ದಾವಣಗೆರೆ: ತಾವು ಯಾವುದೇ ಅತೃಪ್ತರ ಗುಂಪಿನಲ್ಲಿ ಇಲ್ಲ. ಮಾಧ್ಯಮಗಳಲ್ಲಿ ವರದಿ ಆಗಿರುವಂತೆ ಗುರುವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಮುಂದೆಯೂ ಆ ರೀತಿಯ ಯಾವುದೇ ಸಭೆಯಲ್ಲಿ ಭಾಗವಹಿಸುವುದೂ ಇಲ್ಲ ಎಂದು ಮಾಯಕೊಂಡ ಶಾಸಕ ಪ್ರೊ. ಎನ್. ಲಿಂಗಣ್ಣ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆವರು ನನಗೆ ತಂದೆ ಸಮಾನರು. ರಾಜಕೀಯ ಗುರುಗಳು. ಅವರ ಮತ್ತು ಪಕ್ಷದ ವಿರುದ್ಧವಾಗಿ ಮಾತನಾಡುವುದೇ ಇಲ್ಲ. ಕ್ಷೇತ್ರದ ಜನರು ನನ್ನನ್ನು ಬಿಜೆಪಿ ಅಭ್ಯರ್ಥಿಯಾಗಿ ಗೆಲ್ಲಿಸಿದ್ದಾರೆ. ನಾನು ಎಂದೆಂದಿಗೂ ಕೆಟ್ಟ ರಾಜಕಾರಣ ಮಾಡುವುದಿಲ್ಲ. ರಾಜಕೀಯ ಮಾಡಿಯೇ ಜೀವನ ನಡೆಸಬೇಕು ಎಂಬ ಅನಿವಾರ್ಯತೆಯೂ ನನಗೆ ಇಲ್ಲ ಎಂದರು.
ಇದನ್ನೂ ಓದಿ : ಯುವ ಸಮ್ಮೇಳನದಲ್ಲಿ ಐದು ನಿರ್ಣಯ ಮಂಡನೆ
ದಾವಣಗೆರೆ ಜಿಲ್ಲೆಯವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದಕ್ಕೆ ನನ್ನ ಸಹಮತ ಇದೆ. ಆದರೆ, ಆ ಎಲ್ಲವೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಟ್ಟಂತಹ ವಿಚಾರ. ಬಹಳಷ್ಟು ರಾಜಕೀಯ ನೈಪುಣ್ಯತೆ ಹೊಂದಿರುವ ಯಡಿಯೂರಪ್ಪ ಆವರಿಗೆ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಹಾಗಾಗಿ ನಾನು ಯಾವುದೇ ಕಾರಣ, ಎಂತಹ ಸಂದರ್ಭದಲ್ಲೇ ಆಗಲಿ ಅವರ ವಿರುದ್ಧ ಮಾತನಾಡುವುದೇ ಇಲ್ಲ ಎಂದು ತಿಳಿಸಿದರು.
ನನಗಿಂತಲೂ ಹಿರಿಯರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ ಇರುವಾಗ ನಾನು ಮಂತ್ರಿ ಸ್ಥಾನ ಕೇಳಲಿಕ್ಕೆ ಆಗುತ್ತದೆಯೇ ನನಗೆ ನಿಗಮದ ಆಧ್ಯಕ್ಷನನ್ನಾಗಿ ಮಾಡಿ, ಸಂಪುಟ ಸಚಿವ ಮಟ್ಟದ ಸ್ಥಾನಮಾನ ನೀಡಲಾಗಿದೆ. ಅದನ್ನೇ ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತೇನೆ. ಮುಂದೆ ನನಗೆ ಎಂಎಲ್‌ಎ ಟಿಕೆಟ್ ನೀಡದಿದ್ದರೂ ಪರವಾಗಿಲ್ಲ. ಯಡಿಯೂರಪ್ಪ ವಿರುದ್ಧ ಮಾತನಾಡುವುದೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಆಶ್ರಯ ಸಮಿತಿ ಸದಸ್ಯ ಸುರೇಂದ್ರಪ್ಪ, ದಿಶಾ ಸಮಿತಿಯ ಚಂದ್ರೇಗೌಡ, ನಾಗರಾಜ್, ದಾದಾಪೀರ್, ಬಾವಿಹಾಳ್ ಅಜ್ಜಯ್ಯ ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ : ಮಿತಿ-ಸಾಮರ್ಥ್ಯ ಮೀರಿ ಗಣಿಗಾರಿಕೆ ನಡೆಸಿದರೆ ಕಠಿಣ ಕ್ರಮ: ಸುನೀಲಕುಮಾರ