ಹೊನ್ನಾಳಿ: ಕಳೆದ ಕೆಲ ದಿನಗಳಿಂದ ನ್ಯಾಮತಿ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆ ಅಪಾರ ನಷ್ಟವನ್ನುಂಟು ಮಾಡಿದೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನ್ಯಾಮತಿ ತಾಲೂಕಿನ ಕೊಡತಾಳು, ಮಾದಾಪುರ, ಹೊಸಜೋಗ, ಹಳೇಜೋಗ, ಸೂರಗೊಂಡನಕೊಪ್ಪ, ಚಿನ್ನಿಕಟ್ಟೆ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು, ಮಳೆಯಿಂದ ಹಾನಿಯಾದ ಬಗ್ಗೆ ಅ ಧಿಕಾರಿಗಳ ಬಳಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ಮಳೆಯಿಂದಾಗಿ 107 ಮನೆಗಳಿಗೆ ಹಾನಿಯಾಗಿದೆ.
ಕೆರೆ ಕಟ್ಟೆಗಳು ತುಂಬಿದ ಪರಿಣಾಮ ಕೆಲ ಕೆರೆಗಳಿಗೆ ಹಾನಿಯಾಗಿ ಕೆರೆಯ ನೀರು ರೈತರ ಜಮೀನಿಗೆ ನುಗ್ಗಿದ ಪರಿಣಾಮ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಮತ್ತೆ ಕೆಲವು ಬೆಳೆಗಳು ಜಲಾವೃತವಾಗಿವೆ ಎಂದರು. ಮೆಕ್ಕೆಜೋಳ ಬಿತ್ತಿದಾಗ ರೈತರ ಮಳೆ ಬಾರದೆ ಕಂಗಾಲಾಗಿ ಮೆಕ್ಕೆಜೋಳ ತೆಗೆದು ಹಾಕಲು ಮುಂದಾಗಿದ್ದರು. ಆದರೆ ಈಗ ವಿಪರೀತ ಮಳೆಯಾಗಿ ನೂರಾರು ಎಕರೆ ಬೆಳೆ ನೀರಿನಲ್ಲಿ ಮುಳುಗಿದ್ದು ನೋವುಂಟು ಮಾಡಿದೆ. ಅವಳಿ ತಾಲೂಕಿನಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ದೆಹಲಿಯಿಂದ ನೇರವಾಗಿ ಹೊನ್ನಾಳಿಗೆ ಬಂದು ಹಾನಿಗೊಳಗಾದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇನೆ.
ನನಗೆ ರಾಜಕಾರಣಕ್ಕಿಂತ ಕ್ಷೇತ್ರದ ಜನರೇ ಮುಖ್ಯ. ಕ್ಷೇತ್ರದ ರೈತರ ಬದುಕು ಹಸನಾಗಬೇಕೆಂದು ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ ಎಂದು ತಿಳಿಸಿದರು. ಹಾನಿ ಬಗ್ಗೆ ಸಮೀಕ್ಷೆ ನಡೆಸಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
460 ಕೋಟಿ ರೂ. ವೆಚ್ಚದಲ್ಲಿ ಅವಳಿ ತಾಲೂಕಿನ ಕೆರೆ ತುಂಬಿಸುವ ಯೋಜನೆಗೆ ಈಗಾಗಲೆ ಟೆಂಡರ್ ಆಗಿದೆ. ಮಳೆಗಾಲ ಮುಗಿದ ನಂತರ ಕಾಮಗಾರಿ ಆರಂಭವಾಗಲಿದೆ ಎಂದ ರೇಣುಕಾಚಾರ್ಯ, ಕೆರೆಯಲ್ಲಿನ ಬಂಡುಗಳು ಸೇರಿದಂತೆ ಹೂಳೆತ್ತಲು ಹಣ ಮೀಡಲಿಡಲಾಗಿದೆ. ಮುಂದಿನ ದಿನಗಳಲ್ಲಿ ಕೆರೆಗಳನ್ನು ತುಂಬಿಸುವ ಕಾರ್ಯ ವೇಗ ಪಡೆದುಕೊಳ್ಳಲಿದೆ ಎಂದರು. ನ್ಯಾಮತಿ ತಾಲೂಕು ತಹಶೀಲ್ದಾರ್ ತನುಜಾ ಟಿ. ಸವದತ್ತಿ, ಉಪ ತಹಶೀಲ್ದಾರ್ ನಾಗರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿ ಕಾರಿಗಳು ಇದ್ದರು.