Advertisement

ಕೋವಿಡ್-19 ಲಾಕ್ ಡೌನ್: ದಾವಣಗೆರೆಯಲ್ಲಿ ಬಹುತೇಕ ದಿಗ್ಭಂದನ

05:26 PM Mar 27, 2020 | keerthan |

ದಾವಣಗೆರೆ: ಕೋವಿಡ್-19 ವೈರಸ್ ತಡೆಯುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಲಾಕ್ ಡೌನ್ ಬೆಂಬಲವಾಗಿ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯ ಹಳೆಯ ಭಾಗದ ಬಹುತೇಕ ಮುಖ್ಯ ರಸ್ತೆ, ಓಣಿಗಳ ಜನರು ಸ್ವಯಂ ದಿಗ್ಭಂದನಕ್ಕೆ ಒಳಗಾಗಿದ್ದಾರೆ. ಬಂಬೂ ಬಜಾರ್, ಬೇತೂರು ರಸ್ತೆ, ಆಜಾದ್ ನಗರ ಒಳಗೊಂಡಂತೆ ಬಹುತೇಕ ಕಡೆ ರಸ್ತೆ ಬಂದ್ ಮಾಡಲಾಗಿದೆ.

Advertisement

ಕೋವಿಡ್-19 ವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಲಾಕ್ ಡೌನ್ ಮಾಡಿದೆ. ಜನರು ಯಾವುದೇ ಕಾರಣಕ್ಕೂ ಹೊರಗೆ ಓಡಾಡುವಂತಿಲ್ಲ ಎಂದು ಹೇಳುತ್ತಿದೆ. ಆದರೂ, ಜನರು ಸುಖಾಸುಮ್ಮನೆ ಓಡಾಡುತ್ತಲೇ ಇದ್ದಾರೆ. ಯಾರಿಗೆ ಗೊತ್ತು ಯಾರಿಗೆ ಏನಿದಿಯೋ. ಹಾಗಾಗಿ ನಾವೇ ಓಣಿ ಜನರು ಸೇರಿಕೊಂಡು ರಸ್ತೆ ಬಂದ್ ಮಾಡಿದ್ದೇವೆ. ತೀರಾ ಅರ್ಜೆಂಟ್ ಇದ್ದರೆ ಮಾತ್ರ ಓಡಾಡುವುದಕ್ಕೆ ಜಾಗ ಬಿಟ್ಟುಕೊಂಡಿದ್ದೇವೆ. ಯಾರಿಗೆ ಏನೇ ಬೇಕಾದರೂ ಒಬ್ಬರು ಹೊರಗೆ ಹೋಗಿ ತಂದು ಕೊಡುತ್ತೇವೆ. ನಮ್ ಮೊಬೈಲ್ ನಂಬರ್ ಕೊಟ್ಟಿದ್ದೇವೆ. ಬೇಕಾದವರು ಕಾಲ್ ಮಾಡ್ತಾರೆ.‌ ಅವರಿಗೆ ಬೇಕಾದನ್ನು ತಂದು ಕೊಡಲಾಗುವುದು ಎನ್ನುತ್ತಾರೆ ಮಟ್ಟಿಕಲ್ ಸಮೀಪದ ಓಣಿಯ ಯುವಕರು.

ಕೋವಿಡ್-19 ವೈರಸ್ ಯಾರಿಗೂ ಹರಡಬಾರದು. ನಮಗೆ ತೊಂದರೆ ಆಗಬಾರದು. ನಮ್ಮಿಂದ ಬೇರೆಯವರಿಗೆ ಸಹ ತೊಂದರೆ ಆಗಬಾರದು. ಆ ಕಾರಣಕ್ಕೆ ಈ ವ್ಯವಸ್ಥೆ ಮಾಡಿಕೊಂಡಿದ್ದೇವೆ. ನಮ್ಮ ಓಣಿ ಜನ ಬೇರೆ ಕಡೆ ಹೋಗೊಲ್ಲ. ನಮ್ ಓಣಿಗೆ ಬೇರೆ ಕಡೆಯವರು ಬರುವಂತಿಲ್ಲ. ಯಾರೂ ಬಂದರೂ ಈ ಗೇಟ್ ಆ ಕಡೆ ನಿಂತು ಮಾತಾಡಿಕೊಂಡು, ನೋಡಿಕೊಂಡು ಹೋಗಬೇಕು ಅಷ್ಟೇ ಎಂದು ಹೇಳುತ್ತಾರೆ.

ಇಲ್ಲಿ ಸಣ್ಣ ಮಕ್ಕಳು ಇವೆ. ವಯಸ್ಸಾದವರು ಇದಾರೆ. ಏನಾದರೂ ಆದರೆ ಏನು ಗತಿ ಎಂದು ನಾವೇ ರೋಡ್ ಬಂದ್ ಮಾಡುವುದಕ್ಕೆ ಹೇಳಿದ್ದೀವಿ. ನಾವು ಬೇರೆ ಕಡೆ ಹೋಗುವುದಿಲ್ಲ. ನಮ್ಮ ಕಡೆ ಬೇರೆಯವರಿಗೆ ಅವಕಾಶ ಇಲ್ಲ‌ ಎಂದು ಇಲ್ಲಿನ ಜಯಲಕ್ಷ್ಮಿ ಹೇಳಿದರು.

ಬೇತೂರು ರಸ್ತೆಯ ಮುದ್ದಾಭೋವಿ ಕಾಲೋನಿಯ ಪ್ರಮುಖ ರಸ್ತೆಯನ್ನು ಬಂದ್ ಮಾಡಲಾಗಿದೆ. ಹಳೆಯ ದಾವಣಗೆರೆಯ ಬಹುತೇಕ ಕಡೆ ಈ ರೀತಿಯ ವಾತಾವರಣ ಸಾಮಾನ್ಯ ಎನ್ನುವಂತಾಗಿದೆ.

Advertisement

ರಸ್ತೆ ಬಂದ್ ಎನ್ನುವುದು ಸಾಮೂಹಿಕ ಸನ್ನಿಯಂತೆ ಕಂಡರೂ ಜನ ಸಾಮಾನ್ಯರು ಕೋವಿಡ್-19 ವೈರಸ್ ಎಂಬ ಮಹಾಮಾರಿಯ ಅಬ್ಬರಕ್ಕೆ ಅಕ್ಷರಶಃ ಬೆದರಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಲಾಕ್ ಡೌನ್ ಬಗ್ಗೆ ಕೆಲವರು ಆಕ್ಷೇಪ ಮಾಡಿದರೂ ಒಟ್ಟಾರೆಯಾಗಿ ಜಾಗೃತಿ ಮೂಡುತ್ತಿದೆ. ಸರ್ಕಾರದ ಪ್ರಯತ್ನಕ್ಕೆ ತಮ್ಮದೇ ಆದ ರೀತಿಯಲ್ಲಿ ಕೈ ಜೋಡಿಸುವ ಕೆಲಸ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next