ದಾವಣಗೆರೆ: ಕೋವಿಡ್-19 ಎರಡನೇ ಅಲೆ ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಕೂಡಲೇ ಜಾರಿಗೆ ಬರುವಂತೆ ಪ್ರತಿ ದಿನ ರಾತ್ರಿ 10 ಗಂಟೆಯಿಂದ ಆಗಸ್ಟ್ 16ರಂದು ಬೆಳಿಗ್ಗೆ 6 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರ 2021ರ ಜುಲೈ 7 ಹಾಗೂ 18 ರಂದು ಹೊರಡಿಸಿರುವ ಮಾರ್ಗಸೂಚಿಗಳನ್ವಯ ಆ. 16 ರವರೆಗೆ ಪ್ರತಿ ದಿನ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಅನುಮತಿಸಿದ ಚಟುವಟಿಕೆಗಳಿಗೆ ಮಾತ್ರ ಅವಕಾಶವಿರುತ್ತದೆ.
ಜುಲೈ 31ರ ಸರ್ಕಾರದ ಆದೇಶ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲ ಸಂಪರ್ಕ ಆದೇಶಗಳು ಹಾಗೂ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದಿಂದ ಬರುವ ವ್ಯಕ್ತಿಗಳ ವಿಶೇಷ ಕಣ್ಗಾವಲು ಕ್ರಮಗಳಿಗೆ ಸಂಬಂಧಿಸಿದಂತೆ ಆದೇಶಗಳು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ. ಸರ್ಕಾರದ ಮಾರ್ಗಸೂಚಿ ಅಥವಾ ನಿಬಂಧನೆಗಳನ್ನು ಯಾವುದೇ ವ್ಯಕ್ತಿ ಉಲ್ಲಂಘಿಸಿದ ಪಕ್ಷದಲ್ಲಿ ಅವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ದೇವರ ಸೇವೆಗೂ ನಿಷೇಧ: ಕೋವಿಡ್ -19 ಸಂಭಾವ್ಯ ಮೂರನೇ ಅಲೆಯನ್ನು ನಿರ್ವಹಿಸುವ ನಿಟ್ಟಿನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಆ. 31ವರೆಗೆ ಅಥವಾ ಮುಂದಿನ ಆದೇಶದವರೆಗೆ ಜಿಲ್ಲೆಯ ಎಲ್ಲ ಮುಂಜರಾಯಿ ದೇವಾಲಯಗಳು ಮತ್ತು ಖಾಸಗಿ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ. ಶನಿವಾರ ಮತ್ತು ಭಾನುವಾರಗಳಂದು ಭಕ್ತಾದಿಗಳ ದೇಗುಲ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಜಿಲ್ಲಾ ದಂಡಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.
ಮುಂಬರುವ ಹಬ್ಬದ ದಿನಗಳಲ್ಲಿ ಜಿಲ್ಲೆಯಲ್ಲಿ ಎಲ್ಲ ದೇವಾಲಯಗಳಲ್ಲಿ ಜನದಟ್ಟಣೆಯನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ. ದೇವಸ್ಥಾನಗಳಿಗೆ ತೆರಳುವವರು ಕಡ್ಡಾಯವಾಗಿ ಸಾಮಾಜಿಕ ಅಂತರ, ಅಗತ್ಯ ಕೋವಿಡ್ ನಿಯಂತ್ರಣ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.
ಭಕ್ತಾದಿಗಳಿಗೆ ದೇವಾಲಯದ ಪ್ರವೇಶ ಹಾಗೂ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಿಡಲಾಗಿದೆ. ಉತ್ಸವ, ಸೇವೆ, ಮಡಿ, ಪ್ರಸಾದ, ದಾಸೋಹ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಶನಿವಾರ ಮತ್ತು ಭಾನುವಾರಗಳಂದು ಅರ್ಚಕರುಗಳಿಂದ ಸಾಂಪ್ರದಾಯಿಕ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಿ ಭಕ್ತಾದಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಆದೇಶ ಆ. 31ವರೆಗೆ ಜಾರಿಯಲ್ಲಿರುತ್ತದೆ.