Advertisement

ಹೆಣ್ಣು ಭ್ರೂ ಣಹತ್ಯೆ ಮಾಡಬೇಡಿ

11:45 AM Mar 09, 2020 | Naveen |

ದಾವಣಗೆರೆ: ಹೆಣ್ಣು ಮಕ್ಕಳು ಒಳಗೊಂಡಂತೆ ಯಾರೇ ಆಗಲಿ ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗಬಾರದು. ಯಾವುದೇ ಮಗುವಾಗಲಿ ಪ್ರೀತಿಯಿಂದ ಉತ್ತಮ ವಿದ್ಯಾವಂತರನ್ನಾಗಿ ಬೆಳೆಸಬೇಕು ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಮನವಿ ಮಾಡಿದ್ದಾರೆ.

Advertisement

ಭಾನುವಾರ ಜಿಲ್ಲಾ ಗುರುಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆಣ್ಣು ಭ್ರೂಣ ಹತ್ಯೆ ಸರಿ ಅಲ್ಲವೇ ಅಲ್ಲ. ನನಗೂ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಯಾವುದೇ ಹುಟ್ಟಲಿ ಬಹಳ ಪ್ರೀತಿಯಿಂದ ಸಾಕಿ ಸಲುಹಬೇಕು ಎಂದರು.

ಮಹಿಳೆಯರು ಅತ್ತೆ, ಗಂಡ, ಸಂಬಂಧಿಕರಿಂದ ದೌರ್ಜನ್ಯ, ಶೋಷಣೆಗೆ ಒಳಗಾಗುತ್ತಿದ್ದರೆ ನಿರ್ದಾಕ್ಷಿಣ್ಯವಾಗಿ ಎದುರಿಸಿ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಈಗ ಮಹಿಳಾ ಸಂಘಟನೆಗಳು ಉತ್ತಮ ಕೆಲಸ ಮಾಡುತ್ತಿವೆ. ಲೋಕಸಭೆ, ವಿಧಾನಸಭೆ ಹೊರತುಪಡಿಸಿ ಬೇರೆ ಎಲ್ಲಾ ಕಡೆ ಶೇ.50 ಮೀಸಲಾತಿ ಇರುವುದನ್ನ ಸದುಪಯೋಗಪಡಿಸಿಕೊಂಡು ರಾಜಕೀಯಕ್ಕೆ ಬಂದು, ಚುನಾವಣೆಯಲ್ಲಿ ಸ್ಪರ್ಧಿಸಿ, ಒಳ್ಳೆಯ ಕೆಲಸ ಮಾಡಿ ಎಂದು ಆಶಿಸಿದರು.

ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಶೈಲಜಾ ಬಸವರಾಜ್‌ ಮಾತನಾಡಿ, ಸಮಪಾಲು… ಸಮಬಾಳು… ಎಂಬ ಭಾವನೆಯೊಂದಿಗೆ ಜೀವನ ನಡೆಸುವಂತಾದಾಗ ಮಹಿಳಾ ದಿನಾಚರಣೆಗೆ ಅರ್ಥ ಬರುತ್ತದೆ. ಮಹಿಳಾ ದಿನಾಚರಣೆ ಎಂದರೆ ಒಂದು ವರ್ಗದ ಪರವಾಗಿಯೇ ಮಾತನಾಡುವುದು, ಪುರುಷರನ್ನು ವಿರೋಧಿಸುವುದು ಅಲ್ಲ. ಆರೋಗ್ಯಕರ ಸಮಾಜ ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಇರಬೇಕು. ಮಹಿಳೆಯರು ಭಾರತೀಯ ಸಂಸ್ಕೃತಿಯ ಹರಿಕಾರರಾಗಬೇಕು. ನಮ್ಮ ಮನೆ, ಕುಟುಂಬದ ನೆಮ್ಮದಿಯ ಹಾಳು ಮಾಡಿಕೊಂಡು ಸ್ವಾತಂತ್ರ್ಯ ಪಡೆಯುವುದು ಅಲ್ಲ. ಮನೆ ಗೆದ್ದು ಮಾರು ಗೆಲ್ಲು… ಎನ್ನುವಂತೆ ಮನೆ ಗೆಲ್ಲಬೇಕು. ಮಹಿಳೆಯರು ಎಲ್ಲಾ ಪಾತ್ರಗಳನ್ನು ಸರಿಯಾಗಿ ನಿಭಾಯಿಸಿ, ನ್ಯಾಯ ಒದಗಿಸಬೇಕು ಎಂದು ಸಲಹೆ ನೀಡಿದರು.

