Advertisement

ದೃಶ್ಯಕಲಾ ವಿದ್ಯಾರ್ಥಿಗಳಿಗಿವೆ ಸಾಕಷ್ಟು ಅವಕಾಶ

02:47 PM May 20, 2019 | Naveen |

ದಾವಣಗೆರೆ: ಇಂದಿನ ತಂತ್ರಜ್ಞಾನದ ಯುಗದಲ್ಲಿ ದೃಶ್ಯಕಲಾ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ದಾವಣಗೆರೆ ವಿವಿಯ ಕುಲಸಚಿವ ಪ್ರೊ| ಬಸವರಾಜ್‌ ಬಣಕಾರ್‌ ಹೇಳಿದರು.

Advertisement

ವಿದ್ಯಾನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಭಾನುವಾರ ಚಿತ್ರೋತ್ಸವ-2019ರ 3ನೇ ದಿನದ ಕಲಾಮೇಳಕ್ಕೆ ಹೂವಿನ ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಇತರೆ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿ ಚಿತ್ರ ಬಿಡಿಸುವ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಕ್ರಿಯಾಶೀಲತೆ, ಶ್ರದ್ಧೆ ವೃದ್ಧಿಯಾಗಿರುತ್ತದೆ. ತಮ್ಮ ಪ್ರತಿಭೆ ಮೂಲಕ ಅದ್ಭುತ ಚಿತ್ರಗಳನ್ನು ಅನಾವರಣಗೊಳಿಸುವ ಶಕ್ತಿ ಅವರಿಗಿದೆ. ಚಿತ್ರಕಲೆಗೆ ಇಂದಿನ ಡಿಜಿಟಲ್ ತಂತ್ರಜ್ಞಾನದ ಆಧುನಿಕ ಯುಗದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಅಂತಹ ಅವಕಾಶಗಳನ್ನು ಗುರ್ತಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ 90ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು ಇಂಜಿನಿಯರ್‌, ಡಾಕ್ಟರ್‌ಗಳಾಗಲು ಬಯಸುವುದೇ ಹೆಚ್ಚು. ಆದರೆ, ಕಡಿಮೆ ಅಂಕ ಪಡೆದರೂ ಕೂಡ ತಮ್ಮೊಳಗಿನ ಭಾವನಾತ್ಮಕ ಕಲೆಯನ್ನು ಅನಾವರಣಗೊಳಿಸಲು ಉತ್ತಮ ಕಲಾವಿದರಾಗಬೇಕೆಂಬ ಮನಸ್ಸುಳ್ಳವರು ಮಾತ್ರ ದೃಶ್ಯಕಲೆ ಆಯ್ಕೆ ಮಾಡಿಕೊಳ್ಳುತ್ತಾರೆ. ಕಲಾವಿದ ಬಿಡಿಸುವ ಒಂದು ಚಿತ್ರ ನೂರು ಸಂದೇಶಗಳನ್ನು ತಿಳಿಸುವ ಶಕ್ತಿ ಹೊಂದಿರುತ್ತದೆ ಎಂದು ಹೇಳಿದರು.

