Advertisement

ಸಿದ್ಧರಾಮೇಶ್ವರರು ಮಹಾನ್‌ ಕಾಯಕ ಯೋಗಿ

06:29 PM Aug 10, 2021 | Team Udayavani |

ದಾವಣಗೆರೆ: ಭೋವಿ ಸಮಾಜದ ಕುಲಗುರು ಶ್ರೀ ಸಿದ್ಧರಾಮೇಶ್ವರರು ಮಹಾನ್‌ ಕಾಯಕ ಮತ್ತು ಶಿವಯೋಗಿ ಗಳಾಗಿದ್ದರು ಎಂದು ಚಿತ್ರದುರ್ಗದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಬಣ್ಣಿಸಿದರು. ಸೋಮವಾರ ನಗರದ ಮುದ್ದಾ ಭೋವಿ ಕಾಲೋನಿಯಲ್ಲಿ ನಡೆದ ಶ್ರೀ ಸಿದ್ಧರಾಮೇಶ್ವರರ 59ನೇ ರಥೋತ್ಸವ ಹಾಗೂ ಲಿಂಗೈಕ್ಯ ಸಿದ್ಧರಾಮೇಶ್ವರ ಸ್ವಾಮೀಜಿಯವರ 19ನೇ ಸಂಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಕೊರೊನಾ ಹಿನ್ನೆಲೆಯಲ್ಲಿ ಬಹಿರಂಗದ ಉತ್ಸವಗಳು ನಿಂತಿರಬಹುದು, ಆದರೆ ಅಂತರಂಗದ ಉತ್ಸಾಹ ನಿಲ್ಲಬಾರದು. ಶರಣರು ಕಾಯಕ ಜೀವಿಗಳು.

Advertisement

ಉತ್ಸಾಹದಿಂದ ಕಾಯಕೋತ್ಸವ ಮಾಡಿದವರು. ವಚನ ಸಂಸ್ಕೃತಿಯಿಂದ ಮೌಢಾಚರಣೆಯ ಮುಕ್ತ ಮೌಲ್ಯಚಾರಣೆ, ಯುಕ್ತ ಆಧ್ಯಾತ್ಮಿಕ, ಶೋಷಣೆ ಮುಕ್ತ ಧಾರ್ಮಿಕತೆ ದೊರೆಯಿತು ಎಂಬುದಕ್ಕೆ ಅತ್ಯದ್ಬುತ ಉದಾಹಣೆ ಕರ್ಮಯೋಗಿ ಶ್ರೀ ಸಿದ್ಧರಾಮೇಶ್ವರರ ಶಿವಯೋಗಿಗಳು ಎಂದರು. ಶ್ರೀ ಸಿದ್ಧರಾಮೇಶ್ವರರು ಕಾಯಕ ವರ್ಗದವರ ಆಸ್ಮಿತೆ. ಮೌಡ್ಯ ಸಂಪ್ರದಾಯಗಳಿಂದ ಮೌಲ್ಯ ಸಂಪ್ರದಾಯಗಳಿಗೆ ನಾಂದಿ ಹಾಡಿದವರು. ಜಲಕ್ರಾಂತಿ ಮೂಲಕ ಸಕಲ ಜೀವಾತ್ಮರಿಗೂ ಲೇಸು ಬಯಸಿದವರು. ಸ್ತ್ರೀ ಸಮಾನತೆಗೆ ಧ್ವನಿ ಎತ್ತಿದವರು.

ಮಹಿಳೆಯನ್ನು ದೈವ ಸ್ವರೂಪದಲ್ಲಿ ನೋಡಿದವರು ಎಂದು ಸ್ಮರಿಸಿದರು. ಶ್ರೀ ಸಿದ್ಧರಾಮೇಶ್ವರರು ವಚನ ಸಂರಕ್ಷಣೆಯಲ್ಲಿ ಅಗ್ರಜರು. ಅವರ ವಚನಗಳಲ್ಲಿ ಸಮಾಜ ವ್ಯವಸ್ಥೆಯ ಗೊಡ್ಡುತನ ಹುಸಿ ನಂಬಿಕೆ, ಆಚರಣೆಗಳನ್ನು, ಶತಮಾನಗಳ ಭಯ-ಭ್ರಮೆಗಳನ್ನು ಬಯಲು ಮಾಡಿವೆ. ಹೊಸದಕ್ಕೆ-ವಾಸ್ತವ ಬದುಕಿಗೆ ಬೆಲೆ ಕಟ್ಟಿಕೊಡುವುದರಿಂದ ವಚನಗಳು ಇಂದಿಗೂ ಪ್ರಸ್ತುತವಾಗುತ್ತವೆ ಎಂದು ತಿಳಿಸಿದರು. ಸಿದ್ಧರಾಮರು ವಿಡಂಬಿಸುವ ಜಾತಿ ವ್ಯವಸ್ಥೆ, ಕೈಲಾಸದ ಕಲ್ಪನೆ, ಧರ್ಮ ದೇವರುಗಳ ಹೆಸರಿನಲ್ಲಿ ನಡೆಯುವ ಅನೇಕ ಹೇಯಾಚರಣೆಗಳು ಇಂದಿಗೂ ನಡೆಯುತ್ತಲೇ ಇವೆ. ವಚನಗಳು ಹನ್ನೆರಡನೇ ಶತಮಾನದಲ್ಲಿ ರಚಿತವಾದರೂ ಕೂಡ ಇಂದಿನ ಸಮಾಜ ವ್ಯವಸ್ಥೆಯ ಬದುಕಿಗೂ ಪ್ರಸ್ತುತವಾಗಿವೆ.

