ದಾವಣಗೆರೆ: ಲಾಕ್‌ಡೌನ್ 2.0 ನಡುವೆ ರಾಜ್ಯ ಸರ್ಕಾರ ಎಲ್ಲಾ ಆರೋಗ್ಯ ಕ್ಷೇತ್ರ, ಕೃಷಿ ಮತ್ತು ಸಂಬಂಧಿತ, ಅಗತ್ಯ ವಸ್ತುಗಳ ಹೋಲ್‌ಸೇಲ್, ರಿಟೇಲ್ ಮಾರಾಟ, ಹೈನುಗಾರಿಕೆ, ಮೀನುಗಾರಿಕೆ, ಬ್ಯಾಂಕ್, ಎಟಿಎಂ ಒಳಗೊಂಡಂತೆ ಕೆಲವಾರು ಕ್ಷೇತ್ರಗಳಿಗೆ ವಿನಾಯತಿ ನೀಡಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ತಿಳಿಸಿದರು.
ಸಾರ್ವಜನಿಕ ಸಾರಿಗೆ, ರೈಲು, ಟ್ಯಾಕ್ಸಿ, ಕ್ಯಾಬ್, ಶೈಕ್ಷಣಿಕ ಕೋಚಿಂಗ್, ತರಬೇತಿ ಕೇಂದ್ರ, ಹೋಟೆಲ್, ಲಾಡ್ಜ್ (ಕೆಲವಕ್ಕೆ ಹೊರತುಪಡಿಸಿ), ಅಂತರ ಜಿಲ್ಲಾ, ರಾಜ್ಯ ಓಡಾಟಕ್ಕೆ ವಿನಾಯತಿ ಇಲ್ಲ.ಲಾಕ್‌ಡೌನ್‌ನ ಎಲ್ಲಾ ನಿಯಮಗಳು ಕಡ್ಡಾಯವಾಗಿ ಅನ್ವಯವಾಗಲಿವೆ. ವಿನಾಯತಿ ನೀಡಿರುವ ಕ್ಷೇತ್ರದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲೇಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಗ್ಯಾಸ್, ಪೆಟ್ರೋಲ್ ಬಂಕ್, ತರಕಾರಿ, ಹಣ್ಣು, ಹಾಲು, ಮೀನು, ಮಾಂಸ, ಇ-ಕಾಮರ್ಸ್‌ಗೆ ವಿನಾಯತಿ ನೀಡಲಾಗಿದೆ. ಹೋಟೆಲ್‌ಗಳಿಗೆ ಅನುಮತಿ ನೀಡಿದ್ದರೂ ಪಾರ್ಸೆಲ್‌ಗೆ ಮಾತ್ರ ಅವಕಾಶ ಇದೆ. ಯಾವುದೇ ಕಾರಣಕ್ಕೂ ಆಲ್ಲಿಯೇ ತಿಂಡಿ, ಊಟ ಮಾಡುವಂತಿಲ್ಲ. ನರೇಗಾ ಯೋಜನೆಯಡಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸಕ್ಕೆ ಅನುಮತಿ ನೀಡಲಾಗಿದೆ. ದಿನಸಿ ಅಂಗಡಿಗಳಿಂದ ಮನೆಗೆ ತಲುಪಿಸುವ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಜಿಲ್ಲಾಡಳಿತಕ್ಕೆ ದಾನಿಗಳಿಂದ 26 ಸಾವಿರ ಸಿದ್ಧ ಆಹಾರದ ಪೊಟ್ಟಣ, 14,393 ಆಹಾರದ ಕಿಟ್, 2.60 ಲಕ್ಷ ಮಾಸ್ಕ್, ಸಿಎಂ ನಿಧಿಗೆ 40 ಲಕ್ಷ, ಪ್ರಧಾನಮಂತ್ರಿ ನಿಧಿಗೆ 3 ಲಕ್ಷ ಬಂದಿದೆ. 1878 ವಲಸೆ ಕಾರ್ಮಿಕರಿಗೆ ಒಟ್ಟು 474 ಆಹಾರದ ಕಿಟ್ ನೀಡಲಾಗಿದೆ. ಮನೋರಂಜನೆಗೆ ಅವಕಾಶ ನೀಡಲಾಗುವುದು. ಇದುವರೆಗೆ ಎಸ್ ಡಿಆರ್‌ಎಫ್‌ನಿಂದ ಆಹಾರದ ಕಿಟ್ ನೀಡಲು ಅವಕಾಶ ಇರಲಿಲ್ಲ. ಇತೀ¤ಚಿನ ಆದೇಶದಂತೆ ಅರ್ಹರಿಗೆ ಆಹಾರದ ಕಿಟ್ ವಿತರಣೆ ಮಾಡಲಾಗುವುದು. ಶಾಸಕರ ನಿಧಿಯಿಂದಲೂ ಆಹಾರದ ಕಿಟ್ ವಿತರಣೆ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿಪಂ ಸಿಇಒ ಪದ್ಮಾ ಬಸವಂತಪ್ಪ, ಉಪವಿಭಾಗಾಧಿಕಾರಿ ಡಾ| ಮಮತಾ ಹೊಸಗೌಡರ್, ಜಿ. ನಜ್ಮಾ, ರವೀಂದ್ರ ಮಲ್ಲಾಪುರ ಇತರರು ಇದ್ದರು.