Advertisement

ಫೆ.8ರಂದು ಬೃಹತ್‌ ಉದ್ಯೋಗ ಮೇಳ

11:43 AM Dec 23, 2019 | Naveen |

ದಾವಣಗೆರೆ: ದಾವಣಗೆರೆಯಲ್ಲಿ ಫೆ. 8 ರಂದು ಬೃಹತ್‌ ಮೇಳ ಉದ್ಯೋಗ ಮೇಳ ನಡೆಸಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ತಿಳಿಸಿದ್ದಾರೆ.

Advertisement

ಭಾನುವಾರ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದಲ್ಲಿ ಪ್ರಮಾಣಪತ್ರ ವಿತರಣೆ ಹಾಗೂ ಕೌಶಲ್ಯ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಫೆ.8 ರಂದು ನಡೆಸಲು ಉದ್ದೇಶಿಸಿರುವ ಬೃಹತ್‌ ಉದ್ಯೋಗ ಮೇಳದಲ್ಲಿ 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಅಗತ್ಯ ಒತ್ತು ನೀಡಲಾಗುವುದು. ಉದ್ಯೋಗದ ಅವಕಾಶ ಒದಗಿಸುವ ಉದ್ದೇಶದಿಂದ ಹೆಚ್ಚು ಗಾರ್ಮೆಂಟ್ಸ್‌ ಪ್ರಾರಂಭಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಯುವ ಜನಾಂಗ ತಮ್ಮಲ್ಲಿನ ಉದ್ಯೋಗ ಕೌಶಲ್ಯವನ್ನು ಸರಿಯಾಗಿ ಬಳಸಿಕೊಳ್ಳಬೇಕಾದ ಅಗತ್ಯತೆ ಇದೆ. ಯುವ ಜನಾಂಗದಲ್ಲಿರುವ ಕೌಶಲ್ಯಕ್ಕೆ ಇನ್ನಷ್ಟು ಮೆರಗು, ಅಗತ್ಯ ತರಬೇತಿ ನೀಡುವ ಉದ್ದೇಶದಿಂದ ದಾವಣಗೆರೆ ಒಳಗೊಂಡಂತೆ ದೇಶದಲ್ಲಿ 610 ಪ್ರಧಾನ ಮಂತ್ರಿ ಕೌಶಲ್ಯ ತರಬೇತಿ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ದಾವಣಗೆರೆಯ ಪ್ರಧಾನ ಮಂತ್ರಿ ಕೌಶಲ್ಯ ತರಬೇತಿ ಕೇಂದ್ರ ಬಹಳ ಚೆನ್ನಾಗಿ ನಡೆಯುತ್ತಿದೆ. ಇಲ್ಲಿ ತರಬೇತಿ ಪಡೆಯುವರಿಗೆ ವಸತಿ ನಿಲಯ ಸೌಲಭ್ಯ ಒದಗಿಸಲಾಗುವುದು. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಹಾಸ್ಟೆಲ್‌ ಪ್ರಾರಂಭಿಸುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

