Advertisement

ಸ್ಮಾರ್ಟ್ ಸಿಟಿಯಲ್ಲಿ ಸ್ಮಾರ್ಟ್‌ ಕೆಲಸ ಆಗಲಿ

01:09 PM Dec 18, 2019 | Naveen |

ದಾವಣಗೆರೆ: ಹಳೆಯ ದಾವಣಗೆರೆ ಭಾಗದಲ್ಲಿ ವಲಯ ಕಚೇರಿ, ಆನ್‌ಲೈನ್‌ ಡಿಜಟಲೀಕರಣ, ನಮ್ಮ ಪಾಲಿಕೆ ದಾವಣಗೆರೆ ಆ್ಯಪ್‌ ಲೋಕಾರ್ಪಣೆ, ಪತ್ರಕರ್ತರ ಕ್ಷೇಮನಿಧಿ ಸ್ಥಾಪನೆ, ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ನೇಮಕಾತಿ, ಫುಡ್‌ಕೋರ್ಟ್‌ ಪ್ರಾರಂಭ, ಮುಖ್ಯ ವೃತ್ತ, ರಸ್ತೆಯಲ್ಲಿ ಪಾರ್ಕಿಂಗ್‌ ಸೌಲಭ್ಯ.

Advertisement

ಇವು ಬುಧವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ 2020-21ನೇ ಸಾಲಿನ ಮೊದಲನೇ ಆಯ-ವ್ಯಯ ಪೂರ್ವಭಾವಿ ಸಭೆಯಲ್ಲಿ ಕೇಳಿ ಬಂದ ಕೆಲ ಸಲಹೆ. ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್‌ ಎಸ್‌. ದೇವರಮನೆ ಮಾತನಾಡಿ, ದಾವಣಗೆರೆ ನಗರಸಭೆ ಆಗಿದ್ದ ಸಂದರ್ಭದಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ನೇಮಕಗೊಂಡಿರುವ ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಳ ಆಗಿಲ್ಲ.

ದಾವಣಗೆರೆಯಲ್ಲಿರುವ 10 ಲಕ್ಷದಷ್ಟು ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ನೇಮಕಾತಿಗೆ ಬಜೆಟ್‌ನಲ್ಲಿ ಅವಕಾಶ ಮಾಡಿಕೊಳ್ಳಬೇಕು. ನಗರಪಾಲಿಕೆಗೆ ಸಂಬಂಧಿಸಿದಂತೆ ದೂರು ದಾಖಲಿಸಲು ದಿಕ್ಕು ದೆಸೆಯೇ ಇಲ್ಲ. ಆನ್‌ಲೈನ್‌ ಟ್ರ್ಯಾಕಿಂಗ್‌ ಸಿಸ್ಟಂ ಪ್ರಾರಂಭಿಸಿ, ದೂರುಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ ಲೋಡ್‌ ಮಾಡುವಂತಾಗಬೇಕು. ಕೆಲಸಗಳು ಚುರುಕಾಗಿ ನಡೆಯುತ್ತಿವೆ. ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತಾಗುತ್ತದೆ ಎಂದು ತಿಳಿಸಿದರು.

ಯುವ ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಎಲ್‌.ಎಚ್‌. ಸಾಗರ್‌, ದಾವಣಗೆರೆ ದಕ್ಷಿಣ ಭಾಗದಲ್ಲಿ ಅತಿ ಹೆಚ್ಚಿನ ಸಂಖ್ಯೆ ಯಲ್ಲಿರುವ ಕ್ರೀಡಾಪಟುಗಳ ಅನುಕೂಲಕ್ಕಾಗಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಬೇಕು. ಕ್ರೀಡಾಪಟು ಗಳ ಪ್ರೋತ್ಸಾಹಧನ ಹೆಚ್ಚಿಸುವ ಮೂಲಕ ಅನುಕೂಲ ಮಾಡಿಕೊಡಬೇಕು. ಬೃಹತ್‌ ನಗರಗಳ ಮಾದರಿಯಲ್ಲಿ ಪ್ರಮುಖ ವೃತ್ತ, ರಸ್ತೆಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಿ, ಪಾಲಿಕೆಯಿಂದ ಶುಲ್ಕ ವಸೂಲಾತಿ ಮಾಡಿದರೆ ಆದಾಯವೂ ಬರುತ್ತದೆ.

