Advertisement
ಪರಿಶಿಷ್ಟ ಜಾತಿ(ಮಹಿಳೆ) ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ನಿರೀಕ್ಷೆಯಂತೆ 30 ನೇ ವಾರ್ಡ್ ನ ಜಯಮ್ಮ ಗೋಪಿನಾಯ್ಕ ಆಯ್ಕೆಯಾದರು. ಕಾಂಗ್ರೆಸ್ ನ ನಾಗರತ್ನಮ್ಮ ವಿರುದ್ಧ ನಾಲ್ಕು ಮತಗಳ ಅಂತರದಿಂದ ಜಯ ಸಾಧಿಸಿದರು.
Related Articles
Advertisement
ಮೊದಲ ಮತ್ತು ಎರಡನೇ ಅವಧಿಯ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಭಾರೀ ಉತ್ಸಾಹ ದೊಂದಿಗೆ ರಾಜಕೀಯ ಕಸರತ್ತು ನಡೆಸಿದ್ದ ಕಾಂಗ್ರೆಸ್ ತನ್ನ ಸದಸ್ಯರೇ ಕೈ..ಕೊಟ್ಟ ಪರಿಣಾಮ ಮಹಾ ನಗರಪಾಲಿಕೆಯ ಅಧಿಕಾರ ಪಡೆಯುವಲ್ಲಿ ಎಡವಿತ್ತು. ಮೂರನೇ ಅವಧಿಗೂ ಕಾಂಗ್ರೆಸ್ ಗೆ ಮೇಯರ್, ಉಪ ಮೇಯರ್ ಗಾದಿ ಕೈಗೆಟುಕದ ದ್ರಾಕ್ಷಿ ಯಂತಾಗಿದೆ. ಕಾಂಗ್ರೆಸ್ ಸದಸ್ಯರು ಮತ್ತು ಪಕ್ಷೇತರರು ಅಂತಿಮ ಗಳಿಗೆಯಲ್ಲಿ ಕೈ ಕೊಡುವುದು ಮಾಮೂಲಿ ಎನ್ನುವಂತಾಗಿದೆ. ಕಾಂಗ್ರೆಸ್ ಮತ್ತೆ ಕೈ ಸುಟ್ಟುಕೊಂಡಿದೆ.
ಮೇಯರ್, ಉಪ ಮೇಯರ್ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ಪ್ರಾರಂಭ ವಾಗಿದ್ದವು. ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಶಿಲ್ಪಾ ಜಯಪ್ರಕಾಶ್, ಜಯಮ್ಮ ಗೋಪಿನಾಯ್ಕ ತಂತ್ರ, ಪ್ರತಿತಂತ್ರ ರೂಪಿಸಿದ್ದರು. ಜಿಲ್ಲಾ ಬಿಜೆಪಿ ಮುಖಂಡರ ಮನವೊಲಿಸುವ ಭಾರೀ ಪ್ರಯತ್ನ ನಡೆಸಿದ್ದರು. ಶಿಲ್ಪ ಜಯಪ್ರಕಾಶ್ ಉಪ ಮೇಯರ್ ಹುದ್ದೆ ಅಲಂಕರಿಸಿರುವ ಹಿನ್ನೆಲೆಯಲ್ಲಿ ತಮಗೆ ಮೇಯರ್ ಸ್ಥಾನ ನೀಡಬೇಕು ಎಂದು ಜಯಮ್ಮ ಗೋಪಿನಾಯ್ಕ ಪಟ್ಟು ಹಿಡಿದಿದ್ದರು. ಬಿಜೆಪಿ ಅಧಿಕಾರಕ್ಕೆ ಏರುವಲ್ಲಿ ಸಹಕಾರ ನೀಡಿರುವುದರಿಂದ ತಮಗೆ ಅವಕಾಶ ನೀಡಬೇಕು ಎಂದು ನಾಯಕರಿಗೆ ಕೋರಿದ್ದರು.
