ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪದೆ ಪದೇ ಹೇಳುವಂತೆ ಟೇಕಾಫ್ ಆಗಲು ಸರ್ಕಾರ ಏನು ವಿಮಾನವೇ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಚೆನ್ನಾಗಿಯೇ ನಡೆಯುತ್ತಿದೆ. ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಪದೇ ಪದೇ ಸರ್ಕಾರ ಟೇಕಾಫ್ ಆಗಿಯೇ ಇಲ್ಲ ಎನ್ನುತ್ತಾರೆ. ಟೇಕಾಫ್ ಆಗಲು ಸರ್ಕಾರ ಏನು ವಿಮಾನವೇ ಎಂದರು.
ಮತ್ತೆ ಸಿಎಂ ಆಗೋದು ಹಗಲುಗನಸು: ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವ ಹಗಲುಗನಸು ಕಾಣುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಕನಸು ಕಂಡಿದ್ದರು. ಆದರೆ ದೇವೇಗೌಡರ ಮುಂದೆ ಮಂಡಿಯೂರಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಕಾಂಗ್ರೆಸ್-ಜೆಡಿಎಸ್‌ನ 17 ಶಾಸಕರು ಬಂಡಾಯವೆದ್ದಾಗಲೂ ಮುಖ್ಯಮಂತ್ರಿ ಕನಸು ಕಂಡಿದ್ದರು.
17 ಶಾಸಕರು ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂದು ಬಿಜೆಪಿ ಸೇರಿದಾಗ ಸಿದ್ದರಾಮಯ್ಯ ಅವರಿಗೆ ಭ್ರಮನಿರಸನವಾಯಿತು. ಈಗ ಮತ್ತೆ ಮುಖ್ಯಮಂತ್ರಿ ಆಗುವ ಹಗಲುಗನಸು ಕಾಣುತ್ತಿದ್ದಾರೆ. 2024ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಶತಃಸಿದ್ಧ ಎಂದು ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.
ಬಿ.ಎಸ್. ಯಡಿಯೂರಪ್ಪ ಅವರು ಎರಡು ವರ್ಷ ಉತ್ತಮ ಆಡಳಿತ ನೀಡಿದ ನಂತರ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದು, ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಯಾಗಿದ್ದಾರೆ. ಬಿಜೆಪಿಯಲ್ಲಿ ಹೈಕಮಾಂಡ್ ಹೇಳಿದವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ತಿಳಿಸಿದರು. ಆನಂದ್ ಸಿಂಗ್ ಉತ್ತಮ ಖಾತೆಗಾಗಿ ನಡೆಸುತ್ತಿರುವ ಪ್ರಯತ್ನದ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ, ಸಚಿವ ಸಿಂಗ್ ಅವರೊಡನೆ ನಾನು, ರಾಜೂ ಗೌಡ, ಮುನೇನಕೊಪ್ಪ ಮಾತನಾಡಿದ್ದೇವೆ.
ಎಲ್ಲವೂ ಸರಿ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡುವ ಕುರಿತಂತೆ ವೈಯಕ್ತಿಕ ಹೇಳಿಕೆ ನೀಡಲು ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ. ಪಕ್ಷದ ಹಿರಿಯರು, ಮುಖಂಡರು, ವರಿಷ್ಠರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಚಿವ ಸ್ಥಾನ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಶಾಸಕನಾಗಿ ಕ್ಷೇತ್ರದ ಜನರ ಕೆಲಸ ಮಾಡಲು ಫೀಲ್ಡ್‌ಗೆ ಇಳಿದಿದ್ದೇನೆ. ನಾನು ನಿರಾಶಾವಾದಿಯಂತೂ ಅಲ್ಲ ಎಂದರು.