Advertisement

ಪಾಲಿಕೆ ಎರಡು ವಾರ್ಡ್‌ಗಳಿಗೆ ಬೈ ಎಲೆಕ್ಷನ್‌

07:59 PM Mar 11, 2021 | Team Udayavani |

ದಾವಣಗೆರೆ : ದಾವಣಗೆರೆ ಮಹಾನಗರ ಪಾಲಿಕೆಯ 20 ಮತ್ತು 22ನೇ ವಾರ್ಡ್‌ ಗಳಲ್ಲಿ ಚುನಾಯಿತ ಸದಸ್ಯರ ರಾಜೀನಾಮೆಯಿಂದ ತೆರವಾಗಿರುವ ಸದಸ್ಯರ ಸ್ಥಾನಗಳನ್ನು ತುಂಬಲು ಉಪಚುನಾವಣೆ ನಡೆಸಲಾಗುತ್ತಿದ್ದು, ವೇಳಾಪಟ್ಟಿ ನಿಗದಿಪಡಿಸಲಾಗಿದೆ. ನಗರದ 20ನೇ ವಾರ್ಡ್‌ನ ಭಾರತ್‌ ಕಾಲೋನಿಯಲ್ಲಿ ಪರಿಶಿಷ್ಟ ಪಂಗಡ (ಮಹಿಳೆ) ಹಾಗೂ 22ನೇ ವಾರ್ಡ್‌ನ ಯಲ್ಲಮ್ಮ ನಗರದಲ್ಲಿ ಸಾಮಾನ್ಯ ಮೀಸಲಾತಿ ಇದೆ. ಈ ಎರಡು ವಾರ್ಡ್‌ಗಳಲ್ಲಿ ಸದಸ್ಯರ (ಯಶೋಧಮ್ಮಾ ಹಾಗೂ ಶಿವಕುಮಾರ ದೇವರಮನಿ)ರಾಜೀನಾಮೆಯಿಂದ ಸ್ಥಾನಗಳು ತೆರೆವಾಗಿದ್ದವು.

Advertisement

ನಾಮಪತ್ರ ಸಲ್ಲಿಸಲು ಮಾ.17 ಕೊನೆಯ ದಿನವಾಗಿದೆ. ಮಾ.18 ನಾಮಪತ್ರ ಪರಿಶೀಲನೆ ನಡೆಯಲಿದೆ. ಮಾ.20 ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದೆ. ಮತದಾನ ಅವಶ್ಯವಿದ್ದರೆ, ಮತದಾನವನ್ನು ಮಾ.29 ರ ಸೋಮವಾರ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುತ್ತದೆ. ಮಾ.31 ಮತ ಎಣಿಕೆ ದಿನಾಂಕ ಮತ್ತು ಚುನಾವಣಾ ಮುಕ್ತಾಯ ದಿನಾಂಕವಾಗಿದೆ.

ಚುನಾವಣಾಧಿಕಾರಿಗಳ ವಿವರ: ವಾರ್ಡ್‌ ನಂ.20ಕ್ಕೆ ಚುನಾವಣಾಧಿಕಾರಿಯಾಗಿ ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮಣ್ಣನವರ್‌(9448999219) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಬೀಜ ಪರೀಕ್ಷಾ ಪ್ರಯೋಗಾಲಯ ಸಹಾಯಕ ಕೃಷಿ ನಿರ್ದೇಶಕ ರಮೇಶ್‌ ನಾಯ್ಕ.ವಿ (8277931264) ಅವರನ್ನು ನೇಮಿಸಲಾಗಿದ್ದು, ಇವರ ಕಚೇರಿಯು ಮಹಾನಗರಪಾಲಿಕೆಯ ಕೊಠಡಿ ಸಂಖ್ಯೆ 2 ರಲ್ಲಿದೆ. ವಾರ್ಡ್‌ ನಂ.22 ಕ್ಕೆ ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿಗಳಾದ ಮಮತ ಹೊಸಗೌಡರ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್‌ ಗ್ರೇಡ್‌-2 ಗಿರೀಶ್‌ ಬಾಬು ಅವರನ್ನು ನೇಮಿಸಲಾಗಿದ್ದು, ಪಾಲಿಕೆಯ ಕೊಠಡಿ ಸಂಖ್ಯೆ 3 ರಲ್ಲಿ ಇವರ ಕಚೇರಿ ಇರುತ್ತದೆ.