ಮುಂಬೈಯ ಜೆ.ಜೆ ಥಾಮಸ್‌ ದೃಶ್ಯಕಲಾ ಕಾಲೇಜಿನ ವಿದ್ಯಾರ್ಥಿಗಳು ನೀಡಿದ ಸಲಹೆಯಿಂದ ಮುಂಬೈ ಮತ್ತಷ್ಟು ಅಭಿವೃದ್ಧಿ ಆಗಲು ಸಾಧ್ಯವಾಯಿತು. ಈಗಾಗಲೇ ದಾವಣಗೆರೆ ಸ್ಮಾರ್ಟ್‌ಸಿಟಿ ಆಗಿ ಹೊರಹೊಮ್ಮುತ್ತಿದೆ. ಇಲ್ಲಿನ ಅಭಿವೃದ್ಧಿ ಕೆಲಸಗಳು ಯಾವ ಮಾದರಿಯಲ್ಲಿ ಉತ್ತಮವಿರಬೇಕು, ಪ್ರಕೃತಿಪೂರಕ ಸ್ಮಾರ್ಟ್‌ಸಿಟಿ ಪರಿಕಲ್ಪನೆ ಎಂದರೆ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ನಿಮ್ಮದೇ ಆದ ಕೊಡುಗೆ ನೀಡಿ ಎಂದು ಸಲಹೆ ನೀಡಿದರು. ಇತಿಹಾಸದುದ್ದಕ್ಕೂ ಭಾರತೀಯ ವಾಸ್ತುಶಿಲ್ಪ ಕಲೆ ಶ್ರೀಮಂತವಾಗಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಸೇರಿದಂತೆ ಎಲ್ಲಾ ಧರ್ಮದ ಭಾವೈಕ್ಯತೆಯ ಪ್ರತೀಕತೆ ಸಾರುವ ಶಕ್ತಿ ಹೊಂದಿದೆ ಎಂದರಲ್ಲದೇ, ಚಿತ್ರಕಲಾ ವಿದ್ಯಾರ್ಥಿಗಳು ತಮ್ಮ ಡಿಗ್ರಿ ಮುಗಿಸಿದರೆ ಸಾಕು ಅವಕಾಶಗಳು ಸಿಗುತ್ತವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.

Advertisement

ದಾವಣಗೆರೆ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಡಾ| ಜೆ.ಕೆ. ರಾಜು ಮಾತನಾಡಿ, ಈ ಹಿಂದೆ ಕಾಲೇಜುಗಳಲ್ಲಿ ಸೌಲಭ್ಯಗಳ ಕೊರತೆ ಇತ್ತು, ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಿತ್ತು. ಇದೀಗ ಸೌಲಭ್ಯ ಹೆಚ್ಚಿದ್ದರೂ ಕೂಡ ಮೊಬೈಲ್, ಕಂಪ್ಯೂಟರ್‌ ಬಳಕೆ ಹೆಚ್ಚಾದಂತೆ ಕಲೆಯ ಬಗ್ಗೆ ಆಸಕ್ತಿ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಲಾವಿದರು ನಿಜಕ್ಕೂ ಭಾವುಕ ಜೀವಿಗಳು. ಅವರ ಯೋಚನಾ ಲಹರಿ, ಕ್ರಿಯಾಶೀಲ ಆಸಕ್ತಿ ವಿಭಿನ್ನವಾದ್ದರಿಂದ ಅವರನ್ನು ಅರ್ಥ ಮಾಡಿಕೊಳ್ಳಲು ಮತ್ತೂಬ್ಬ ಕಲಾವಿದನಿಗೆ ಮಾತ್ರ ಸಾಧ್ಯ. ಸಾಮಾನ್ಯರು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಕಾಲೇಜಿನ ಆವರಣದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿರುವ ಕೃತಿಗಳು ಅತ್ಯದ್ಭುತವಾಗಿವೆ. ನಿಮ್ಮ ಭಾವನೆ, ನಿಮ್ಮಲ್ಲಿರುವ ಕಲಾ ಪ್ರತಿಭೆಯನ್ನು ಸ್ವಲ್ಪ ಕಮರ್ಶಿಯಲ್ ಆಗಿ ಅಭಿವೃದ್ದಿಪಡಿಸಬೇಕು. ಆಗ ಕಾಲೇಜಿಗೂ, ದಾವಣಗೆರೆ ವಿಶ್ವವಿದ್ಯಾಲಯಕ್ಕೂ ಸಾಕಷ್ಟು ಕೀರ್ತಿ ಬರುತ್ತದೆ ಎಂದರು.

ಕಾಲೇಜು ಪ್ರಾಂಶುಪಾಲ ಡಾ| ರವೀಂದ್ರ ಡಾ| ಎಸ್‌. ಕಮ್ಮಾರ್‌ ಅಧ್ಯಕ್ಷತೆ ವಹಿಸಿದ್ದರು. ಮಹಾಲಿಂಗಪ್ಪ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next