ದಾವಣಗೆರೆ: ಜಿಲ್ಲೆಯ ಜೀವನಾಡಿ ಯಾಗಿರುವ ಭದ್ರಾ ನಾಲೆಯಲ್ಲಿ ನೀರು ನಿಲುಗಡೆ ಮಾಡಿರುವುದನ್ನು ವಿರೋಧಿಸಿ ಸೋಮವಾರ ಭಾರತೀಯ ರೈತ ಒಕ್ಕೂಟ ಕರೆ ನೀಡಿದ್ದ ದಾವಣಗೆರೆ ಬಂದ್ ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.
ಬೆಳಗ್ಗೆ 7 ರಿಂದ ಗಂಟೆಯಿಂದ ಸಂಜೆ 4 ರವರೆಗೆ ಕರೆ ನೀಡಲಾಗಿದ್ದ ದಾವಣಗೆರೆ ಬಂದ್ ಗೆ ಜಿಲ್ಲಾ ಬಿಜೆಪಿ, ಆಮ್ ಆದ್ಮಿ ಪಾರ್ಟಿ, ಕರ್ನಾಟಕ ರಕ್ಷಣಾ ವೇದಿಕೆ ( ನಾರಾಯಣಗೌಡ ಬಣ), ಕರ್ನಾಟಕ ಏಕತಾ ವೇದಿಕೆ ಒಳಗೊಂಡಂತೆ ವಿವಿಧ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೈತಿಕ ಬೆಂಬಲ ಸೂಚಿಸಿದೆ.
ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿ, ಏಕಾಏಕಿ ನಾಲೆಯಲ್ಲಿ ನೀರು ಹರಿಸುವುದ ನ್ನು ನಿಲ್ಲಿಸಿರುವ ಕಾಡಾ ಸಮಿತಿ, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತೀವ್ರ ಬರಗಾಲದ ಮಧ್ಯೆ ಸರ್ಕಾರ ರೈತಾಪಿ ವರ್ಗದ ಜೀವದೊಂದಿಗೆ ಅಕ್ಷರಶಃ ಚೆಲ್ಲಾಟವಾಡುತ್ತಿದೆ ಎಂದು ದೂರಿದರು. ಕೂಡಲೇ ನಾಲೆಯಲ್ಲಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಬಂದ್ ಹಿನ್ನೆಲೆಯಲ್ಲಿ ಪ್ರವಾಸಿ ಮಂದಿರ ರಸ್ತೆ, ಅಶೋಕ ರಸ್ತೆ, ಹದಡಿ ರಸ್ತೆ, ಹಳೆ ಪಿಬಿ ರಸ್ತೆ ಮುಂತಾದೆಡೆಯ ಅಂಗಡಿ, ಹೋಟೆಲ್, ವಾಣಿಜ್ಯ ಮಳಿಗೆಗಳು ಮುಚ್ಚಿದ್ದವು. ಖಾಸಗಿ ಬಸ್, ಆಟೋ ರಿಕ್ಷಾ, ನಗರ ಸಾರಿಗೆ ಬಸ್ ಸಂಚಾರ ವಿರಳ ವಾಗಿತ್ತು. ಕೆಲವು ಶಾಲಾ ಕಾಲೇಜು ಬಂದ್ ಆಗಿದ್ದರೆ. ಇತರೆಡೆ ಎಂದಿನಂತೆ ನಡೆದವು.
ಬಂದ್ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ. ಸ್ವತಃ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಬಂದೋ ಬಸ್ತ್ ಪರಿಶೀಲನೆ ನಡೆಸಿದರು. ಶಾಂತಿಯುತ ವಾಗಿ ಬಂದ್ ನಡೆಯುತ್ತಿದೆ.
ಇದನ್ನೂ ಓದಿ: Challenge: ವಯನಾಡ್ ಬದಲು ಹೈದರಾಬಾದ್ ನಿಂದ ಸ್ಪರ್ಧಿಸಿ… ರಾಹುಲ್ ಗೆ ಸವಾಲು ಹಾಕಿದ ಓವೈಸಿ