ಸದಾಚಾರ ಸಂಹಿತೆ ಅನುಷ್ಠಾನ ತಂಡದ ವಿವರ : ಮಹಾನಗರಪಾಲಿಕೆ 20 ಮತ್ತು 22ನೇ ವಾರ್ಡ್‌ ವ್ಯಾಪ್ತಿಯ ಸದಾಚಾರ ಸಂಹಿತೆಯ ನೋಡಲ್‌ ಅಧಿಕಾರಿಯಾಗಿ ಪಾಲಿಕೆ ಆಯುಕ್ತರು ಹಾಗೂ ಸದಾಚಾರ ಸಹಾಯಕ ನೋಡಲ್‌ ಅಧಿಕಾರಿಯಾಗಿ ಸಂಬಂಧಿಸಿದ ವಾರ್ಡ್‌ನ ಕಂದಾಯ ಅಧಿಕಾರಿಗಳು ಮತ್ತು ಸದಾಚಾರ ಸಂಹಿತೆಯ ಅನುಷ್ಠಾನಾಧಿಕಾರಿಯಾಗಿ ಸಂಬಂಧಿಸಿದ ವಾರ್ಡ್‌ನ ಬಿಲ್‌ ಕಲೆಕ್ಟರ್‌ಗಳನ್ನು ನೇಮಿಸಲಾಗಿದೆ. ಮತಗಟ್ಟೆ ಮತ್ತು ಮತದಾರರ ವಿವರ: ವಾರ್ಡ್‌ ಸಂಖ್ಯೆ 20 ಮತ್ತು 22 ಸೇರಿ ಒಟ್ಟು 15 ಮತಗಟ್ಟೆಗಳಿದ್ದು, 7638 ಪುರುಷರು ಹಾಗೂ 7443 ಮಹಿಳೆಯರು ಸೇರಿದಂತೆ ಒಟ್ಟು 15081 ಮತದಾರರಿದ್ದಾರೆ.

ವಿದ್ಯುನ್ಮಾನ ಮತಯಂತ್ರಗಳ ವಿವರ : ಮತದಾನದ ಉದ್ದೇಶಕ್ಕಾಗಿ 15 ಬಿ.ಯು, 15 ಸಿಯು, ತರಬೇತಿಯ ಉದ್ದೇಶಕ್ಕಾಗಿ 4 ಬಿ.ಯು ಮತ್ತು 4 ಸಿಯು ಗಳನ್ನು ಬಳಸಿಕೊಳ್ಳಲಾಗಿದ್ದು ಹಾಗೂ 6 ಬಿ.ಯು ಮತ್ತು 6 ಸಿ.ಯುಗಳನ್ನು ಕಾಯ್ದಿರಿಸಲಾಗಿದೆ. ಒಟ್ಟಾರೆಯಾಗಿ 25 ಬಿ.ಯು., 25 ಸಿ.ಯುಗಳನ್ನು ಚುನಾವಣೆಗೆ ಉಪಯೋಗಿಸಿಕೊಳ್ಳಲಾಗುತ್ತಿದೆ. ಪಿ.ಬಿ. ರಸ್ತೆಯಲ್ಲಿರುವ ಡಿ.ಆರ್‌.ಆರ್‌. ವಿದ್ಯಾಸಂಸ್ಥೆಯನ್ನು ಮಸ್ಟರಿಂಗ್‌, ಡಿ-ಮಸ್ಟರಿಂಗ್‌ ಹಾಗೂ ಎಣಿಕಾ ಕೇಂದ್ರವಾಗಿ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next