ದಾವಣಗೆರೆ: ಲಾಕ್‌ಡೌನ್-4.0 ನಡುವೆಯೂ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಿರುವ ಎರಡನೇ ದಿನವಾದ ಬುಧವಾರ ಬಸ್ ಸಂಚಾರದಲ್ಲಿ ಚೇತರಿಕೆ ಕಂಡು ಬಂದಿತು. ಆದರೆ ಮಂಗಳವಾರದಂತೆಯೇ ಬುಧವಾರ 11 ನಗರ ಸಾರಿಗೆ ಬಸ್‌ಗಳಲ್ಲಿ ಬೆರಳೆಣಿಕೆಯಲ್ಲಿ ಜನರು ಸಂಚರಿಸಿದರು.
ರಾಜಧಾನಿ ಬೆಂಗಳೂರಿಗೆ 20 ಬಸ್ ಒಳಗೊಂಡಂತೆ ಒಟ್ಟಾರೆ 80 ಬಸ್‌ಗಳು ಹುಬ್ಬಳ್ಳಿ, ರಾಣೆಬೆನ್ನೂರು, ಚಿತ್ರದುರ್ಗ, ಶಿವಮೊಗ್ಗ, ಹರಪನಹಳ್ಳಿ, ಜಗಳೂರು, ಹರಿಹರಕ್ಕೆ ಸಂಚರಿಸಿದವು. ಮಂಗಳವಾರ ಮತ್ತು ಬುಧವಾರ 5 ಲಕ್ಷ ರೂ. ಸಂಗ್ರಹವಾಗಿದೆ. ಒಟ್ಟಾರೆ 1900
ಪ್ರಯಾಣಿಕರು ವಿವಿಧೆಡೆ ಸಂಚರಿಸಿದರು. ರಾತ್ರಿ 7ರ ತನಕ ಮಾತ್ರ ಬಸ್ ಸಂಚಾರಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಮಧ್ಯಾಹ್ನ 1ರ ತನಕ ಮಾತ್ರ ಬಸ್‌ಗಳ ಕಾರ್ಯಾಚರಣೆ ಇತ್ತು. ಇತರೆ ಭಾಗಗಳಿಗೆ ಸಂಜೆ 5 ರವರೆಗೆ ಸಮಯ ವಿಸ್ತರಣೆ ಮಾಡಲಾಗಿತ್ತು.
ಉತ್ತರ ಕರ್ನಾಟಕದ ಭಾಗಗಳಿಗೆ ಬಸ್ ಸಂಚಾರ ಪ್ರಾರಂಭಿಸುವ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ರಾಯಚೂರಿಗೆ ಒಬ್ಬರು, ಮಂಗಳೂರಿಗೆ 6 ಜನರು ಮುಂಗಡ ಟಿಕೆಟ್ ತೆಗೆದುಕೊಂಡಿದ್ದಾರೆ. ಕನಿಷ್ಟ 20 ಜನರು ಇದ್ದಲ್ಲಿ ಬಸ್ ಓಡಿಸಬಹುದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಲ್ಲಿ ಬಸ್ ಸಂಚಾರ ಪ್ರಾರಂಭಿಸಲಾಗುವುದು ಎಂದು ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಎನ್. ಹೆಬ್ಟಾಳ್ ತಿಳಿಸಿದರು.