ಜಯಮ್ಮ ಗೋಪಿನಾಯ್ಕ ಪಕ್ಷೇತರರಾಗಿ ಆಯ್ಕೆ ಆಗಿದ್ದರೂ ಅಂತಿಮವಾಗಿ ಮೇಯರ್ ಸ್ಥಾನ ನೀಡಲು ಪಕ್ಷದ ಮುಖಂಡರು ನಿರ್ಧರಿಸಿದರು. ಮೇಯರ್ ಆಗಿ ಆಯ್ಕೆಯಾಗಿರುವ ಜಯಮ್ಮ ಗೋಪಿನಾಯ್ಕ ಹೊಸ ಇತಿಹಾಸ ಬರೆದರು. ಪಕ್ಷೇತರರಾಗಿ ಆಯ್ಕೆಯಾದ ವರು ನಗರಪಾಲಿಕೆಯ ಉನ್ನತ ಸ್ಥಾನಕ್ಕೇರಿದ ಉದಾಹರಣೆಯೇ ಇಲ್ಲ. ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾದವರಿಗೆ ಸಚಿವ ಸ್ಥಾನಮಾನ ನೀಡಿರುವಂತೆ ದಾವಣಗೆರೆ ಮಹಾನಗರ ಪಾಲಿಕೆಯ ಅಧಿಕಾರದ ಗದ್ದುಗೆ ಏರಲು ಸಹಕಾರ ನೀಡಿದವರಿಗೆ ನಾಯಕರು ಮನ್ನಣೆ ನೀಡಿದರು. ದಾವಣಗೆರೆ ಉತ್ತರಕ್ಕೆ ಮೇಯರ್ ಸ್ಥಾನ ನೀಡಿದರೆ ದಕ್ಷಿಣಕ್ಕೆ ಉಪ ಮೇಯರ್ ಸ್ಥಾನ ನೀಡಬೇಕು ಎನ್ನುವ ಸಿದ್ಧ ಸೂತ್ರದಂತೆ ಉತ್ತರ ಕ್ಷೇತ್ರದ ಜಯಮ್ಮ ಗೋಪಿನಾಯ್ಕ ಮೇಯರ್ ಆದರೆ, ದಕ್ಷಿಣ ದ ಗಾಯತ್ರಿ ಖಂಡೋಜಿರಾವ್ ಉಪ ಮೇಯರ್ ಸ್ಥಾನ ಅಲಂಕರಿಸಿದರು.
ಮೇಯರ್, ಉಪ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಾಳೆಯದಲ್ಲಿ ಆತಂಕ ಉಂಟಾಗಿತ್ತು. ಕಳೆದ ಎರಡು ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಬೆಂಬಲಿಸಿದ್ದ ಇಬ್ಬರು ಮುನಿಸಿಕೊಂಡು ನಾಟ್ ರೀಚಬಲ್ ಆಗಿದ್ದರು. ಕಾಂಗ್ರೆಸ್ ಬೆಂಬಲಿಸಿದ್ದ ಪಕ್ಷೇತರ ಸದಸ್ಯರೊಬ್ಬರು ಬಿಜೆಪಿಯತ್ತ ವಾಲಿದ್ದು ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿತ್ತು. ನಿಕಟಪೂರ್ವ ಮೇಯರ್ ಎಸ್.ಟಿ. ವೀರೇಶ್ ಒಳಗೊಂಡಂತೆ ಅನೇಕರು ಗುರುವಾರ ಮಧ್ಯಾಹ್ನದಿಂದ ಯಾರ ಸಂಪರ್ಕಕ್ಕೂ ದೊರೆಯದೇ ಹೋಗಿದ್ದು ಕಮಲ ಪಾಳೆಯದಲ್ಲಿ ಉಂಟಾಗಿದ್ದ ಆತಂಕದ ಪ್ರತೀಕವಾಗಿತ್ತು. ಕೊನೆಗೂ ಬಿಜೆಪಿ ಹಾಗೂ ಬೆಂಬಲಿತ ಸದಸ್ಯರ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿ ಯಾದ ನಾಯಕರು ಮಹಾನಗರ ಪಾಲಿಕೆಯ ಅಧಿಕಾರ ಉಳಿಸಿಕೊಳ್ಳುವಲ್ಲೂ ಯಶ ಸಾಧಿಸಿದರು.
ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣ ಸ್ವಾಮಿ ಗುರುವಾರ ಜಿ.ಎಂ.ಐ.ಟಿ.ಅತಿಥಿ ಗೃಹದಲ್ಲಿ ದಿನವಿಡೀ ರಾಜಕೀಯ ತಂತ್ರ ಹೆಣೆದರು.