ದಾವಣಗೆರೆ: ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಶುಕ್ರವಾರ ಜಿಲ್ಲಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಸರತಿ ಸಾಲಿನಲ್ಲಿ ನಿಂತ ರೋಗಿಗಳಿಗೆ ಶೀಘ್ರ ತಪಾಸಣೆ, ಒಳರೋಗಿಗಳಿಗೆ ಗುಣಮಟ್ಟದ ಆಹಾರ ಪೂರೈಕೆ, ಡಿ- ಗ್ರೂಪ್ ನೌಕರರ ವೇತನ ಪಾವತಿಗೆ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದರು.
ಹೊರರೋಗಿ ಕೌಂಟರ್, ಬಿಪಿ, ಶುಗರ್ ತಪಾಸಣಾ ಸರತಿಯಲ್ಲಿ ಬಹು ಸಂಖ್ಯೆಯಲ್ಲಿ ಹೊರರೋಗಿಗಳು ನಿಂತಿರುವುದನ್ನು ಗಮನಿಸಿ, ವಿಚಾರಿಸಿದರು. ಬೇಗ ತಪಾಸಣೆ ಮಾಡದೆ ನಿಧಾನಗತಿಯಲ್ಲಿ ತಪಾಸಣೆ ಮಾಡುತ್ತಾರೆ ಎಂದು ತಿಳಿಸಿದರು. ಶೀಘ್ರವಾಗಿ ತಪಾಸಣೆ ನಡೆಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೀಲು, ಮೂಳೆ ವಿಭಾಗದ ಪುರುಷರ ವಾರ್ಡ್ ಭೇಟಿ ನೀಡಿ, ಚಿಕಿತ್ಸೆ ಹಾಗೂ ಆಹಾರ ಪೂರೈಕೆ ಕುರಿತು ವಿಚಾರಿಸಿದರು. ಬೆಳಿಗ್ಗೆ ಬ್ರೆಡ್, ಮೊಟ್ಟೆ, ಕಾಫಿ, ಮಧ್ಯಾಹ್ನ ಊಟ ನೀಡುತ್ತಿರುವುದಾಗಿ ಒಳರೋಗಿಗಳು ತಿಳಿಸಿದರು.
ಅಡುಗೆ ಕೋಣೆಗೆ ಭೇಟಿ ನೀಡಿದಾಗ ಮುಂಬಾಗಿಲು ಬೀಗ ಹಾಕಿ, ಹಿಂಬಾಗಿಲು ತೆರೆದು ಕೆಲಸ ಮಾಡುತ್ತಿರುವುದು ಗಮನಿಸಿದ ಜಿಲ್ಲಾಧಿಕಾರಿ, ಸರಿಯಾದ ಕ್ರಮದಲ್ಲಿ ಹಾಗೂ ಉತ್ತಮ ಗುಣಮಟ್ಟದ ಆಹಾರವನ್ನು ಸ್ವಚ್ಛತೆಯಿಂದ ಸಿದ್ಧಪಡಿಸಿ ನೀಡಲು ಸೂಚನೆ ನೀಡಿದರು. ಹೊರ ಗುತ್ತಿಗೆ ಆಧಾರಿತ ಗ್ರೂಪ್ ಡಿ ನೌಕರರಿಗೆ 3 ತಿಂಗಳಿನಿಂದ ವೇತನ ಪಾವತಿಸದಿರುವ ಬಗ್ಗೆ ದೂರು ಬಂದಿದೆ. ತಕ್ಷಣ ಸಂಬಂಧಪಟ್ಟ ಗುತ್ತಿಗೆದಾರರ ಮುಖಾಂತರ ವೇತನ ಪಾವತಿಗೆ ಕ್ರಮ ವಹಿಸುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚನೆ ನೀಡಿ, ವೇತನ ಪಾವತಿ ತಪ್ಪಿದಲ್ಲಿ ಗುತ್ತಿಗೆಯನ್ನು ತಕ್ಷಣ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸೂಚಿಸಲಾದ ವಿಷಯಗಳ ಕುರಿತು ಅಗತ್ಯ ಕ್ರಮ ವಹಿಸಲು ಹಾಗೂ ಆಸ್ಪತ್ರೆಗೆ ಹೆಚ್ಚಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಒಂದು ವಾರದೊಳಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಮರು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.