Advertisement

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

09:41 PM Nov 25, 2024 | Team Udayavani |

ದಾವಣಗೆರೆ: ಅಪಾರ ಅಭಿಮಾನಿಗಳ ಹೊಂದಿ, ಸಾವಿರಾರು ಟಗರು ಪ್ರೇಮಿಗಳ ಪ್ರೀತಿಗೆ ಪಾತ್ರವಾಗಿದ್ದ ಸೋಲಿಲ್ಲದ ಸರದಾರ ಖ್ಯಾತಿಯ ‘ಬೆಳ್ಳೂಡಿ ಕಾಳಿ’  ಟಗರು ಸೋಮವಾರ ಅನಾರೋಗ್ಯದಿಂದ ಅಕಾಲಿಕ ನಿಧನ ಹೊಂದಿದೆ.

Advertisement

ಟಗರು ಕಾಳಗದಲ್ಲಿ ಸೋತ ಇತಿಹಾಸವೇ ಇಲ್ಲದ ‘ಬೆಳ್ಳೂಡಿ ಕಾಳಿ’ಯನ್ನು ಕಂಡರೆ ಟಗರು ಪ್ರೇಮಿಗಳಿಗೆ ಅಪಾರ ಪ್ರೀತಿ. ಕಣದಲ್ಲಿ ಬೆಳ್ಳೂಡಿ ಕಾಳಿಯ ಆಟ ಕಣ್ತುಂಬಿಕೊಳ್ಳಲು ಗುಂಪು ಗುಂಪಾಗಿ ಅಭಿಮಾನಿಗಳು ಜಮಾಯಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಬೆಳ್ಳೂಡಿ ಕಾಳಿಯದ್ದೇ ಹವಾ ಇತ್ತು. ಬೆಳ್ಳೂಡಿ ಕಾಳಿ ಗತ್ತು ಗಾಂಭೀರ್ಯದಿಂದಲೇ ಕಣಕ್ಕೆ ಪ್ರವೇಶಿಸುತ್ತಿತ್ತು. ಕಣದಲ್ಲಿದ್ದ ಎದುರಾಳಿ ಟಗರು ಹೊಡೆದುರುಳಿಸಿ ಬಹುಮಾನಗಳ ತನ್ನದಾಗಿಸಿಕೊಳ್ಳುತ್ತಿತ್ತು. ಬೆಳ್ಳೂಡಿ ಕಾಳಿಯ ಸಾವು ಸಾವಿರಾರು ಅಭಿಮಾನಿಗಳಿಗೆ ನೋವುಂಟು ಮಾಡಿದೆ.

ರಕ್ತ ಪರೀಕ್ಷೆ ವರದಿ ಬರುವ ಮೊದಲೇ ಮೃತ್ಯು: 
ಒಂದು ವಾರದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಬೆಳ್ಳೂಡಿ ಕಾಳಿಗೆ ದಾವಣಗೆರೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಸೋಮವಾರ ಕಾಳಿಯ ರಕ್ತ ಪರೀಕ್ಷೆಯ ವರದಿ ಬರಬೇಕಾಗಿತ್ತು. ಆದರೆ, ವರದಿ ಬರುವುದರೊಳಗೇ ಮೃತಪಟ್ಟಿದೆ. ಬೆಳ್ಳೂಡಿ ಕಾಳಿ 25-30 ಕಾಳಗಗಳಲ್ಲಿ ಭಾಗವಹಿಸಿದ್ದು ಸೋತ ಇತಿಹಾಸವೇ ಇಲ್ಲ. ಬೆಳ್ಳೂಡಿ ಕಾಳಿಯನ್ನು ತಮ್ಮ ಜಮೀನಿನಲ್ಲಿಯೇ ಮಣ್ಣು ಮಾಡುವುದಾಗಿ ಟಗರಿನ ಮಾಲೀಕ ರಾಘವೇಂದ್ರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next