ದಾವಣಗೆರೆ: ಕೊರೊನಾ ಹಾವಳಿ, ಲಾಕ್ ಡೌನ್ ಕಾರಣಕ್ಕೆ ಪರೀಕ್ಷೆ ರದ್ದಾಗಿದ್ದರೂ ಪರೀಕ್ಷೆ ಬರೆಯದೇ ಇದ್ದರೂ ವಿದ್ಯಾರ್ಥಿ ಸಮುದಾಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ 2021-22ನೇ ಸಾಲಿನ ಪಿ.ಯು.ಸಿ ಫಲಿತಾಂಶ ಪ್ರಕಟವಾಗಿದೆ. ಜಿಲ್ಲೆಯಲ್ಲಿ ಶೇ. 100 ರಷ್ಟು ಫಲಿತಾಂಶ ದೊರೆತಿದೆ. ದ್ವಿತೀಯ ಪಿಯು ಪರೀಕ್ಷೆಗೆ 19,906 ಹೊಸ ವಿದ್ಯಾರ್ಥಿಗಳು, 1702 ಪುನರಾವರ್ತಿತ ವಿದ್ಯಾರ್ಥಿಗಳು, 2404 ಖಾಸಗಿ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.
ಕಲಾ ವಿಭಾಗದಲ್ಲಿ ನೋಂದಾಯಿತ 5445 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಹೊಸ ವಿದ್ಯಾರ್ಥಿಗಳು 4,446, ಪುನರಾವರ್ತಿತರು 799, ವಾಣಿಜ್ಯ ವಿಭಾಗದಲ್ಲಿ ಒಟ್ಟು 5276 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. 4034 ಹೊಸ ವಿದ್ಯಾರ್ಥಿಗಳು,742 ಪುನರಾವರ್ತಿತ ವಿದ್ಯಾರ್ಥಿಗಳು ಇದ್ದರು. ವಿಜ್ಞಾನ ವಿಭಾಗದಲ್ಲಿ ಒಟ್ಟು ನೋಂದಾಯಿತ ವಿದ್ಯಾರ್ಥಿಗಳು 8985. ಹೊಸ ವಿದ್ಯಾರ್ಥಿಗಳು 8122, ಪುನರಾವರ್ತಿತ 863 ವಿದ್ಯಾರ್ಥಿಗಳಿದ್ದರು.
ಕೊರೊನಾ, ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಜೀವನದ ಅತೀ ಪ್ರಮುಖ, ಮಹತ್ವದ ಪಿಯು ಪರೀಕ್ಷೆ ನಡೆಯಲಿಲ್ಲ. ತರಗತಿಗಳು ನಡೆಯದೇ ಇದ್ದರೂ ವಿದ್ಯಾರ್ಥಿಗಳು ಪರೀಕ್ಷೆಗೆ ಸಜ್ಜಾಗಿದ್ದರು. ಆದರೂ ಸರ್ಕಾರ ಪರೀಕ್ಷೆ ನಡೆಸದೆ ಪ್ರತಿ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿ, ಪ್ರಥಮ ಪಿಯು ಅಂಕಗಳ ಆಧಾರದಲ್ಲಿ ಫಲಿತಾಂಶ, ಗ್ರೇಡ್ ನೀಡುವ ನಿರ್ಧಾರಕ್ಕೆ ಬಂದಿದ್ದು, ಅದರಂತೆ ಫಲಿತಾಂಶ ಪ್ರಕಟಿಸಿದೆ.
ಕೆಲ ದಿನಗಳ ಹಿಂದೆ ಪಿಯು ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷಾ ಸಂಖ್ಯೆನೋಂದಣಿಗೆ ಅವಕಾಶ ಮಾಡಿಕೊಡಲಾಗಿತ್ತು. ಅದರಂತೆ ಅನೇಕ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು. ನೋಂದಣಿ ಮಾಡದೇ ಇದ್ದಂತಹವರಿಗೆ ಮಂಗಳವಾರ ಸಹ ನೋಂದಣಿಗೆ ಅವಕಾಶ ನೀಡಲಾಗಿತ್ತು. ಪರೀಕ್ಷೆ ಬರೆಯದೇ ಇದ್ದರೂ ವಿದ್ಯಾರ್ಥಿ ಸಮೂಹದಲ್ಲಿ ಫಲಿತಾಂಶದ ಬಗ್ಗೆ ತೀವ್ರ ಕುತೂಹಲ ಇತ್ತು. ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುನಲ್ಲಿ ಉತ್ತಮ ಅಂಕ ಪಡೆದವರು ಒಂದು ರೀತಿ ನಿರಾಳವಾಗಿದ್ದರೂ ಯಾವ ಗ್ರೇಡ್, ಎಷ್ಟು ಅಂಕ ಬರುತ್ತದೆ ಎಂದು ಕಾತುರತೆಯಲ್ಲಿದದರು.
ವಿದ್ಯಾರ್ಥಿಗಳು ಮಾತ್ರವಲ್ಲ ಪೋಷಕರು ಸಹ ಫಲಿತಾಂಶಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವುದು ಸಾಮಾನ್ಯವಾಗಿತ್ತು. ಎಸ್ಸೆಸ್ಸೆಲ್ಸಿ, ಪ್ರಥಮ ಪಿಯುನಲ್ಲಿ ಉತ್ತಮ ಅಂಕ ಪಡೆಯದೇ ಇದ್ದಂತಹ ವಿದ್ಯಾರ್ಥಿಗಳಲ್ಲಿ ದುಗುಡ ಇತ್ತು. ವೈದ್ಯಕೀಯ, ಇಂಜಿನಿಯರಿಂಗ್ ಇತರೆ ವೃತ್ತಿಪರ ಕೋರ್ಸ್ ಸೇರ ಬಯಸುವ ವಿದ್ಯಾರ್ಥಿಗಳಲ್ಲಿ ಫಲಿತಾಂಶ ಇನ್ನಿಲ್ಲದ ಕುತೂಹಲ ಮೂಡಿಸಿತ್ತು. ಕೆಲ ವಿದ್ಯಾರ್ಥಿಗಳು ಫಲಿತಾಂಶ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.