ದಾವಣಗೆರೆ: ರಾಷ್ಟ್ರ ನಿರ್ಮಾಣವೆಂದರೆ ಗಗನಚುಂಬಿ ಕಟ್ಟಡಗಳ ನಿರ್ಮಾಣವಲ್ಲ. ನಿಜವಾದ ಅರ್ಥದಲ್ಲಿ ರಾಷ್ಟ್ರ ನಿರ್ಮಾಣವೆಂದರೆ ಮೌಲ್ಯಪೂರ್ಣ ಪ್ರಜೆಗಳ ನಿರ್ಮಾಣ. ಮೌಲ್ಯಪೂರ್ಣ ಪ್ರಜೆಗಳ ನಿರ್ಮಾಣದಿಂದ ಮಾತ್ರ ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ| ಬಿ.ಇ. ರಂಗಸ್ವಾಮಿ ಹೇಳಿದರು.
ದಾವಣಗೆರೆಯ ವಿಶ್ವವಿದ್ಯಾಲಯದ ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜಿನ ಯಾಂತ್ರಿಕ ವಿಭಾಗದ ಆಶ್ರಯದಲ್ಲಿ ಜರುಗಿದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಉತ್ತಮ ರಾಷ್ಟ್ರ ನಿರ್ಮಾಣ ಮಾಡಬೇಕಾದಲ್ಲಿ ಮೊದಲು ಮೌಲ್ಯಪೂರ್ಣ ಪ್ರಜೆಗಳನ್ನುನಿರ್ಮಿಸಬೇಕು.ಉತ್ತಮಪ್ರಜೆಗಳ ನಿರ್ಮಾಣ ಕಾರ್ಯದಲ್ಲಿ ಮಾತಾ ಪಿತೃಗಳು ಮೊದಲನೇ ಸ್ಥಾನದಲ್ಲಿದ್ದರೆ, ಶಿಕ್ಷಕರು ಎರಡನೇ ಸ್ಥಾನವನ್ನು ಪಡೆಯುತ್ತಾರೆ.
ಆದ್ದರಿಂದ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮವಾದ ಶಿಕ್ಷಕರಿದ್ದರೆ ಸುಸಂಸ್ಕೃತ ಪ್ರಜೆಗಳನ್ನು ಹೊಂದಿದ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಮಲ್ಲಿಕಾರ್ಜುನ ಎಸ್. ಹೊಳಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಹಿಂದೆ ಶಿಕ್ಷಕರ ಪಾತ್ರ ತುಂಬಾ ಮಹತ್ವದ್ದಾಗಿದೆ. ತಾಯಿ ಜೀವ ನೀಡಿದರೆ ಶಿಕ್ಷಕರು ಜೀವನವನ್ನೇ ನೀಡುತ್ತಾರೆ ಎಂದು ಅಭಿಪ್ರಾಯಪಟ್ಟರು.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿಯ ಸದಸ್ಯ ಡಾ| ಎಚ್. ಆರ್. ಪ್ರಭಾಕರ ಮಾತನಾಡಿ, ಅಪಾರ ಜ್ಞಾನವನ್ನು ಹೊಂದಿ ಸಕಲ ಸದ್ಗುಣಗಳನ್ನು ಮತ್ತು ಮಾನವಿಯ ಮೌಲ್ಯಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದರು.
ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ| ಎಸ್.ಬಿ. ಕಿವಡಿ ಮಾತನಾಡಿ, ಉತ್ತಮ ಶಿಕ್ಷಕರು, ಮತ್ತು ವಿದ್ಯಾರ್ಥಿಗಳ ಏಳಿಗೆಗೆ ಕಾರಣರಾಗುತ್ತಾರೆ ಎಂದರು. ಪ್ರಾಜೆಕ್ಟ್ ಮಾನಿಟರಿಂಗ್ ಕಮಿಟಿ ಸದಸ್ಯರಾದ ಡಾ| ಈರಪ್ಪ , ಡಾ| ಎಸ್. ಮಂಜಪ್ಪ ವೇದಿಕೆಯಲ್ಲಿದ್ದರು. ಜಿ.ಎ. ಕುಬೇರ ಪ್ರಾರ್ಥಿಸಿದರು, ಸಹಪ್ರಾಧ್ಯಾಪಕ ಡಾ| ವಿಜಯ್‌ಕುಮಾರ ಸ್ವಾಗತಿಸಿದರು.
ಸಹಪ್ರಾಧ್ಯಾಪಕರಾದ ಡಾ| ಆರ್.ಪಿ. ಸ್ವಾಮಿ ಮತ್ತು ಡಾ| ಪ್ರಸ ನ್ನ ಕುಮಾರ್ ಪ್ರಾಧ್ಯಾಪಕ ಡಾ| ಎಸ್.ಬಿ. ಪ್ರಕಾಶ್ ಅತಿಥಿಗಳನ್ನು ಪರಿಚಯಿಸಿದರು. ಕಾಲೇಜಿನ ಡೀನ್ ಹಾಗೂ ಕೈಗಾರಿಕಾ ಮತ್ತು ಉತ್ಪಾದನೆ ವಿಭಾಗದ ಅಧ್ಯಕ್ಷ ಡಾ| ನಾಗೇಶ ನಿರೂಪಿಸಿದರು. ವಿಚಾರ ಸಂಕಿರಣದ ಸಂಯೋಜಕ ಡಾ| ಶೇಖರಪ್ಪ ಬಿ. ಮಲ್ಲೂರ ವಂದಿಸಿದರು.