Advertisement
ದಾವಣಗೆರೆ: ರಾಜ್ಯ ಕಂಡಂತಹ ಖಡಕ್ ಮುಖ್ಯಮಂತ್ರಿ ಜೆ.ಎಚ್. ಪಟೇಲ್‌ರವರ ದಿಟ್ಟ ನಿರ್ಧಾರದ ಫಲವಾಗಿ 1997ರ ಆ. 15 ರಂದು ಅಸ್ತಿತ್ವಕ್ಕೆ ಬಂದಿರುವ ದಾವಣಗೆರೆ ಜಿಲ್ಲೆಗೆ ಈಗ 24ರ ಸಂಭ್ರಮ. ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಪ್ರಮುಖ ವ್ಯಾಪಾರಿ, ಶಿಕ್ಷಣ ಕೇಂದ್ರವಾಗಿದ್ದ ದಾವಣಗೆರೆಯನ್ನು ಜಿಲ್ಲೆ ಮಾಡಬೇಕು ಎಂಬ ಪ್ರಬಲ ಕೂಗಿಗೆ ಮಣಿದಿದ್ದ ಜೆ.ಎಚ್. ಪಟೇಲ್ ನೇತೃತ್ವದ ಸರ್ಕಾರ ದಾವಣಗೆರೆ, ಜಗಳೂರು, ಹೊನ್ನಾಳಿ, ಹರಿಹರ, ಚನ್ನಗಿರಿ, ಹರಿಹರ, ಹರಪನಹಳ್ಳಿ ತಾಲೂಕುಗಳನ್ನೊಳಗೊಂಡ ದಾವಣಗೆರೆ ಜಿಲ್ಲೆ ರಚನೆ ಮಾಡಿತು.
Related Articles
Advertisement
“ಮೆಕ್ಕೆಜೋಳ ಕಣಜ’ ಖ್ಯಾತಿಯ ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೆಜೋಳ ಸಂಸ್ಕರಣ ಘಟಕ ಪ್ರಾರಂಭವಾದಲ್ಲಿ ಬೆಳೆಗಾರರಿಗೆ ಅನುಕೂಲ ಆಗಲಿದೆ. ಸಂಸ್ಕರಣಾ ಘಟಕ ಪ್ರಾರಂಭಿಸಬೇಕು ಎಂಬ ದಶಕಗಳ ಕೂಗಿಗೆ ಈ ಕ್ಷಣಕ್ಕೂ ಸ್ಪಂದನೆ ದೊರೆತಿಲ್ಲ. ಸಂಸ್ಕರಣ ಘಟಕದ ಪ್ರಾರಂಭದತ್ತ ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ. ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್‌ಗೂ ಅಧಿಕ ಭದ್ರಾ ಅಚ್ಚುಕಟ್ಟಿದೆ.
ಕೊನೆಯ ಭಾಗಕ್ಕೂ ಸಮರ್ಪಕವಾಗಿ ನೀರು ಹರಿದ ಉದಾಹರಣೆ ಇಲ್ಲ. ಈಚೆಗೆ ಕಾಡಾ ಅಧ್ಯಕ್ಷರ ಪ್ರಯತ್ನದ ಫಲವಾಗಿ ಕೆಲವು ಭಾಗಕ್ಕೆ ನೀರು ದೊರೆಯುತ್ತಿದೆ. ಅಚ್ಚುಕಟ್ಟಿನ ತುತ್ತ ತುದಿಗೂ ನೀರು ತಲುಪುವಂತಾಗಬೇಕು. ಅಕ್ರಮ ಪಂಪ್‌ಸೆಟ್‌ಗೆ ಇತಿಶ್ರೀ ಹಾಡಬೇಕು ಎಂಬುದು ರೈತಾಪಿ ವರ್ಗದ ಒತ್ತಾಯ. ಜಿಲ್ಲೆಯಲ್ಲಿ ಕೆಲವಾರು ಏತ ನೀರಾವರಿ ಯೋಜನೆಗಳನ್ನು ರೂಪಿಸಲಾಗಿದೆ. ಮಹತ್ವಾಕಾಂಕ್ಷಿ ಯೋಜನೆಯಾಗಿರುವ 22 ಕೆರೆಗಳ ಏತ ನೀರಾವರಿ ಯೋಜನೆಯ ಮೂಲ ಉದ್ದೇಶವೇ ಈಡೇರಿಲ್ಲ.
ದಶಕ ಕಳೆದರೂ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿದಿಲ್ಲ. ಸಾಸ್ವೇಹಳ್ಳಿ, ದೀಟೂರು ಏತ ನೀರಾವರಿ ಯೋಜನೆಗಳಿಗೆ ಚುರುಕು ಮುಟ್ಟಿಸಬೇಕಿದೆ. ಹೊನ್ನಾಳಿ ತಾಲೂಕಿನ ಅರಕೆರೆ, ಹರಿಹರ ತಾಲೂಕಿನ ಭೈರನಪಾದ ಏತ ನೀರಾವರಿ ಯೋಜನೆ, ಜಗಳೂರು ತಾಲೂಕಿನ ಸಂತೇಮುದ್ದಾಪುರ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ ದೊರೆಯಬೇಕಿದೆ.
ಭದ್ರಾ ಮೇಲ್ದಂಡೆ ಯೋಜನೆಯಡಿ ಜಗಳೂರು ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕಿದೆ. ಜಿಲ್ಲೆಯ ಜನರ ಬೇಡಿಕೆ, ಒತ್ತಾಯಕ್ಕೆ ಜನಪ್ರತಿನಿಧಿಗಳು, ಆಡಳಿತ ವರ್ಗ ಸ್ಪಂದಿಸಿದಲ್ಲಿ ದಾವಣಗೆರೆ ಜಿಲ್ಲೆ ತನ್ನ 25ನೇ ವರ್ಷದಲ್ಲಿ ನಿಜವಾಗಿಯೂ ಅಭಿವೃದ್ಧಿಯಲ್ಲಿ ಕರ್ನಾಟಕದ ಕೇಂದ್ರ ಬಿಂದುವಾಗಲಿದೆ.