ದಾವಣಗೆರೆ: ಕೋವಿಡ್ ಸೋಂಕು ಪ್ರತಾಪ ಕೇವಲ ಒಂದೇ ವಾರದಲ್ಲಿ ದಾವಣಗೆರೆ ಚಿತ್ರಣವನ್ನೇ ಬದಲು ಮಾಡಿದೆ. ದಿನದಿಂದ ದಿನಕ್ಕೇ ಹೆಚ್ಚುತ್ತಿರುವ ಕೋವಿಡ್ ಸೋಂಕಿತರು ಹಾಗೂ ಮೃತರ ಸಂಖ್ಯೆ ಮಹಾನಗರ ಪಾಲಿಕೆ ನಾಗರಿಕರನ್ನು ಕಂಗೆಡಿಸಿದೆ. ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್ ನಿಂದ ದಾವಣಗೆರೆ ಜಿಲ್ಲೆಯಲ್ಲಿ ಈ ಮೊದಲು ಆತಂಕವೇನೂ ಸೃಷ್ಟಿಯಾಗಿರಲಿಲ್ಲ. ವಿದೇಶದಿಂದ ಬಂದಿದ್ದ ಮೂವರಿಗೆ (ಚಿತ್ರದುರ್ಗ ಜಿಲ್ಲೆಯಲ್ಲಿ ವರದಿಯಾದ ಭೀಮಸಮುದ್ರದ ಮಹಿಳೆ ಕೇಸ್ ಸೇರಿ) ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ ನಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತು. ಅವರು ಈಗಾಗಲೇ ಗುಣಮುಖರಾಗಿ, ಮನೆಯಲ್ಲಿದ್ದಾರೆ.
ಈ ಪ್ರಕರಣಗಳ ನಿರ್ವಹಣೆ ಹಾಗೂ ಜಿಲ್ಲೆಯಲ್ಲಿ ಯಾವುದೇ ಹೊಸ ಕೇಸ್ ದಾಖಲಾಗದಿದ್ದರಿಂದ ಎಲ್ಲರೂ ನೆಮ್ಮದಿಯಿಂದ ಇದ್ದರು. ಆದರೆ. ಈಗ ಮಹಾಮಾರಿ ಕೋವಿಡ್ ಆ ನೆಮ್ಮದಿ ಕಸಿದುಕೊಂಡಿದೆ. ದಾವಣಗೆರೆ ನಗರದ ಜನರೀಗ ಪ್ರತಿದಿನ ಮಧ್ಯಾಹ್ನ 12 ಹಾಗೂ ಸಂಜೆ 5ಕ್ಕೆ ಆರೋಗ್ಯ ಇಲಾಖೆ ಮಾಧ್ಯಮಗಳ ಮೂಲಕ ಪ್ರಕಟಿಸುವ ಬುಲೆಟಿನ್ ಅನ್ನು ಭಯದಿಂದಲೇ ನೋಡುವಂತಾಗಿದೆ. ಪಾಸಿಟಿವ್ ಪ್ರಕರಣ ವರದಿಯಾದ 28 ದಿನಗಳ ಅವಧಿಯಲ್ಲಿ ಹೊಸ ಕೇಸ್ ಕಾಣಿಸಿಕೊಳ್ಳದಿದ್ದಲ್ಲಿ ಕೇಂದ್ರದ ಆರೋಗ್ಯ ಇಲಾಖೆ ನಿಯಮಾನುಸಾರ ಆ ಜಿಲ್ಲೆ ಹಸಿರು ವಲಯಕ್ಕೆ ಸೇರ್ಪಡೆಯಾಗಲಿದೆ. ಆ ನಿಟ್ಟಿನಲ್ಲಿ 32 ದಿನಗಳ ಅವಧಿಯಲ್ಲಿ ಒಂದೇ ಒಂದು ಕೋವಿಡ್ ಕೇಸ್ ವರದಿಯಾಗದಿದ್ದರಿಂದ ದಾವಣಗೆರೆ ಜಿಲ್ಲೆಯನ್ನು ಹಸಿರು ವಲಯಕ್ಕೆ ಸೇರ್ಪಡೆಗೊಳಿಸಿದ ಬಗ್ಗೆ ಏ. 29ರಂದು ಪ್ರಕಟಿಸಲಾಯಿತು. ಆದರೆ, ಕೆಲ ಗಂಟೆಗಳ ಅಂತರದಲ್ಲಿ ನಗರದ ಸ್ಟಾಫ್ ನರ್ಸ್‌ಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಆತಂಕ ಎದುರಾಯಿತು.