Advertisement

ನಿಟುವಳ್ಳಿಯ ಪ್ರಧಾನ ಮಂತ್ರಿ ಕೌಶಲ್ಯ ತರಬೇತಿ ಕೇಂದ್ರಕ್ಕೆ ಬಂದು ಹೋಗಲಿಕ್ಕೆ ಅನುಕೂಲ ಆಗುವಂತೆ ನಗರ ಸಾರಿಗೆ ಬಸ್‌ ಸೌಲಭ್ಯ ಒದಗಿಸಬೇಕು ಎಂಬ ವಿದ್ಯಾರ್ಥಿಗಳ ಬೇಡಿಕೆ ಇದೆ. ಈ ಸಂಬಂಧ ಕೆಸ್ಸಾರ್ಟಿಸಿ ಅಧಿಕಾರಿ ಗಳ ಜೊತೆ ಚರ್ಚಿಸಲಾಗುವುದು ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ದಾವಣಗೆರೆಯ ಪ್ರಧಾನ ಮಂತ್ರಿ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಉತ್ತಮ ತರಬೇತಿ ನೀಡುತ್ತಿರುವ ಕಾರಣಕ್ಕೆ ದಾವಣಗೆರೆ ಅಲ್ಲದೆ ಬೇರೆ ಜಿಲ್ಲೆಯವರು ಬಂದು ತರಬೇತಿ ಪಡೆಯುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಮಾಜಿ ಮೇಯರ್‌ ಉಮಾ ಪ್ರಕಾಶ್‌ ಮಾತನಾಡಿ, ಪ್ರಧಾನ ಮಂತ್ರಿ ಕೌಶಲ್ಯ ತರಬೇತಿ ಕೇಂದ್ರದಲ್ಲಿ ವಿದ್ಯಾವಂತರ ಜೊತೆಗೆ ಅನಕ್ಷರಸ್ಥರಿಗೆ ತರಬೇತಿ ನೀಡಲಾಗುತ್ತಿದೆ. ಪ್ರತಿಯೊಬ್ಬರು ಕೇಂದ್ರವನ್ನು ಸದುಪಯೋಗಪಡಿಸಿಕೊಂಡು ಉದ್ಯೋಗಸ್ಥರಾಗಬೇಕು. ಪ್ರಧಾನ ಮಂತ್ರಿ ಕೌಶಲ್ಯ ತರಬೇತಿ ಕೇಂದ್ರದ ಬಗ್ಗೆ ಇತರರಿಗೆ ಮಾಹಿತಿ ನೀಡುವ ಮೂಲಕ ನೆರವಾಗಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಎಚ್‌.ಸಿ. ಬಸವರಾಜ್‌ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿತ ಯೋಜನೆಯಾಗಿರುವ ಪ್ರಧಾನ ಮಂತ್ರಿ ಕೌಶಲ್ಯ ತರಬೇತಿ ಕೇಂದ್ರದಲ್ಲಿ 350ಕ್ಕೂ ಹೆಚ್ಚು ಜನರಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ಪ್ರಧಾನ ಮಂತ್ರಿ ಕೌಶಲ್ಯ ತರಬೇತಿ ಕೇಂದ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಇತರರಿಗೆ ನೀಡುವಂತಾಗಬೇಕು ಎಂದು ಆಶಿಸಿದರು.

ಪ್ರಧಾನ ಮಂತ್ರಿ ಕೌಶಲ್ಯ ತರಬೇತಿ ಕೇಂದ್ರದ ಶಿಕ್ಷಕಿ ಬಿ.ಆರ್‌. ವಾಣಿಶ್ರೀ ಮಾತನಾಡಿ, ಈವರೆಗೆ 1300ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಲಾಗಿದೆ. 1,200 ಜನರಿಗೆ ಪ್ರಮಾಣಪತ್ರ ನೀಡಲಾಗಿದೆ. 600 ಜನರು ವಿವಿಧ ಉದ್ಯೋಗ ಪಡೆದಿದ್ದಾರೆ. 18 ರಿಂದ 35 ವಯೋಮಾನದವರಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯರಾದ ಎಸ್‌. ಮಂಜುನಾಥ್‌, ಕೆ.ಎಂ. ವೀರೇಶ್‌, ರೂಮನ್‌ ಟೆಕ್ನಾಲಜಿಯ ಜಿ.ಆರ್‌. ಕುಲಕರ್ಣಿ, ಪ್ರಧಾನ ಮಂತ್ರಿ ಕೌಶಲ್ಯ ತರಬೇತಿ ಕೇಂದ್ರದ ಪೂರ್ಣಿಮಾ, ಜ್ಯೋತಿ ಇತರರು ಇದ್ದರು. ಪ್ರಮಾಣಪತ್ರ ವಿತರಿಸಲಾಯಿತು. ವಿವಿಧ ವಸ್ತು ಪ್ರದರ್ಶನ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next