ಸ್ಮಾರ್ಟ್‌ಸಿಟಿಗೆ ಅನುಗುಣವಾಗಿ ಸ್ಮಾರ್ಟ್‌ ಕೆಲಸ ಮಾಡಬೇಕು ಎಂದು ಸಲಹೆ ನೀಡಿದು. ಪ್ರಗತಿಪರ ಹೋರಾಟಗಾರ ಡಿ.ಅಸ್ಲಾಂಖಾನ್‌ ಮಾತನಾಡಿ, ದಾವಣಗೆರೆಯ ಹಳೆಯ ಭಾಗದಲ್ಲಿ ವಲಯ ಕಚೇರಿ ಪ್ರಾರಂಭಿಸುವ ಮೂಲಕ ಆಜಾದ್‌ ನಗರ, ಅಹಮ್ಮದ್‌ ನಗರ ಒಳಗೊಂಡಂತೆ ಆ ಭಾಗದ ಜನರಿಗೆ ಕಂದಾಯ ಪಾವತಿ ಇತರೆ ಕೆಲಸಕ್ಕೆ ಅನುಕೂಲ ಮಾಡಿಕೊಡಬೇಕು. ಹದಡಿ ರಸ್ತೆಯಲ್ಲಿ ಸ್ಯಾಟಲೈಟ್‌ ಬಸ್‌ ನಿಲ್ದಾಣ ಮಾಡುವ ಮೂಲಕ ಸಂಚಾರದ ದಟ್ಟಣೆ, ಒತ್ತಡ ಕಡಿಮೆ ಮಾಡುವ ರಚನಾತ್ಮಕ ಕ್ರಮ ತೆಗೆದುಕೊಳ್ಳ ಬೇಕ ಎಂದು ಒತ್ತಾಯಿಸಿದರು.

Advertisement

ಸಾರ್ವಜನಿಕರು, ವಿದ್ಯಾರ್ಥಿಗಳು, ವಯೋವೃದ್ಧರ ಸುರಕ್ಷತೆಗಾಗಿ ಅರುಣಾ ಚಿತ್ರಮಂದಿರ ವೃತ್ತ ಒಳಗೊಂಡಂತೆ ಪ್ರಮುಖ ಭಾಗದಲ್ಲಿ ಮೇಲ್ಸೇತುವೆ ನಿರ್ಮಿಸುವ ಮೂಲಕ ಜನರ ಪ್ರಾಣ ಕಾಪಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಹಾವೀರ ಇಜಾರಿ ಒತ್ತಾಯಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ. ಬಾವಿ, ಪತ್ರಕರ್ತರ ಅನುಕೂಲಕ್ಕಾಗಿ ಕ್ಷೇಮ ನಿಧಿ ಪ್ರಾರಂಭಿಸಬೇಕು. 45 ಇದ್ದ ಗ್ರಂಥಾಲಯಗಳನ್ನು ಈಗ 10-12ಕ್ಕೆ
ಮೊಟಕು ಮಾಡಲಾಗಿದೆ. ಗ್ರಂಥಾಲಯಗಳ ಸಂಖ್ಯೆ ಹೆಚ್ಚಿಸಿ, ಆಧುನಿಕ ಸ್ಪರ್ಶ ನೀಡಬೇಕು ಎಂದು ಒತ್ತಾಯಿಸಿದರು.

