ದಾವಣಗೆರೆ: ನಾಡಹಬ್ಬ, ಶರನ್ನವರಾತ್ರಿ ಹಿನ್ನೆಲೆಯಲ್ಲಿ ದೇವನಗರಿ ಖ್ಯಾತಿಯ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಸಾಂಪ್ರದಾಯಿಕ ದೇವಿ ಆರಾಧಾನೆ, ಪೂಜಾ ಕಾರ್ಯ, ಪಾರಾಯಣ… ಇತರೆ ಧಾರ್ಮಿಕ ಕಾರ್ಯಕ್ಕೆ ಭಾನುವಾರ ಚಾಲನೆ ದೊರೆತಿದೆ. ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ದೇವಿಗೆ ವಿಶೇಷ ಪೂಜೆ, ಆರಾಧನೆ ಸಲ್ಲಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು. ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಉದ್ಯಮಿ ಎಸ್.ಎಸ್. ಗಣೇಶ್, ಕುಟುಂಬ ಸದಸ್ಯರು, ದುರ್ಗಾಂಬಿಕಾ ದೇವಸ್ಥಾನ ಸಮಿತಿಯವರು ಇದ್ದರು. ನವರಾತ್ರಿ ಉತ್ಸವದ ಮೊದಲ ದಿನ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಹಂಸವಾಹಿನಿ ಅಲಂಕಾರ ಮಾಡಲಾಗಿತ್ತು.
ವಿಶ್ವ ಹಿಂದು ಪರಿಷತ್ತು, ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಯಿಂದ 38ನೇ ವರ್ಷದ ಸಾರ್ವಜನಿಕ ವಿಜಯದಶಮಿ ಮಹೋತ್ಸವದ ಹಿನ್ನೆಲೆಯಲ್ಲಿ ಹಳೆ ಪಿಬಿ ರಸ್ತೆಯ
ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಶ್ರೀದೇವಿಯ ಘಟಸ್ಥಾಪನೆ ನೆರವೇರಿಸಿದರು. ಘಟ ಸ್ಥಾಪನೆಗೆ ಮುನ್ನ ಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನದಿಂದ ಕುಂಭ ಮೇಳದೊಂದಿಗೆ ಶ್ರೀದೇವಿ ಮೆರವಣಿಗೆ ನಡೆಯಿತು.
ನವರಾತ್ರಿ ಹಿನ್ನೆಲೆಯಲ್ಲಿ ವಿಶ್ವ ಹಿಂದು ಪರಿಷತ್ತು, ಮಾತೃ ದುರ್ಗಾವಾಹಿನಿ ಸಮಿತಿ ನೇತೃತ್ವದಲ್ಲಿ ದೇವರಾಜ ಅರಸು ಬಡಾವಣೆಯ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಬೆಳಗ್ಗೆ 7.30 ರಿಂದ ಸಂಜೆ 7.30ರ ವರೆಗೆ ಶ್ರೀ ನಾರಾಯಣಿ, ಶ್ರೀ ದೇವಿ ಸ್ತುತಿ ಅಖಂಡ ಪಾರಾಯಣ ನಡೆಯಿತು.
12 ತಂಡಗಳಲ್ಲಿ ನಿರಂತರವಾಗಿ ದೇವಿ ಪಾರಾಯಣ ನಡೆಸಲಾಯಿತು. ಕೆಟಿಜೆ ನಗರದ 3ನೇ ಮುಖ್ಯ ರಸ್ತೆ, 11ನೇ ಕ್ರಾಸ್ ನಲ್ಲಿರುವ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ನವರಾತ್ರಿ ಕಾರ್ಯಕ್ರಮ ಪ್ರಾರಂಭವಾದವು. ಹರಿಹರದ ತುಂಗಭದ್ರಾ ನದಿಯಲ್ಲಿ ಶ್ರೀದೇವಿಯ ಗಂಗಾಪೂಜೆ ನೆರವೇರಿಸಿದ ನಂತರ ಘಟಸ್ಥಾಪನೆ, ದೀಪ ಹಾಕುವ ಕಾರ್ಯಕ್ರಮ ನೆರವೇರಿದವು.
ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ದೇವಿ ಪಾರಾಯಣ, ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಸಂತ ಚಿತ್ರಮಂದಿರ ರಸ್ತೆಯ ಶ್ರೀ ಉತ್ಸವಾಂಬ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ರುದ್ರಾಭಿಷೇಕ, ಘಟಸ್ಥಾಪನೆ ನೆರವೇರಿಸಲಾಯಿತು. ಮಹಾಭಿಷೇಕ ಇತರೆ ಧಾರ್ಮಿಕ ಕಾರ್ಯ ನಡೆಯಲಿವೆ.
ದಾವಣಗೆರೆಯಲ್ಲಿ 33 ವರ್ಷಗಳ ನಂತರ ಶ್ರೀಮದ್ ರಂಭಾಪುರಿ ಪೀಠದ ಶರನ್ನವರಾತ್ರಿ ದಸರಾ ಮಹೋತ್ಸವ ಪ್ರಾರಂಭಗೊಂಡಿತು. ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಪೀಠದ ಅಧಿಕಾರಕ್ಕೆ ಏರಿದ ನಂತರ 28ನೇ ಶರನ್ನವರಾತ್ರಿ ದಸರಾ ಮಹೋತ್ಸವ ನಡೆಯುತ್ತಿರುವುದು ವಿಶೇಷ.
ಲೋಕ ಕಲ್ಯಾಣಾರ್ಥವಾಗಿ ಶ್ರೀಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ನಿರ್ಮಿಸಿರುವ ಮಾನವ ಧರ್ಮ ಮಂಟಪದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶರನ್ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಿದರು.
ವಿನೋಬ ನಗರ 1ನೇ ಮುಖ್ಯ ರಸ್ತೆ 10ನೇ ಕ್ರಾಸ್‌ನ ಶ್ರೀ ಕಾಳಿಕಾಂಬ ದೇವಸ್ಥಾನ, ದಾವಲ್ ಪೇಟೆಯ ಶ್ರೀ ಚೌಡೇಶ್ವರಿ ದೇವಸ್ಥಾನ, ಶ್ರೀ ನಿಮಿಷಾಂಬ ದೇವಸ್ಥಾನ. ರಿಂಗ್ ರಸ್ತೆಯ ಶ್ರೀ ಶಾರದಾಂಬ ದೇವಸ್ಥಾನ, ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನ, ಭಗತ್‌ಸಿಂಗ್ ನಗರದ ಶ್ರೀ ಚೌಡೇಶ್ವರಿ ದೇವಸ್ಥಾನ, ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಒಳಗೊಂಡಂತೆ ಅನೇಕ ದೇವಸ್ಥಾನಗಳಲ್ಲಿ ವಿಶೇಷ ಆಲಂಕಾರ, ಪೂಜಾ ಕಾರ್ಯಕ್ರಮ ನಡೆದವು.