ತಾಲೂಕು ಪಂಚಾಯತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಮಾತನಾಡಿ, ಮಹಿಳೆಯರು ಉತ್ತಮ ಶಿಕ್ಷಣ ಪಡೆಯುವ ಮೂಲಕ ಎಲ್ಲಾ ಸಮಸ್ಯೆಗಳಿಂದ ಹೊರ ಬರಬೇಕು. ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಏನೆಲ್ಲಾ ಸಾಧನೆ ಮಾಡಿದರೂ ಪುರುಷರ ಬೆಂಬಲ ಬೇಕಾಗುತ್ತದೆ. ಬಾಹ್ಯ ಪ್ರಪಂಚದಲ್ಲಿ ಸಾಧನೆ ಮಾಡಿದವರು ಮಾತ್ರವೇ ಸಾಧಕರು ಅಲ್ಲ. ಮನೆಯಲ್ಲಿನ ಎಲ್ಲಾ ಕೆಲಸವನ್ನ ಅತ್ಯಂತ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವರು ಸಹ ನಿಜವಾದ ಸಾಧಕರು. ಮಹಿಳೆಯರನ್ನು ಮಹಿಳೆಯರೇ ತುಳಿಯುವುದು ಕೈ ಬಿಟ್ಟಲ್ಲಿ ಮುಂದೆ ಬರುತ್ತೇವೆ ಎಂದು ಹೇಳಿದರು.

Advertisement

ಜಿಲ್ಲಾ ಪಂಚಾಯತ್‌ ಸದಸ್ಯ ತೇಜಸ್ವಿ ಪಟೇಲ್‌ ಮಾತನಾಡಿ, ಮುಂದಿನ ಮಹಿಳಾ ದಿನಾಚರಣೆ ವೇಳೆಗೆ ವೃದ್ಧಾಶ್ರಮಕ್ಕೆ ಯಾರನ್ನೂ ಕಳಿಸುವುದಿಲ್ಲ. ಹೆಣ್ಣು ಭ್ರೂಣ ಹತ್ಯೆ ಮಾಡುವುದಿಲ್ಲ. 3 ವರ್ಷದವರೆಗೆ ಎದೆಹಾಲು ಕುಡಿಸುತ್ತೇವೆ. ಒಂದೇ ಮಗು ಪಡೆಯುತ್ತೇವೆ ಎಂಬ ಪ್ರತಿಜ್ಞೆ ಮಾಡಬೇಕು ಎಂದು ಮನವಿ ಮಾಡಿದರು.

ಹಿರಿಯ ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ ಮಾತನಾಡಿ, ಮಹಿಳಾ ದಿನಾಚರಣೆಗೆ ಮೂಲ ಕಾರಣ ಹತ್ತಿ ಮಿಲ್‌ನಲ್ಲಿ ಮೂಲಭೂತ ಸೌಲಭ್ಯಕ್ಕೆ ಒತ್ತಾಯಿಸಿ ಬೀದಿಗಿಳಿದು ಹೋರಾಟ ನಡೆಸಿದಂತ ಮಹಿಳಾ ಕಾರ್ಮಿಕರು. ಮಹಿಳೆಯರಿಗೆ ಗೌರವ…ನೀಡುವುದೇ ಬಹು ಮುಖ್ಯ ಕೊಡುಗೆ. ಅಂಬೇಡ್ಕರ್‌ರವರ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು ಎಂದು ಆಶಿಸಿದರು.

ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಬಿ. ಪಾಲಾಕ್ಷಿ ಮಾತನಾಡಿ, ಮಹಿಳೆಯರನ್ನ ನೋಡುವ ದೃಷ್ಟಿಕೋನ ಬದಲಾವಣೆಯ ಮೂಲಕ ಎಲ್ಲಾ ಸಮಸ್ಯೆಗಳಿಗೆ ಇತಿಶ್ರೀ ಹಾಡಬೇಕು ಎಂದರು.

ಮಹಿಳೆಯರ ಸಮಸ್ಯೆಗಳು ಮತ್ತು ಸವಾಲುಗಳು… ವಿಷಯ ಕುರಿತು ರಾಜನಹಳ್ಳಿ ಸೀತಮ್ಮ ಪಿಯು ಕಾಲೇಜಿನ ಉಪನ್ಯಾಸಕಿ ಅರುಣಾಕುಮಾರಿ ಬಿರಾದಾರ್‌ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎನ್‌. ಲೋಕೇಶ್ವರಪ್ಪ, ತಾಲೂಕು ಪಂಚಾಯತ್‌ ಸದಸ್ಯ ಜಿ.ಜಿ. ಸಂಗಜ್ಜಗೌಡ್ರು, ಜಿಲ್ಲಾ ಸ್ರ್ತೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಜಿ.ಸಿ.ಮಂಗಳಾ, ತಾಲೂಕು ಅಧ್ಯಕ್ಷೆ ಶಕುಂತಲ ಇತರರು ಇದ್ದರು. ಸರ್ಕಾರಿ ಅಂಧ ಮಕ್ಕಳ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್‌. ವಿಜಯ್‌ಕುಮಾರ್‌ ಸ್ವಾಗತಿಸಿದರು. ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next