ಆ ದಿನದ ಮಧ್ಯರಾತ್ರಿ 69 ವರ್ಷದ ಜಾಲಿನಗರದ ವೃಯೋವೃದ್ಧಗೂ ಸೋಂಕು ತಗುಲಿರುವುದು ಜಿಲ್ಲಾಡಳಿತವನ್ನ ಚಿಂತೆಗೀಡು ಮಾಡಿತು. ಕೋವಿಡ್ ಸೋಂಕಲ್ಲದೆ, ಅನಾರೋಗ್ಯ ಸಮಸ್ಯೆಯಿಂದ ಬಳಲು ರೋಗಿ-556 (ವೃದ್ದ) ಮೇ 1ರಂದು ಮೃತಪಟ್ಟರು. ಈ ಮಧ್ಯೆ ಆ ವೃದ್ಧನ ಕುಟುಂಬದವವರಲ್ಲಿ ಒಂದು ವರ್ಷದ ಮಗು ಸೇರಿ ಐವರಿಗೆ ಹಾಗೂ ಸ್ಟಾಫ್ ನರ್ಸ್‌ನ 16 ವರ್ಷದ ಮಗನಿಗೂ ಮಹಾಮಾರಿ ವ್ಯಾಪಿಸಿತು. ಮೇ 3ರಂದು ದಾವಣಗೆರೆ ನಡುಗುವ ಸುದ್ದಿ ಬಹಿರಂಗವಾಯಿತು.
ಕೋವಿಡ್ ವೈರಸ್ ಸೋಂಕು ಮತ್ತೆ 21 ಮಂದಿಗೆ ಅಂಟಿಕೊಂಡಿರುವ ವರದಿ ಜಿಲ್ಲಾಡಳಿತದ ಕೈ ಸೇರಿತು. ಆ ಸುದ್ದಿಯಿಂದ ಬೆಣ್ಣೆದೋಸೆ ನಗರದ ಮಂದಿ ನಿದ್ದೆಯಲ್ಲೂ ಬೆಚ್ಚಿ ಬೀಳುವಂತಾಯಿತು. ಅಪಾರ ಪ್ರಮಾಣದ ಕೊರೊನಾ ಪಾಸಿಟಿವ್ ಪ್ರಕರಣಗಳಿಂದ ಎಚ್ಚೆತ್ತಗೊಂಡ ಜಿಲ್ಲಾಡಳಿತ ನಗರದಲ್ಲಿ ಜನ ಹಾಗೂ ವಾಹನಗಳ ಸಂಚಾರ ಕಡಿವಾಣಕ್ಕೆ ಮುಂದಾಯಿತು. ಮೇ 2ರಂದು ಮಧ್ಯರಾತ್ರಿ ಕೊರೊನಾ ಸೋಂಕಿತ ಮಹಿಳೆ (ರೋಗಿ-533 ದ್ವಿತೀಯ ಸಂಪರ್ಕ) ಸಾವನ್ನಪ್ಪಿದರು.
ಮೇ 5ರಂದು ಹೊಸದಾಗಿ 12 ಕೋವಿಡ್ ಪ್ರಕರಣ ದೃಢಪಟ್ಟಿದ್ದಲ್ಲದೆ, ಜಾಲಿನಗರದ ಮಹಿಳೆ (ರೋಗಿ ನಂಬರ್ 662) ಮೃತಪಟ್ಟರು. ರೋಗಿ ನಂಬರ್ 556ರ ದ್ವಿತೀಯ ಸಂಪರ್ಕದಲ್ಲಿದ್ದ 50 ವರ್ಷದ ಆ ಮಹಿಳೆಯನ್ನು ಮೇ.2 ರಂದು ಕೋವಿಡ್ ಆಸ್ಪತ್ರೆಗೆ ದಾಖಲಿಸಿ, ಅಂದೇ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಹೃದಯ ಸ್ತಂಭನದಿಂದ ಮೃತಪಟ್ಟರು. ಮಹಿಳೆಗೆ ವೈರಲ್ ನ್ಯುಮೋನಿಯಾ ಇತ್ತು. ರೋಗಿ ನಂಬರ್ 556ರ ದ್ವಿತೀಯ ಸಂಪರ್ಕದಿಂದ ಕೊರೊನಾಕ್ಕೂ ತುತ್ತಾಗಿದ್ದರು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಗುರುವಾರ (ಮೇ 7) ಮೂವರು ಮಹಿಳೆಯರಿಗೆ ಸೋಂಕು ದೃಢಪಟ್ಟಿದೆಯಲ್ಲದೆ, ಅವರಲ್ಲಿ 55 ವರ್ಷದ ಮಹಿಳೆ ಮೃತರಾಗಿದ್ದಾರೆ. ಆ ಮಹಿಳೆ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು, ಮೃತಪಟ್ಟ ನಂತರ ಆಕೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಮೂವರು ಮಹಿಳೆಯರು ಹಾಗೂ ಓರ್ವ ವೃದ್ಧ ಸೇರಿ ನಾಲ್ವರು ಕೋವಿಡ್ ಗೆ ಬಲಿಯಾಗಿದ್ದಾರೆ. ಜತೆಗೆ ಸೋಂಕಿತರ ಸಂಖ್ಯೆ 47ಕ್ಕೇರಿ ಆತಂಕ ಮೂಡಿಸಿದೆ.
ಎನ್.ಆರ್.ನಟರಾಜ್