ದಾವಣಗೆರೆ: ಮಹಾನಗರ ಪಾಲಿಕೆಯ 22ನೇ ಅವಧಿಯ ಮೇಯರ್-ಉಪ ಮೇಯರ್, ನಾಲ್ಕು ಸ್ಥಾಯಿ ಸಮಿತಿಗಳ ಚುನಾವಣೆ ಫೆ. 24 ರಂದು ನಿಗದಿಯಾಗಿದ್ದು, ಪಾಲಿಕೆ ಆಡಳಿತದ ಚುಕ್ಕಾಣಿ ಯಾರ ಪಾಲಾಗಲಿದೆ ಎಂಬ ಕುತೂಹಲ ಮೂಡಿದೆ.
ಒಟ್ಟು 45 ಸದಸ್ಯತ್ವ ಬಲದ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಸದಸ್ಯೆ ರಾಜೀನಾಮೆಯಿಂದ 44 ಸದಸ್ಯರು ಇದ್ದಾರೆ. ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಒಳಗೊಂಡಂತೆ ಮೇಯರ್-ಉಪ ಮೇಯರ್, ನಾಲ್ಕು ಸ್ಥಾಯಿ ಸಮಿತಿಗಳ ಆಯ್ಕೆಗೆ 58 ಮತದಾರರು ಮತ ಚಲಾಯಿಸಲು ಅವಕಾಶವಿದೆ.
ಎರಡೂ ಪಕ್ಷಗಳಿಗೂ ಪ್ರತಿಷ್ಠೆ: ಕಳೆದ ಫೆ. 19 ರಂದು ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಬಾರಿಯೂ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ತಂತ್ರ ರೂಪಿಸಿದ್ದು, ಮತ್ತೂಮ್ಮೆ ಗೆಲುವಿನ ವಿಶ್ವಾಸದಲ್ಲಿದೆ. ಬಿಜೆಪಿಯ 17 ಸದಸ್ಯರ ಜೊತೆಗೆ ನಾಲ್ವರು ಪಕ್ಷೇತರರು, ಸಂಸದರು, ಶಾಸಕರು, 7 ಜನ ವಿಧಾನ ಪರಿಷತ್ ಸದಸ್ಯರು ಒಳಗೊಂಡಂತೆ 30 ಸದಸ್ಯರಿದ್ದಾರೆ. ಅಧಿಕಾರಕ್ಕೇರುವ ಸಂಖ್ಯಾ ಬಲವನ್ನು ಬಿಜೆಪಿ ಹೊಂದಿದೆ.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಸದಸ್ಯರ ಹೊಂದಿದ್ದರೂ ಅಧಿಕಾರಕ್ಕೆ ಬರುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಶತಾಯಗತಾಯ ಪ್ರಯತ್ನ ನಡೆಸಿದೆ. ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಆವರ ನೇತೃತ್ವದಲ್ಲಿ ಗೆಲುವಿನ ತಂತ್ರ- ಪ್ರತಿತಂತ್ರ ನಡೆಸಲಾಗಿದೆ. ಕಾಂಗ್ರೆಸ್‌ನ 21 ಸದಸ್ಯರೊಟ್ಟಿಗೆ ಓರ್ವ ಪಕ್ಷೇತರ, ಶಾಸಕರು, 4 ಜನ ವಿಧಾನ ಪರಿಷತ್ ಹಾಗೂ ಜೆಡಿಎಸ್ ಓರ್ವ ಸದಸ್ಯೆ ಸೇರಿದಂತೆ ಒಟ್ಟು 28 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬಂದೇ ತೀರುವ ವಿಶ್ವಾಸದಲ್ಲಿದೆ.
ಆಕಾಂಕ್ಷಿಗಳು ಯಾರ್ಯಾರು?: ಬಿಜೆಪಿಯಲ್ಲಿ ಎಸ್.ಟಿ. ವೀರೇಶ್, ವೀಣಾ ನಂಜಪ್ಪ, ಕೆ.ಎಂ. ವೀರೇಶ್, ರಾಕೇಶ್ ಜಾಧವ್ ಮೇಯರ್‌ಗಿರಿ ಪೈಪೋಟಿಯಲ್ಲಿದ್ದಾರೆ. ಈಗಾಗಲೇ ಕೋರ್ ಸಮಿತಿ ಸಭೆ ನಡೆದಿದೆ. ಮಂಗಳವಾರ ರಾತ್ರಿ ಮತ್ತೂಂದು ಸುತ್ತಿನ ಸಭೆ ನಡೆಸಿ, ಮೇಯರ್-ಉಪ ಮೇಯರ್ ಯಾರು ಎಂಬ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಕಾಂಗ್ರೆಸ್‌ನಲ್ಲಿ ದೇವರಮನೆ ಶಿವಕುಮಾರ್, ಕೆ. ಚಮನ್‌ಸಾಬ್, ಗಡಿಗುಡಾಳ್ ಮಂಜುನಾಥ್ ಹೆಸರು ಮೇಯರ್ ಸ್ಥಾನಕ್ಕೆ ಕೇಳಿ ಬರುತ್ತಿವೆ. ಕಳೆದ ಬಾರಿಯಂತೆ ಕಹಿ ಅನುಭವ ಆಗಬಾರದು ಎಂದು ವಿಪ್ ಸಹ ಜಾರಿ ಮಾಡಲಾಗಿದೆ. ಮೇಯರ್, ಉಪ ಮೇಯರ್ ಸ್ಥಾನ ಬಿಜೆಪಿ ಅಥವಾ ಕಾಂಗ್ರೆಸ್ ಪಾಲಾಗಲಿದೆಯೇ ಎಂಬ ಪ್ರಶ್ನೆಗೆ ಬುಧವಾರ ಉತ್ತರ ದೊರೆಯಲಿದೆ.