾಜ ನಿರ್ಮಾಣ ಮಾಡಬಹುದು.
ಆದರೆ ಎಷ್ಟೇ ಸರಳವಾಗಿ ಮನಮುಟ್ಟುವಂತೆ ಹೇಳಿದ್ದರೂ ಮನಸ್ಸಿಗೆ ಹೋಗದೇ ಇರುವಂತಹ ವಾತಾವರಣ ಕಂಡು ಬರುತ್ತಿದೆ. 800 ವರ್ಷಗಳಿಂದಲೂ ಶರಣರ ವಚನಗಳ ಬಗ್ಗೆ ತಿಳಿಸುತ್ತಿದ್ದರೂ ಬದಲಾವಣೆ ಮಾತ್ರ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇಂದಿನ ತಂತ್ರಜ್ಞಾನ, ಕಂಪ್ಯೂಟರ್ ಯುಗದಲ್ಲಿ ಚಂದ್ರನ ಮೇಲೆ ಹೋಗಿ ಬಂದಿದ್ದೇವೆ. ಉನ್ನತ ಶಿಕ್ಷಣವಂತರೂ ಇದ್ದಾರೆ. ಪ್ರಪಂಚವೇ ಸಣ್ಣ ಹಳ್ಳಿಯಂತಾಗಿದೆ. ಆದರೆ ಶಿಕ್ಷಣ ಪಡೆದರೂ ಮಾನವೀಯ ನೆಲೆಗಟ್ಟಿನಲ್ಲಿ ಬದಲಾವಣೆ ಆಗಿಲ್ಲ. ಮನುಷ್ಯರು ಮನುಷ್ಯರಾಗಿ ಬಾಳುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ತಾಲಿಬಾನ್ ಆಕ್ರಮಣ ಉದಾಹರಣೆ. ತಾಲಿಬಾನ್ ನರರಾಕ್ಷಸರನ್ನು ನೋಡಿದರೆ ಸಂಕಟ, ನೋವು ಅನುಭವಿಸುವಂತಾಗಿದೆ. ಆದರೆ ಏನೂ ಮಾಡಲಾರದ ಸ್ಥಿತಿ ಎಲ್ಲೆಡೆ ಕಂಡು ಬರುತ್ತಿದೆ ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರು ಸಮ ಸಮಾಜದ ನಿರ್ಮಾಣ, ಜನರ ಮನಸ್ಸು ಸುಸ್ಥಿರ ಆಗಬೇಕು ಎಂಬ ಮಹತ್ತರ ಆಶಯದೊಂದಿಗೆ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು ಪ್ರಾರಂಭಿಸಿದ್ದಾರೆ. ಕರ್ನಾಟಕ ಮಾತ್ರವಲ್ಲ, ಇತರೆ ರಾಜ್ಯಗಳಲ್ಲೂ ಪರಿಷತ್ತು ಕೆಲಸ ಮಾಡುತ್ತಿದೆ. ಶರಣ ಪರಂಪರೆ, ಸಾಹಿತ್ಯದ ಬಗ್ಗೆ ಚರ್ಚಿಸಿ, ಸಮ ಸಮಾಜದ ನಿರ್ಮಾಣ ಸಾಧ್ಯವೇ ಎಂಬುದರ ಬಗ್ಗೆ ಚರ್ಚೆ ನಡೆಸಬೇಕು ಎಂದು ತಿಳಿಸಿದರು.
“ಲಿಂಗೈಕ್ಯ ಪೂಜ್ಯ ಡಾ| ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗಳು ಮತ್ತು ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು’ ವಿಷಯದ ಕುರಿತು ನಿವೃತ್ತ ಪ್ರಾಚಾರ್ಯ ಜಿ.ಬಿ. ಚಂದ್ರಶೇಖರ್ ಉಪನ್ಯಾಸ ನೀಡಿದರು. ಮಲ್ಲಿಕಾರ್ಜುನ ದೇವರು, ಶಂಕರಮ್ಮ ಅವರ ಪುತ್ರನಾಗಿ 1916ರ ಆ. 29 ರಂದು ಜನಿಸಿದ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗಳು ಸುತ್ತೂರು ಮಠದ 24ನೇ ಜಗದ್ಗುರುಗಳಾಗಿ ಶಿಕ್ಷಣ ಕ್ರಾಂತಿ ಮಾಡಿದವರು.
ಅನ್ನ, ಅಕ್ಷರ, ಆರೋಗ್ಯ, ಆಧ್ಯಾತ್ಮ, ಸಾಹಿತ್ಯ, ಧಾರ್ಮಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದಂತಹ ಮಹಾನ್ ಸಾಧನೆಯ ಮೂಲ ಪುರುಷರು. ಶರಣ ಸಾಹಿತ್ಯ ಪರಿಷತ್ತು ಪ್ರಾರಂಭಿಸುವ ಮೂಲಕ ಶರಣ ಪರಂಪರೆ, ವಚನ ಸಾಹಿತ್ಯವನ್ನ ಎಲ್ಲೆಡೆ ಪಸರಿಸುವ ಕೆಲಸ ಮಾಡಿದವರು ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಆಶಾ ಮಹಾಬಲೇಶಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಎಚ್.ಎಸ್. ಮಂಜುನಾಥ್ ಕುರ್ಕಿ ಇತರರು ಇದ್ದರು. ಕದಳಿ ಮಹಿಳಾ ವೇದಿಕೆ ಪದಾಧಿಕಾರಿಗಳು ವಚನ ಗೀತೆ ಹಾಡಿದರು. ಪಂಕಜಾ ದಯಾನಂದ್ ನಿರೂಪಿಸಿದರು. ಎನ್. ಎಸ್. ರಾಜು ವಂದಿಸಿದರು.