ಅಂತೆಯೇ ಸಿದ್ಧರಾಮ ಇಂದಿಗೂ ಅನುಕರಣೆಗೆ ಯೋಗ್ಯರಾಗುತ್ತಾರೆ ಎಂದರು. ಚಿತ್ರದುರ್ಗ ಯಾದವ ಗುರುಪೀಠದ ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿ, ಶಿವಯೋಗಿ ಸಿದ್ಧರಾಮರನ್ನು ನೆನೆದರೆ ಮನ ಶುದ್ಧವಾಗುವುದು ಮತ್ತು ಎಲ್ಲವೂ ಸಿದ್ದಿಯಾಗುವುದು. ಮಹಾತ್ಮರಾದ ಸಿದ್ಧರಾಮೇಶ್ವರರನ್ನು ಸ್ಮರಿಸಿಕೊಂಡಾಗ ಬದುಕು ಸಾರ್ಥಕ ಎಂದು ಹೇಳಿದರು.

ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಶ್ರೀ ಸಿದ್ಧರಾಮೇಶ್ವರರು ಮಹಾನ್‌ ಶಿವಯೋಗಿ, ಕಾಯಕ ಯೋಗಿ , ಸಮಾಜಯೋಗಿಯಾಗಿದ್ದವರು. ಸಮಾಜದಲ್ಲಿನ ಜಾತಿಯತೆ, ಅಸಮಾನತೆ, ಮೌಡ್ಯತೆಗಳನ್ನು ಕಿತ್ತು ಹಾಕಿ ಸಮ ಸಮಾಜವನ್ನು ಕಟ್ಟಿದ ಮಹಾನ್‌ ಆದರ್ಶ ವ್ಯಕ್ತಿ ಸಿದ್ಧರಾಮೇಶ್ವರರು ಆಗಿದ್ದಾರೆ. ನಾವು ನಮಗಾಗಿ ಜೀವನ ಮಾಡದೆ ಮತ್ತೂಬ್ಬರಿಗಾಗಿ ಬದುಕಬೇಕು. ಅವರ ಕಷ್ಟಗಳನ್ನು ನಿವಾರಿಸಬೇಕು. ಆಗ ಬದುಕು ಸಾರ್ಥಕವೆಂದು ಸಾಧಿ ಸಿ ತೋರಿಸಿದ ಮಾನವತಾವಾದಿ ಸಿದ್ಧರಾಮೇಶ್ವರರು ಆಗಿದ್ದಾರೆ ಎಂದು ತಿಳಿಸಿದರು.

Advertisement

ಚಳ್ಳಕೆರೆಯ ಶ್ರೀ ಬಸವಕಿರಣ ಸ್ವಾಮೀಜಿ, ಭೋವಿ ಸಮಾಜದ ಮುಖಂಡರಾದ ಡಿ. ಬಸವರಾಜ್‌, ಆನಂದಪ್ಪ, ಎಚ್‌. ಜಯಣ್ಣ, ಆರ್‌. ಶ್ರೀನಿವಾಸ್‌, ಬ್ಯಾಂಕ್‌ ರಾಮಣ್ಣ, ಶ್ರೀನಿವಾಸ್‌, ಚಟ್ನಹಳ್ಳಿ ರಾಜಣ್ಣ, ವೆಂಕಟೇಶ್‌, ಚಂದ್ರಪ್ಪ, ಮೂರ್ತ್ಯಪ್ಪ, ಶಶಿಕುಮಾರ್‌, ನಾಗರಾಜು, ಕರಾಟೆ ತಿಮ್ಮೇಶ್‌, ಕ್ರಿಕೆಟ್‌ ತಿಮ್ಮೇಶ್‌, ಚಿಕ್ಕಮ್ಮಣ್ಣಿ ಬಡಾವಣೆ ಶ್ರೀನಿವಾಸ್‌, ಪೂಜಾರ ಹನುಮಂತಪ್ಪ, ಶ್ಯಾಮಸುಂದರ, ಶೇಖರಪ್ಪ, ಮಹೇಶ್‌, ರುದ್ರೇಶ್‌, ಮೌನೇಶ್‌ ಇತರರು ಇದ್ದರು. ಕೊರೊನಾ ಮಾರ್ಗಸೂಚಿಯಡಿ ಸಾಂಕೇತಿಕವಾಗಿ ರಥೋತ್ಸವ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next