ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಬಸವರಾಜ್ (ಭೈರತಿ), ಸಂಸದ ಜಿ.ಎಂ. ಸಿದ್ದೇಶ್ವರ್, ಬಿಜೆಪಿಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್
ಜಾಧವ್ ಮತ್ತು ಗೆಳೆಯರಿಂದ ದಾವಣಗೆರೆ ದಕ್ಷಿಣ ಭಾಗದ ವಿವಿಧ ವಾರ್ಡ್‌ಗಳಲ್ಲಿ 2,200ಕ್ಕೂ ಹೆಚ್ಚು ಆಹಾರದ ಕಿಟ್ ವಿತರಣೆ ಮಾಡಲಾಯಿತು.
ಪ್ರತಿ ಕಿಟ್‌ನಲ್ಲಿ 5 ಕೆಜಿ ಅಕ್ಕಿ 2 ಕೆಜಿ ರವೆ, 2 ಕೆಜಿ ಅವಲಕ್ಕಿ, 2 ಕೆಜಿ ಗೋಧಿ ಹಿಟ್ಟು, 1 ಕೆಜಿ ಬೇಳೆ, 1 ಕೆಜಿ ಉಪ್ಪು, 1 ಲೀಟರ್ ಶೇಂಗಾ ಎಣ್ಣೆ, 1ಪ್ಯಾಕೆಟ್ ಬಿಸ್ಕತ್, ಸೋಪು ಒಳಗೊಂಡಂತೆ 756 ರೂಪಾಯಿ ಮೊತ್ತದ ಸಾಮಗ್ರಿಗಳಿವೆ. ಹೊಂಡದ ವೃತ್ತದಲ್ಲಿ ಸಾಂಕೇತಿಕವಾಗಿ ಆಹಾರದ ಕಿಟ್ ವಿತರಣೆ ನಂತರ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ್, ಕೋವಿಡ್ ಹಿಂದೂ, ಮುಸ್ಲಿಂ, ಸಿಖ್ ಎಂದು ಯಾವುದನ್ನೂ ನೋಡಿ ಬರುವುದಿಲ್ಲ. ಪ್ರತಿಯೊಬ್ಬರಿಗೂ ಬರುವ ಸಾಧ್ಯತೆ ಇರುತ್ತದೆ. ಅದು ಬರದಂತೆ ಇರಬೇಕಾದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾದವರಿಗೆ ಆಹಾರದ ಕಿಟ್ ವಿತರಣೆ ಮಾಡಲಾಗುತ್ತಿದೆ. ಅರ್ಹರಿಗೆ ಮನೆಬಾಗಿಲಿಗೆ ತಲುಪಿಸುವ ಕೆಲಸವನ್ನ ಪಕ್ಷದ ಮುಖಂಡರು, ಕಾರ್ಯಕರ್ತರು ಮಾಡುತ್ತಿದ್ದಾರೆ. ಆಹಾರದ ಕಿಟ್ ಪಡೆಯಲಿಕ್ಕೆ ಬಂದ ಸಂದರ್ಭದಲ್ಲೂ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಹಕರಿಸಬೇಕು ಎಂದರು.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಹಾನಗರಪಾಲಿಕೆ ಸದಸ್ಯರಾದ ಎಸ್.ಟಿ. ವೀರೇಶ್, ರಾಕೇಶ್ ಜಾಧವ್, ಎಲ್.ಡಿ. ಗೋಣೆಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಆನಂದರಾವ್ ಶಿಂಧೆ, ಶಂಕರಗೌಡ ಬಿರಾದಾರ್, ಟಿಂಕರ್ ಮಂಜಣ್ಣ , ಪ್ರವೀಣ್ ಜಾಧವ್ ಇದ್ದರು