Advertisement
ದಾವಣಗೆರೆ: ರಾಜ್ಯಕ್ಕೆ ಹೊಸ ಸಿಎಂ ಘೋಷಣೆಯಾಗಿದ್ದು ಹೊಸ ಸಂಪುಟವೂ ರಚನೆಯಾಗಲಿದೆ. ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ ಬಿಜೆಪಿ ಶಾಸಕರಿಗೆ ನೂತನ ಸಂಪುಟದಲ್ಲಾದರೂ ಸಚಿವ ಪಟ್ಟ ಒಲಿಯಲಿದೆಯೇ ಎಂಬ ಕುತೂಹಲ ಗರಿಗೆದರಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಸಂಪುಟದಲ್ಲಿ ದಾವಣಗೆರೆ ಜಿಲ್ಲೆಯ ಐವರು ಶಾಸಕರಲ್ಲಿ ಒಬ್ಬರಿಗೆ ಮಂತ್ರಿಗಿರಿ ದೊರೆಯಲಿದೆ ಎಂಬ ನಿರೀಕ್ಷೆ ಜಿಲ್ಲಾ ಬಿಜೆಪಿಯಲ್ಲಿ ಮಾತ್ರವಲ್ಲ, ಸಾರ್ವಜನಿಕ ವಲಯದಲ್ಲೂ ಇದೆ.
Related Articles
Advertisement
ಯಾರ್ಯಾರು ಆಕಾಂಕ್ಷಿಗಳು
ಯಡಿಯೂರಪ್ಪ ಜು. 26 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನೂತನ ಮಂತ್ರಿ ಮಂಡಲ ಅಸ್ತಿತ್ವಕ್ಕೆ ಬರಲಿದೆ. ಹಾಗಾಗಿ ಮತ್ತೆ ಬಿಜೆಪಿ ಶಾಸಕರಲ್ಲಿ ಮಂತ್ರಿಗಿರಿ ಆಸೆ ಚಿಗುರೊಡದಿದೆ. ಬಿಜೆಪಿಯ ನೂತನ ಶಾಸಕಾಂಗ ಪಕ್ಷದ ಆಯ್ಕೆ ನಡೆಯದೇ ಇದ್ದರೂ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಯಾವುದೇ ಸಚಿವ ಸ್ಥಾನ ನೀಡಿದರೂ ನಿರ್ವಹಿಸುವುದಾಗಿ ಹೇಳುವ ಮೂಲಕ ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಜಗಳೂರು ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ, ವಾಲೀ¾ಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ ಅವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡಲೇಬೇಕು ಎಂದು ಜಿಲ್ಲಾ ವಾಲೀಕಿ ನಾಯಕ ಸಮಾಜ ಧ್ವನಿ ಎತ್ತಿದೆ. ಈ ಬಾರಿಯೂ ರಾಮಚಂದ್ರ ಅವರಿಗೆ ಸಚಿವ ಸ್ಥಾನ ಕೊಡದೇ ಇದ್ದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೋಡಿಕೊಳ್ಳುತ್ತೇವೆ ಎನ್ನುವ ಎಚ್ಚರಿಕೆಯ ಸಂದೇಶ ಸಹ ನೀಡಲಾಗಿದೆ.
ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ತಮಗೆ ಸಚಿವ ಸ್ಥಾನ ಬೇಕಾಗಿಯೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ರಾಜ್ಯ ರಾಜಕಾರಣದಲ್ಲಿನ ಬದಲಾವಣೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಮಾನಸ ಪುತ್ರ ರೇಣುಕಾಚಾರ್ಯ ಸಚಿವ ಸ್ಥಾನದತ್ತ ದಾಳ ಉರುಳಿಸಬಹುದು. ಯಡಿಯೂರಪ್ಪ ಅತ್ಯಾಪ್ತ ವಲಯ ದಲ್ಲಿ ಗುರುತಿಸಿಕೊಂಡಿರುವ ರೇಣುಕಾಚಾರ್ಯರಿಗೆ ಮಂತ್ರಿಗಿರಿ ಒಲಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.