Advertisement

ಚುನಾವಣೆ ಅಸಲಿ ಖದರ್‌ ಅನಾವರಣ

11:19 AM Nov 01, 2019 | |

ದಾವಣಗೆರೆ: ಮೋಡ ಮುಸುಕಿದ ತಂಪನೆಯ ವಾತಾವರಣವನ್ನೂ ಬೆಚ್ಚಗಾಗಿಸುವಂತೆ ಮೊಳಗಿದ್ದ ಅಭ್ಯರ್ಥಿ, ಪಕ್ಷದ ಪರ ಜೈಕಾರದ ಘೋಷಣೆ…, ಕಿವಿಗಡಚಿಕ್ಕುವಂತೆ ಪಟಾಕಿ ಸುದ್ದು…, ಎತ್ತ ನೋಡಿದರೂ ಜನಸ್ತೋಮ…, ಬಿ-ಫಾರಂ ವಿಷಯವಾಗಿ ಆರೋಪ-ಪ್ರತ್ಯಾರೋಪ…, ಕಚೇರಿ ಒಳ ಹೋಗಲು ನೂಕು ನುಗ್ಗಲು…ಟ್ರಾಫಿಕ್‌ ಜಾಮ್‌…., ಇಂತಹ ಸನ್ನಿವೇಶ ಕಂಡು ಬಂದಿದ್ದು ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಗುರುವಾರ.

Advertisement

ಮಹಾನಗರ ಪಾಲಿಕೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾದಾಗನಿಂದಲೂ ನೀರಸ ವಾತಾವರಣ ಇತ್ತಾದರೂ ಕೊನೆಯ ದಿನ ಚುನಾವಣೆಯ ಅಸಲಿ ಖದರ್‌ ಅನಾವರಣಗೊಂಡಿತು.

ತಮ್ಮ ನೆಚ್ಚಿನ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಸಾಕ್ಷಿಯಾಗಿ ಅನೇಕರು ಡ್ಯಾನ್ಸ್‌ ಮಾಡಿದರು. ಪಟಾಕಿ ಸಿಡಿಸಿ, ಗುಲಾಲ್‌ ಎರಚಿ, ಸಿಹಿ ಹಂಚುವ ಮೂಲಕ ಸಂಭ್ರಮದಲ್ಲಿ ತೇಲಾಡಿದರು. ಬಿಜೆಪಿ ಮತ್ತು ಜೆಡಿಎಸ್‌ನ ಕೆಲವಾರು ಅಭ್ಯರ್ಥಿಗಳು ಮುಂಚೆಯೇ ನಾಮಪತ್ರ ಸಲ್ಲಿಸಿದ್ದರೂ ಅಂತಿಮ ದಿನ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು, ಕುಟುಂಬ ಸದಸ್ಯರೊಡನೆ ಆಗಮಿಸಿ ಮತ್ತೂಂದು ಸುತ್ತಿನ ನಾಮಪತ್ರ ಸಲ್ಲಿಸಿದರು. ಅಭಿಮಾನಿಗಳ ಹರ್ಷೋದ್ಘಾರ ಚುನಾವಣಾ ರಂಗಿನ ಪ್ರತೀಕವಾಗಿತ್ತು.

ಸತತ ಎರಡನೇ ಬಾರಿಗೆ ಮಹಾನಗರ ಪಾಲಿಕೆ ಅಧಿಕಾರ ಹಿಡಿಯುವ ಭಾರೀ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್‌ ಪಾಳೇಯದ ಮುಖಂಡರು ಗುರುವಾರ ಬೆಳಗಿನ ಜಾವ 3-4 ಗಂಟೆ ಸಮಯದಲ್ಲಿ ಬಿ-ಫಾರಂ ನೀಡಿದ್ದರಿಂದ ಅನೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ದೌಡಾಯಿಸಿ ಬಂದರು.