ಪತ್ರಕರ್ತ ಮಾಗನೂರು ಮಂಜಪ್ಪ ಮಾತನಾಡಿ, ನಮ್ಮ ಪಾಲಿಕೆ ದಾವಣಗೆರೆ ಆ್ಯಪ್‌ ಅಭಿವೃದ್ಧಿಪಡಿಸುವ ಮೂಲಕ ನಗರಪಾಲಿಕೆಗೆ ಸಂಬಂಧಿತ ಮಾಹಿತಿ ನೀಡಬೇಕು. ಸಾರಿಗೆ ಬಸ್‌ ನಿಲ್ದಾಣದ ಬಳಿ ಇರುವ ತಂಗುದಾಣವನ್ನ ಸರ್ಕಾರಿ ಆಸ್ಪತ್ರೆಗಳ ಆವರಣಕ್ಕೆ ಸ್ಥಳಾಂತರಿಸುವ ಮೂಲಕ ಪರ ಊರಿನವರು ತಂಗಲಿಕ್ಕೆ ಅನುಕೂಲ ಮಾಡಿಕೊಡಬೇಕು. ನಗರಪಾಲಿಕೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಹೆಚ್ಚು ಪ್ರಚಾರ ನೀಡಬೇಕು ಎಂದರು.

ದಸಂಸ ಮುಖಂಡ ಬಿ. ದುಗ್ಗಪ್ಪ, ಸ್ಮಾರ್ಟ್ ಸಿಟಿ ಯೋಜನೆಗೆ ಅನುಗುಣವಾಗಿ ಆಟೋರಿಕ್ಷಾ ನಿಲ್ದಾಣಗಳ ನಿರ್ಮಾಣ ಮಾಡಿ, ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. ಮಾನವ ಹಕ್ಕುಗಳ ಸಮಿತಿಯ ಎಚ್‌. ತಿಮ್ಮಣ್ಣ ಮಾತನಾಡಿ, ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲಿ ಸ್ವಾವಲಂಬಿ ಗಳಾಗುವ ನಿಟ್ಟಿನಲ್ಲಿ ಗಗನಸಖೀ ಹುದ್ದೆಗೆ ಆಕಾಂಕ್ಷಿಗಳಿಗೆ ನಗರಪಾಲಿಕೆ ವತಿಯಿಂದ ತರಬೇತಿ ಕೇಂದ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಮಲ್ಲಿಕಾರ್ಜುನ್‌ ಇಂಗಳೇಶ್ವರ್‌, ಸೋಮಲಾಪುರದ ಹನುಮಂತಪ್ಪ, ಕಬೀರ್‌ ಖಾನ್‌, ಎಸ್‌.ಎಂ. ಗೌಸ್‌, ಪತ್ರಕರ್ತ ಕುಂದೂರು ಪರಮೇಶ್‌, ಹದಡಿ ವೆಂಕಟೇಶ್‌, ಜಾರ್ಜ್‌ ಇತರರು ಸಲಹೆ ನೀಡಿದರು.

ಉಪ ಆಯುಕ್ತ(ಕಂದಾಯ) ಕೆ. ನಾಗರಾಜ್‌ ಮಾತನಾಡಿ, ಸಾರ್ವಜನಿಕರು, ಸಂಘ-ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳ ಸಲಹೆ, ಸೂಚನೆಗಳನ್ನು 2020-21ನೇ ಸಾಲಿನ ಬಜೆಟ್‌ನಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದರು.

ಮುಖ್ಯ ಲೆಕ್ಕಾಧಿಕಾರಿ ಶ್ರೀಕಾಂತ್‌ ನಾಯಕ, ಪ್ರಭಾರ ಉಪ ಆಯುಕ್ತ(ಅಭಿವೃದ್ಧಿ) ಆರ್‌.ಪಿ. ಜಾಧವ್‌, ಉಪ ಆಯುಕ್ತ(ಆಡಳಿತ) ಗದಿಗೇಶ್‌ ಕೆ. ಶಿರ್ಶಿ, ಕಾರ್ಯಪಾಲಕ ಅಭಿಯಂತರ ಕರಿಯಪ್ಪ, ಸಹಾಯಕ ಪರಿಷತ್ತು ಕಾರ್ಯದರ್ಶಿ ಜಯಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next