Advertisement
ವಿನೋಬ ನಗರ 2ನೇ ಮುಖ್ಯ ರಸ್ತೆಯ ಶ್ರೀ ವೀರ ವರಸಿದ್ಧಿ ವಿನಾಯಕನ ವಿಸರ್ಜನಾ ಮೆರವಣಿಗೆ ತನ್ನದೇ ಆದ ಖ್ಯಾತಿಗೆ ತಕ್ಕಂತೆ ಸೊಬಗಿನಿಂದ ಕೂಡಿತ್ತು. ಭರ್ಜರಿ ಮೆರವಣಿಗೆಗೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಚಾಲನೆ ನೀಡಿದರು. ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್, ನಗರಸಭೆ ಮಾಜಿ ಉಪಾಧ್ಯಕ್ಷ ಎ. ನಾಗರಾಜ್, ಶ್ರೀ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಟಿ.ಎಂ. ಗುರುನಾಥ್‌ಬಾಬು, ಗಣೇಶ್, ಡಿ.ಎಸ್. ರಮೇಶ್, ಎಂ. ಟಿಪ್ಪುಸುಲ್ತಾನ್, ಬೆಳ್ಳೊಡಿ ಮಂಜುನಾಥ್, ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ, ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ, ತಹಶೀಲ್ದಾರ್ ಜಿ. ಸಂತೋಷ್‌ಕುಮಾರ್ ಇತರರು ಸಾಥ್ ನೀಡಿದರು.
Related Articles
Advertisement
ಗಣಪತಿ ಬಪ್ಪ ಮೋರಯ… ಜೈ ಜೈ ಶಿವಾಜಿ… ಜೈ ಶ್ರೀರಾಮ್…, ಭಾರತ್ ಮಾತಾ ಕೀ ಜೈ… ಎಂಬ ಘೋಷಣೆ ಮೊಳಗಿದವು. ಮುಗಿಲು ಮುಟ್ಟುವಂತೆ ವಿಘ್ನೇಶ್ವರ್ ಮಹಾರಾಜ್ ಕೀ ಜೈ… ಎಂಬ ಜೈಕಾರ ಹಾಕಿದರು. ಮೆರವಣಿಗೆ ಸಾಗಿ ಬಂದ ಇಕ್ಕೆಲಗಳ ಕಟ್ಟಡಗಳಿಂದ ಹೂವಿನ ಮಳೆ ಸುರಿಸುವ ಮೂಲಕ ಮೆರವಣಿಗೆಗೆ ಇನ್ನಷ್ಟು ಸೊಬಗು ಹೆಚ್ಚಿಸಲಾಯಿತು.
ಮೆರವಣಿಗೆ ಸಾಗುತ್ತಿದ್ದಂತೆ ಜನರ ಸಂಖ್ಯೆ ಜಾಸ್ತಿಯಾಗತೊಡಗಿತು. ಸಾವಿರಾರು ಜನರು ಮೆರವಣಿಗೆಗೆ ಕೂಡಿ ಕೊಂಡಿದ್ದರಿಂದ ಕಾಲಿಡಲು ಜಾಗ ಇಲ್ಲದಂತಾಯಿತು. ಕಿರಿದಾದ ರಸ್ತೆಯುದ್ದಕ್ಕೂ ಅಕ್ಷರಶಃ ಜನಸಾಗರವೇ ಕಂಡು ಬಂದಿತು. ಚಿಕ್ಕ ಮಕ್ಕಳು, ಯುವಕರು, ವಯೋವೃದ್ಧರು… ಎನ್ನದೆ ಎಲ್ಲರೂ ಹೆಜ್ಜೆ ಹಾಕಿ, ಸಂಭ್ರಮಿಸಿದರು.
ಮೆರವಣಿಗೆ ಪ್ರಾರ್ಥನಾ ಮಂದಿರದ ಬಳಿ ಬರುವ ವೇಳೆಗೆ ಸಾಗರೋಪಾದಿ ಜನರು ನೆರೆದಿದ್ದರು. ಮೆರವಣಿಗೆಯಲ್ಲಿದ್ದವರ ಹರ್ಷೋದ್ಘಾರ ಹೆಚ್ಚಾಯಿತು.ಅಲ್ಪಸಂಖ್ಯಾತ ಮುಖಂಡರು ಗಣೇಶಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾದರು. ಪ್ರಾರ್ಥನಾ ಮಂದಿರದ ಬಳಿ ಸ್ವತಃ ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ, ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ, ತಹಶೀಲ್ದಾರ್ ಜಿ. ಸಂತೋಷ್‌ಕುಮಾರ್ ನಿಂತಿದ್ದು ಆಗಾಗ ಕೆಲ ಸೂಚನೆ ನೀಡುವ ಮೂಲಕ ಮೆರವಣಿಗೆ ಮುಂದೆ ಸಾಗುವ ಉಸ್ತುವಾರಿ ವಹಿಸಿಕೊಂಡಿದ್ದರು.
ವಿನೋಬ ನಗರ 2ನೇ ಮುಖ್ಯ ರಸ್ತೆ, ಅರುಣಾ ಚಿತ್ರಮಂದಿರ ವೃತ್ತ, ರಾಂ ಆ್ಯಂಡ್ ಕೋ ವೃತ್ತ, ಚರ್ಚ್ ರಸ್ತೆ, ವಿನೋಬ ನಗರ 1ನೇ ಮುಖ್ಯ ರಸ್ತೆ, ಹಳೆ ಪಿಬಿ ರಸ್ತೆಯ ಮೂಲಕ ಬಾತಿ ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುವ ವೇಳೆಗೆ ರಾತ್ರಿಯಾಗಿತ್ತು.
ಸಾಕಷ್ಟು ಬಿಗಿ ಪೊಲೀಸ್, ಹೋಂ ಗಾರ್ಡ್‌ಭದ್ರತೆ ಒದಗಿಸಲಾಗಿತ್ತು. 68ಕ್ಕೂ ಹೆಚ್ಚು ಭಾಗದಲ್ಲಿ ಸಿಸಿ ಟಿವಿ ಕ್ಯಾಮೆರಾ, ಡ್ರೋಣ್ ಕ್ಯಾಮೆರಾ, ನೀರು, ತಂಪು ಪಾನೀಯ, ತಿಂಡಿ, ತುರ್ತು ಸೇವೆಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಟ್ರ್ಯಾಕ್ಟರ್ ಹರಿದ ಪರಿಣಾಮ ಓರ್ವ ಪಿಎಸ್‌ಐ, ಪೇದೆಯೊಬ್ಬರ ಕಾಲಿಗೆ ಗಾಯವಾಗಿದ್ದು ಬಿಟ್ಟರೆ ಮೆರವಣಿಗೆ ಶಾಂತಿಯುತವಾಗಿ ನಡೆಯಿತು.