ಮಹಾನಗರ ಪಾಲಿಕೆಯ ಕಳೆದ ಅವಧಿಯಲ್ಲಿ ಉಪ ಮೇಯರ್‌ಗಳಾಗಿದ್ದ ಕೆ. ಅಬ್ದುಲ್‌ ಲತೀಫ್‌, ಕೆ. ಚಮನ್‌ ಸಾಬ್‌, ಮಾಜಿ ಸದಸ್ಯರಾದ ಜೆ.ಎನ್‌. ಶ್ರೀನಿವಾಸ್‌, ಎ.ಬಿ. ರಹೀಂ, ಅನ್ನಪೂರ್ಣ ಬಸವರಾಜ್‌, ಅನ್ನಪೂರ್ಣಮ್ಮ ಇತರರು ನಾಮಪತ್ರ ಸಲ್ಲಿಸಿದರು.

Advertisement

ದಾವಣಗೆರೆ ಉತ್ತರ ವಿಧಾನಸಭಾ ಶಾಸಕ ಎಸ್‌.ಎ. ರವೀಂದ್ರನಾಥ್‌ ಪುತ್ರಿ ಸೀಮಾ ಬಣಕಾರ್‌ ಆಂಜನೇಯ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಮೊದಲ ಅವಧಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಎಚ್‌. ಎನ್‌. ಶಿವಕುಮಾರ್‌ ಯಲ್ಲಮ್ಮ ನಗರದ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು.

ಕಾಂಗ್ರೆಸ್‌ನ ಜೆ.ಎನ್‌. ಶ್ರೀನಿವಾಸ್‌ ಭಗತ್‌ಸಿಂಗ್‌ ನಗರದಿಂದ ಮರು ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದರು. ಜೆ.ಎನ್‌. ಶ್ರೀನಿವಾಸ ಪತ್ನಿ ಎಸ್‌. ಶ್ವೇತಾ ಕೆ.ಇ.ಬಿ. ಕಾಲೋನಿಯಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು.

ಗಂಡ- ಹೆಂಡತಿ ಅಕ್ಕಪಕ್ಕದ ವಾರ್ಡ್‌ಗಳಲ್ಲಿ ಒಂದೇ ಪಕ್ಷದ ಹುರಿಯಾಳು ಆಗಿರುವುದು ವಿಶೇಷ. ನಗರಸಭೆ ಸದಸ್ಯರಾಗಿದ್ದ ವಿಜಯಾ ಲಿಂಗರಾಜ್‌ 42ನೇ ವಾರ್ಡ್‌ನ ಸಿದ್ದವೀರಪ್ಪ ಬಡಾವಣೆ ವಾರ್ಡ್‌ನ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅಖಾಡಕ್ಕಿಳಿದರು. ವಿಜಯಾ ಲಿಂಗರಾಜ್‌ ಪತಿ ಲಿಂಗರಾಜ್‌ ಅವರ ಹಿರಿಯ ಸಹೋದರ , ನಗರಪಾಲಿಕೆ ಮಾಜಿ ಸದಸ್ಯಕೆ.ಜಿ. ಶಿವಕುಮಾರ್‌ 25 ನೇ ವಾರ್ಡ್‌ನ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ನಗರಸಭೆ ಮಾಜಿ ಸದಸ್ಯ ಎಸ್‌. ಮಲ್ಲಿಕಾರ್ಜುನ್‌ 6ನೇ ವಾರ್ಡ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಎಲ್‌.ಎಚ್‌. ಸಾಗರ್‌ 45ನೇ ವಾರ್ಡ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಪುತ್ರ ಎ.ವೈ. ರಾಕೇಶ್‌ ಜಾಧವ್‌ 10ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಕೆಟಿಜೆ ನಗರ-02 ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ದಾವಣಗೆರೆ ಉತ್ತರ ಬ್ಲಾಕ್‌ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಎ.ಎಸ್‌. ಮುತ್ತಣ್ಣ ನಾಮಪತ್ರ ಸಲ್ಲಿಸಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಧ್ಯಕ್ಷ ಜೆ. ಅಮಾನುಲ್ಲಾಖಾನ್‌ 4ನೇ ವಾರ್ಡ್‌ನಿಂದ ನಾಮಪತ್ರ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next